ನಿಷೇಧಿತ ಸಿಖ್ಸ್ ಫಾರ್ ಜಸ್ಟೀಸ್ನ ಮುಖ್ಯಸ್ಥ ಕೆನಡಾದಲ್ಲಿರುವ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ಗೆ ಸಂಬಂಧಿಸಿದ ಸ್ಲೀಪರ್ ಸೆಲ್ನೊಂದಿಗೆ ಸಂಪರ್ಕವಿರುವ ಇಬ್ಬರು ಉಗ್ರರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಗಣರಾಜ್ಯೋತ್ಸವಕ್ಕೆ ಮೊದಲು ದೆಹಲಿಯಲ್ಲಿ ಖಲಿಸ್ತಾನ್ ಪರ ಘೋಷಣೆಗಳನ್ನು ಬರೆದು ಸಾರ್ವಜನಿಕ ಸುವ್ಯವಸ್ಥೆಯನ್ನು ಭಂಗಗೊಳಿಸುವ ಪ್ರಯತ್ನ ನಡೆದಿತ್ತು. ಈ ಕುರಿತು ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಬಂಧಿತ ಖಲಿಸ್ತಾನಿ ಸ್ಲಿಪರ್ಸೆಲ್ನ ಉಗ್ರರು ಗಣರಾಜ್ಯೋತ್ಸವಕ್ಕೆ ಕೆಲವೇ ದಿನಗಳ ಮೊದಲು ದೆಹಲಿಯ ಎರಡು ವಿಭಿನ್ನ ಸ್ಥಳಗಳಲ್ಲಿ ವಿವಾದಾತ್ಮಕ ಸಾಲುಗಳನ್ನು ಬರೆದಿದ್ದು, ಖಲಿಸ್ತಾನಿಗಳಿಗೆ ಬೆಂಬಲವಾಗಿ ಪ್ರಚೋದನಾಕಾರಿ ಬರಹ ಬರೆಯುವ ಮೂಲಕ ದೇಶದಲ್ಲಿ ಶಾಂತಿಭಂಗ ಕೆಲಸ ಮಾಡಿದ್ದಾರೆ. ಪೊಲೀಸರು ಸದ್ಯ ಇಬ್ಬರನ್ನು ಬಂಧಿಸಿದ್ದು, ತನಿಖೆ ವೇಳೆ ಭಯಾನಕ ವಿಚಾರಗಳು ಹೊರ ಬಂದಿವೆ. ಈ ಕೃತ್ಯದ ಪಿತೂರಿ ಕೆನಡಾದಿಂದಲೇ ಆಗಿದ್ದು, ಪನ್ನುನ್ ಅವರ ಆಪ್ತ ಸಹಚರನೊಬ್ಬ ದೆಹಲಿಯಲ್ಲಿ ಯೋಜನೆ ಕಾರ್ಯಗತಗೊಳಿಸಲು ಬಲ್ಜಿಂದರ್ ಮತ್ತು ರೋಹಿತ್ ಅಲಿಯಾಸ್ ಕೀರತ್ ಎಂಬ ಈ ಇಬ್ಬರನ್ನು ನೇಮಿಸಿಕೊಂಡಿದ್ದ ಎಂಬುದು ತಿಳಿದುಬಂದಿದೆ.
ಬಂಧಿತರು ದೆಹಲಿ ತಿಲಕ್ ನಗರ ನಿವಾಸಿಗಳಾಗಿದ್ದು, ಬಲ್ಜಿಂದರ್ ಆಂಬುಲೆನ್ಸ್ ಚಾಲಕ, ರೋಹಿತ್ ಈತನ ಸಹಚರ. ಇವರಿಬ್ಬರೂ ಗಣರಾಜ್ಯೋತ್ಸವಕ್ಕೂ ಮೊದಲು ಕೆನಡಾಗೆ ಹೋಗಿ ಪನ್ನುನ್ ಜೊತೆ ನೇರ ಸಂಪರ್ಕ ಮಾಡಿದ್ದಾರೆ. ಪನ್ನುನ್ ಇವರಿಗೆ ದೆಹಲಿಯಲ್ಲಿ ʼಖಾಲಿಸ್ತಾನ್ ಜಿಂದಾಬಾದ್ʼ ಎಂದು ಬರೆಯಲು 2 ಲಕ್ಷ ರೂ. ಆಮಿಷವೊಡ್ಡಿದ್ದಾನೆ ಎಂದು ಮೂಲಗಳು ತಿಳಿಸಿವೆ.


