Menu

540 ಅರಣ್ಯ ರಕ್ಷಕರ ನೇಮಕ ಪ್ರಕ್ರಿಯೆ ಪ್ರಗತಿ: ಸಚಿವ ಖಂಡ್ರೆ

ಈಗಾಗಲೇ 310 ಅರಣ್ಯ ವೀಕ್ಷಕರ ನೇಮಕ ಮಾಡಲಾಗಿದೆ. ಈಗ 540 ಅರಣ್ಯ ರಕ್ಷಕರ (ಗಾರ್ಡ್) ನೇಮಕ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಕೇಶವ್ ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದರು. ಆನೆ ತುಳಿತದಿಂದ ಸತ್ತವರಿಗೆ 20 ಲಕ್ಷ ಪರಿಹಾರ ಕೊಡುವಂತೆ ಬೇರೆ ಪ್ರಾಣಿಯಿಂದ ಸತ್ತವರಿಗೆ 20 ಲಕ್ಷ ಪರಿಹಾರ ಕೊಡಿ. ಹಾವು ಕಡಿತದಿಂದ ಸತ್ತವರಿಗೂ ಸರ್ಕಾರ ಪರಿಹಾರ ಕೊಡಬೇಕು. ಖಾಲಿ ಇರುವ ಹುದ್ದೆ ಭರ್ತಿ ಮಾಡಬೇಕು ಎಂದು ಕೇಶವ್‌ ಒತ್ತಾಯಿಸಿದರು.

ಸಚಿವ ಈಶ್ವರ್ ಖಂಡ್ರೆ ಉತ್ತರ ನೀಡಿ, ಕಾಡಾನೆ ದಾಳಿ, ಹುಲಿ ದಾಳಿ ಸೇರಿದಂತೆ ವನ್ಯಜೀವಿ ದಾಳಿಯಿಂದ ಮೃತಪಟ್ಟವರಿಗೆ ಪ್ರಸ್ತುತ 20 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ. ಹಾವು ಕಚ್ಚಿ ಮೃತಪಟ್ಟವರಿಗೆ ಕೃಷಿ ಇಲಾಖೆಯ ವತಿಯಿಂದ 2 ಲಕ್ಷ ರೂ. ಪರಿಹಾರ ಒದಗಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ ಸರ್ಕಾರ ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಪ್ರತ್ಯೇಕವಾಗಿ ಆನೆ ಕಾರ್ಯಪಡೆಯನ್ನು ಮಂಜೂರು ಮಾಡಲು ಸೂಚಿಸಲಾಗಿದ್ದು, 2-3 ದಿನಗಳಲ್ಲಿ ಅಧಿಕೃತವಾಗಿ ಪ್ರಕಟಿಸಲಾಗುವುದು. ಈ ಪಡೆಯಲ್ಲಿ 32 ಸಿಬ್ಬಂದಿ ಇರುತ್ತಾರೆ. ಆನೆಗಳನ್ನು ಕಾಡಿಗೆ ಓಡಿಸುವ ಕಾರ್ಯದ ಜೊತೆಗೆ ಪುಂಡಾನೆ ಸೆರೆ ಕಾರ್ಯಾಚರಣೆಯಲ್ಲೂ ಸಹಕರಿಸಲಿದ್ದಾರೆ ಎಂದರು.

ಆನೆ ಕಾರಿಡಾರ್ ಮತ್ತು ಆವಾಸಸ್ಥಾನ ಸಂರಕ್ಷಣೆಗಾಗಿ ಅಧ್ಯಯನ ನಡೆಸಲು ಭಾರತೀಯ ವಿಜ್ಞಾನ ಮಂದಿರ ದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಪ್ರೊ. ಆರ್.ಸುಕುಮಾರ್ ತಂಡ ಅಧ್ಯಯನ ಆರಂಭಿಸಿದೆ ಎಂದು ತಿಳಿಸಿದರು. ಮಲೆ ಮಹದೇಶ್ವರ ಬೆಟ್ಟದ ವನ್ಯಜೀವಿಧಾಮದಲ್ಲಿ ಒಂದು ತಾಯಿ ಹುಲಿ ಮತ್ತು ನಾಲ್ಕು ಮರಿ ಹುಲಿಗಳು ವಿಷ ಪ್ರಾಶನದಿಂದ ಮೃತಪಟ್ಟ ಪ್ರಕರಣ ಸಂಬಂಧ ತಪ್ಪಿತಸ್ಥರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯಿದೆ ಅಡಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಹೊರಗುತ್ತಿಗೆ ಮುಂಚೂಣಿ ಸಿಬ್ಬಂದಿಗೆ ವೇತನ ಪಾವತಿಸುವಲ್ಲಿ ವಿಫಲರಾದ ಉಪ ವಲಯ ಅರಣ್ಯಾಧಿಕಾರಿ ಸೇರಿ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದ್ದು, ಮುಂದಿನ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದರು.

Related Posts

Leave a Reply

Your email address will not be published. Required fields are marked *