Menu

ಧ್ರುವ ಸರ್ಜಾ ವಿರುದ್ಧ ಮೂರು ಕೋಟಿ ರೂ. ವಂಚನೆ ದೂರಿತ್ತ ನಿರ್ಮಾಪಕ ರಾಘವೇಂದ್ರ ಹೆಗ್ಡೆ

3.15 ಕೋಟಿ ರೂ. ವಂಚಿಸಿರುವುದಾಗಿ ನಟ ಧ್ರುವ ಸರ್ಜಾ ವಿರುದ್ಧ ‘ಜಗ್ಗು ದಾದ’ ಸಿನಿಮಾದ ನಿರ್ದೇಶಕ ಹಾಗೂ ನಿರ್ಮಾಪಕ ರಾಘವೇಂದ್ರ ಹೆಗ್ಡೆ ಮುಂಬೈನ ಅಂಬೋಲಿ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾರೆ.  ಈ ದೂರು ಆಧರಿಸಿ ಎಫ್​ಐಆರ್ ದಾಖಲಾಗಿದೆ. ಬಡ್ಡಿ ಸೇರಿ ಆ ಹಣ ಈಗ 9 ಕೋಟಿ ರೂಪಾಯಿ ಆಗಿದೆ ಎಂದು ನಿರ್ಮಾಪಕ ಆರೋಪಿಸಿದ್ದಾರೆ.

2016ರಲ್ಲಿ ನನ್ನ ಮೊದಲ ಸಿನಿಮಾ (ಜಗ್ಗು ದಾದ) ಯಶಸ್ಸು ಕಂಡಿತು. ಧ್ರುವ ಸರ್ಜಾ ಅವರು ನನ್ನ ಕಚೇರಿಗೆ ಬಂದು ಸಿನಿಮಾ ಮಾಡುವ ಆಸಕ್ತಿ ತೋರಿಸಿದರು. 2016ರಿಂದ 2018ರವರೆಗೆ ಅವರು ಈ ವಿಚಾರದಲ್ಲಿ ತುಂಬಾನೇ ಆಸಕ್ತಿ ತೋರಿಸುತ್ತಿದ್ದರು. ದಿ ಸೋಲ್ಜರ್ ಹೆಸರಿನ ಸಿನಿಮಾದ ಸ್ಕ್ರಿಪ್ಟ್ ಕೂಡ ನೀಡಿದರು. ಸಿನಿಮಾ ಕಾಂಟ್ರ್ಯಾಕ್ಟ್ ಸಹಿ ಮಾಡುವುದಕ್ಕೂ ಮೊದಲು 3 ಕೋಟಿ ರೂಪಾಯಿ ಧ್ರುವ ಕೇಳಿದ್ದರು. ಅವರನ್ನು ನಂಬಿ ಹೆಚ್ಚಿನ ಬಡ್ಡಿದರದಲ್ಲಿ ಸಾಲ ಪಡೆದು ಹಣ ಹೊಂದಿಸಿ ಧ್ರುವಗೆ 3.15 ಕೋಟಿ ರೂಪಾಯಿ ನೀಡಿರುವುದಾಗಿ ದೂರಿನಲ್ಲಿ ವಿವರಿಸಲಾಗಿದೆ.
2019ರಲ್ಲಿ ಔಪಚಾರಿಕ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಚಿತ್ರೀಕರಣ ಜನವರಿ 2020ರಲ್ಲಿ ಪ್ರಾರಂಭವಾಗಿ ಜೂನ್ 2020ರೊಳಗೆ ಪೂರ್ಣಗೊಳ್ಳಬೇಕಿತ್ತು. ಹಣ ಪಡೆದ ನಂತರ ಧ್ರುವ ಅವಧಿ ವಿಸ್ತರಣೆ ಕೋರಿದರು. ನಂತರ ಕೋವಿಡ್‌ ಬಂದು ಲಾಕ್​ಡೌನ್ ಮುಗಿದರೂ ಅವರು ಪ್ರತಿಕ್ರಿಯಿಸಲಿಲ್ಲ. ಸ್ಕ್ರಿಪ್ಟ್ ರೈಟರ್‌ಗಳಿಗೂ ಧ್ರುವ ಹಣ ಕೊಡಿಸಿದ್ದರು. ಧ್ರುವ ಯೋಜನೆಯಿಂದ ಹಿಂದೆ ಸರಿದಿದ್ದು ಮಾತ್ರವಲ್ಲ, ಕರೆಗಳನ್ನು ಸ್ವೀಕರಿಸಿಲ್ಲ ಎಂದು ರಾಘವೇಂದ್ರ ಹೇಳಿದ್ದಾರೆ.

ಬಡ್ಡಿ ಸೇರಿ ಈ ಹಣ ಈಗ 9.58 ಕೋಟಿ ರೂಪಾಯಿ ಆಗಿದೆ ಎಂಬುದಕ್ಕೆ ರಾಘವೇಂದ್ರ ದೂರಿನೊಂದಿಗೆ ದಾಖಲೆ ನೀಡಿದ್ದಾರೆ.. ಈ ಆರೋಪ ಸಂಪೂರ್ಣ ಸುಳ್ಳು ಎಂದು ಧ್ರುವ ಮ್ಯಾನೇಜರ್ ಅಶ್ವಿನ್ ಸ್ಪಷ್ಟನೆ ನೀಡಿದ್ದಾರೆ. ‘ರಾಘವೇಂದ್ರ ಹೆಗ್ಡೆ ಮಾಡಿರುವ ಆರೋಪ ಸುಳ್ಳು. 2018ರಲ್ಲಿ ಸೋಲ್ಜರ್ ಸಿನಿಮಾ ಮಾಡಲು 3.15 ಕೋಟಿ ರೂಪಾಯಿ ಹಣ ನೀಡಿದ್ದರು. ನಂದಿನಿ ಎಂಟರ್​ಟೇನ್​ಮೆಂಟ್​ನಿಂದ 20 ಲಕ್ಷ ರೂಪಾಯಿ ಹಾಗೂ ರಾಘವೇಂದ್ರ ಕಡೆಯಿಂದ 2.95 ಲಕ್ಷ ರೂಪಾಯಿ ಬಂದಿತ್ತು. ನಂದಿನಿ ಸಂಸ್ಥೆ ಹಾಗೂ ರಾಘವೇಂದ್ರ ಅವರಿಗೆ ಏನೋ ಸಮಸ್ಯೆ ಆಗಿದ್ದರಿಂದ 20 ಲಕ್ಷ ರೂಪಾಯಿ ಹಿಂದಿರುಗಿಸಿದ್ದೆವು. ಉಳಿದ ಹಣಕ್ಕೆ ಒಂದು ಸಿನಿಮಾ ಮಾಡಬೇಕಿತ್ತು. ನಾಲ್ಕೂವರೆ ವರ್ಷ ಆದಮೇಲೆ ಸಿನಿಮಾ ಸ್ಕ್ರಿಪ್ಟ್​ನ ಮೊದಲಾರ್ಧ ಕಳುಹಿಸಿದರು. ದ್ವೀತಿಯಾರ್ಧ ಬಂದಿರಲಿಲ್ಲ. ಒಂದು ದಿನ ಬಂದು ಸೋಲ್ಜರ್ ಸಿನಿಮಾ ಮಾಡೋದು ಬೇಡ, ಬಜೆಟ್ ಜಾಸ್ತಿ ಆಗುತ್ತದೆ. ಮಾಡಿದರೂ ಕನ್ನಡದಲ್ಲಿ ಬೇಡ, ತೆಲುಗು ಅಥವಾ ಹಿಂದಿಯಲ್ಲಿ ಮಾಡೋಣ ಎಂದು ಹೇಳಿದರು ಎಂಬುದು ಅಶ್ವಿನ್ ವಾದ. ಈ ಬೇಡಿಕೆಗೆ ಧ್ರುವ ಒಪ್ಪಿಲ್ಲ. ಕನ್ನಡದಲ್ಲೇ ಸಿನಿಮಾ ಮಾಡಬೇಕು ಎಂದು ಪಟ್ಟು ಹಿಡಿದರು. ಅಕ್ಟೋಬರ್​ನಿಂದ ಡೇಟ್ಸ್ ಬೇಕು ಎಂದು ರಾಘವೇಂದ್ರ ಕೇಳಿದರು. ನಾವು ಇದಕ್ಕೆ ರೆಡಿ ಇದ್ದೆವು ಎಂದು ಅಶ್ವಿನ್‌ ತಿಳಿಸಿದ್ದಾರೆ.

ನಾವು ಹಣ ಕೊಡೋದಿಲ್ಲ ಎಂದು ಯಾವಾಗಲೂ ಹೇಳಿಲ್ಲ. ಕೋರ್ಟ್​ಗೆ ಹೋಗಿದ್ದಾರೆ. ಎಲ್ಲವೂ ಕೋರ್ಟ್​​ನಲ್ಲಿ ಇತ್ಯರ್ಥ ಆಗಲಿದೆ ಎಂದು ಧ್ರುವ ಮ್ಯಾನೇಜರ್ ಅಶ್ವಿನ್‌ ಹೇಳಿದ್ದಾರೆ.

Related Posts

Leave a Reply

Your email address will not be published. Required fields are marked *