Thursday, December 18, 2025
Menu

ಕುಂದಾಪುರ ಇಎಸ್‌ಐ ಆಸ್ಪತ್ರೆ ವೈದ್ಯರ ನೇಮಕಕ್ಕೆ ಕ್ರಮ: ಸಂತೋಷ್‌ ಲಾಡ್‌

ಕುಂದಾಪುರ ತಾಲೂಕಿನ ಇಎಸ್‌ಐ ಆಸ್ಪತ್ರೆಗೆ ವೈದ್ಯರ ನೇಮಕಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್‌ ಲಾಡ್‌  ಭರವಸೆ ನೀಡಿದರು.  ಬೆಳಗಾವಿ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕಿರಣ್‌ ಕುಮಾರ್‌ ಕೊಡ್ಗಿ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು.

ಕುಂದಾಪುರ ತಾಲೂಕಿನ ಇಎಸಐ ಆಸ್ಪತ್ರೆಯಲ್ಲಿ ಇಬ್ಬರು ವೈದ್ಯರ ಹುದ್ದೆಯನ್ನು ಮಂಜೂರು ಮಾಡಲಾಗಿತ್ತು ಆದರೆ ೨೦೧೫ ರಿಂದ ಒಬ್ಬರೇ ಒಬ್ಬರು ಖಾಯಂ ವೈದ್ಯರು ಇಲ್ಲ. ಬೇರೆ ಕಡೆಯಿಂದ ನಿಯೋಜನೆ ಮೇರೆಗೆ ವೈದ್ಯರು ಕರ್ತವ್ಯ ನಿರ್ವಹಿಸು ತ್ತಾರೆ. ಇದರಿಂದ ಕಾರ್ಮಿಕರಿಗೆ ಸರಿಯಾದ ಚಿಕಿತ್ಸೆ ಸಿಗದೆ ತೊಂದರೆಯಾಗಿದೆ ಎಂದು ಕಿರಣ್‌ ಕುಮಾರ್‌  ಹೇಳಿದರು.

ಕುಂದಾಪುರದ ಇಎಸ್‌ಐ ಆಸ್ಪತ್ರೆಯಲ್ಲಿ ನಿಯೋಜನೆ ಮೇಲೆ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಖಾಯಂ ವೈದ್ಯರು ಬೇಕು ಎಂಬ ಬೇಡಿಕೆ ಬಗ್ಗೆ ಪರಿಶೀಲನೆ ಮಾಡಲಾಗುವುದು. ಮೂರು ವಾರದಲ್ಲಿ ತಾತ್ಕಾಲಿಕ ವೈದ್ಯರ ನೇಮಕ ಮಾಡಲಾಗುವುದು ಎಂದು  ಸಚಿವ ಲಾಡ್‌ ಪ್ರತಿಕ್ರಿಯಿಸಿದರು.

ಆಸ್ಪತ್ರೆ ಹೆಸರು ಬಿಟ್ಟಿದ್ದರೆ ಕ್ರಮ: ಇಎಸ್‌ಐ ಫಲಾನುಭವಿಗಳಿಗೆ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳ ಪಟ್ಟಿಯಲ್ಲಿ ಮಣಿಪಾಲದ ಕಸ್ತೂರಬಾ ಆಸ್ಪತ್ರೆ ಹಾಗೂ ಕುಂದಾಪುರದ ಆದರ್ಶ ಆಸ್ಪತ್ರೆ ಬಿಟ್ಟು ಹೋಗಿದೆ ಎಂಬ ಕಿರಣ್‌ ಕುಮಾರ್‌ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಲಾಡ್‌ ಅವರು, ಕಸ್ತೂರಬಾ, ಆದರ್ಶ ಆಸ್ಪತ್ರೆ ಬಿಟ್ಟು ಹೋಗಿದ್ದರೆ ನಿಯಮಾವಳಿ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಖಾಸಗಿ ಆಸ್ಪತ್ರೆಗಳ ಹೊಂದಾಣಿಕೆ ಅವಧಿಯನ್ನು ಎರಡು ವರ್ಷಕ್ಕೆ ವಿಸ್ತರಿಸಿದ್ದಕ್ಕೆ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಅವರಿಗೆ ಕಿರಣ್‌ ಕುಮಾರ್‌ ಅವರು ಧನ್ಯವಾದಗಳನ್ನು ತಿಳಿಸಿದರು.

ಕಾರ್ಮಿಕ ಕಲ್ಯಾಣ ನಿಧಿ ತಿದ್ದುಪಡಿ ವಿಧೇಯಕ ಅನುಮೋದನೆ

ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ತಿದ್ದುಪಡಿ ವಿಧೇಯಕ ಹಾಗೂ 2025ನೇ ಸಾಲಿನ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ಕ್ಷೇಮಾಭಿವೃದ್ಧಿ ತಿದ್ದುಪಡಿ ವಿಧೇಯಕಗಳಿಗೆ ವಿಧಾನ ಪರಿಷತ್‌ನಲ್ಲಿ ಇಂದು ಅನುಮೋದನೆ ದೊರೆಯಿತು.

ವಿಧಾನಸಭೆಯಲ್ಲಿ ಅಂಗೀಕೃತ ರೂಪದಲ್ಲಿದ್ದ ಈ ತಿದ್ದುಪಡಿಗಳನ್ನು ವಿಧಾನ ಪರಿಷತ್‌ನಲ್ಲಿ ಪರ್ಯಾವಲೋಚನೆಗೆ ಮಂಡಿಸಲಾಗಿತ್ತು. ಕಾರ್ಮಿಕ ಸಚಿವರಾದ ಸಂತೋಷ್‌ ಲಾಡ್‌ ಅವರು ಪ್ರಸ್ತಾವವನ್ನು ಮಂಡಿಸಿ ತಿದ್ದುಪಡಿಯ ಅಂಶಗಳನ್ನು ಸದನಕ್ಕೆ ವಿವರಿಸಿದರು.

ವಿಧೇಯಕದ ಬಗ್ಗೆ ಅಭಿಪ್ರಾಯ ಮಂಡನೆ: ಪರಿಷತ್‌ ಸದಸ್ಯರಾದ ಕೇಶವ ಪ್ರಸಾದ್‌, ರಮೇಶ್‌ ಬಾಬು, ಐವನ್‌ ಡಿಸೋಜ, ಕೆ.ಎಸ್‌. ನವೀನ್‌, ಡಾ. ಧನಂಜಯ ಸರ್ಜಿ, ಗೋವಿಂದರಾಜು, ಎನ್‌ ರವಿಕುಮಾರ್‌, ಟಿ.ಎ. ಶರವಣ, ಸಿ.ಟಿ. ರವಿ ಅವರು ಮಾತನಾಡಿದರು. ಕೆಲವು ಅಂಶಗಳ ಬಗ್ಗೆ ಸ್ಪಷ್ಟೀಕರಣಗಳ ಅಗತ್ಯವಿದೆ ಎಂದು ಹೇಳಿದರು. ಇದಕ್ಕೆ ಉತ್ತರಿಸಿದ ಸಚಿವ ಲಾಡ್‌ ಅವರು, ಸದಸ್ಯರ ಅಭಿಪ್ರಾಯಗಳಿಗೆ ಸ್ಪಷ್ಟೀಕರಣ ನೀಡಿ, ಹೆಚ್ಚಿನ ಜನರಿಗೆ ಲಾಭ ಆಗೋ ರೀತಿ ಈ ಮಸೂದೆ ತರಲಾಗಿದೆ ಎಂದು ಸದನಕ್ಕೆ ವಿವರಿಸಿದರು. ನಂತರ ವಿಧೇಯಕವು ಅಂಗೀಕೃತಗೊಂಡಿತು.

Related Posts

Leave a Reply

Your email address will not be published. Required fields are marked *