ಮುಂಬೈ: ವಿಶ್ವಕಪ್ ಗೆದ್ದು ಇತಿಹಾಸ ಬರೆದ ಭಾರತ ಮಹಿಳಾ ತಂಡಕ್ಕೆ ಬಿಸಿಸಿಐ ಬೃಹತ್ ಮೊತ್ತದ ಬಹುಮಾನ ಘೋಷಿಸಿದೆ.
ಭಾನುವಾರ ಮುಂಬೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 52 ರನ್ ಗಳ ಭಾರೀ ಅಂತರದಿಂದ ಮಣಿಸಿದ ಭಾರತ ತಂಡ ಏಕದಿನ ವಿಶ್ವಕಪ್ ಗೆದ್ದುಕೊಂಡಿತು. ಎರಡು ಬಾರಿ ರನ್ನರ್ ಅಪ್ ಆಗಿದ್ದ ಭಾರತ ತಂಡ ಇದೇ ಮೊದಲ ಬಾರಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿತು.
ಭಾರತ ಮಹಿಳಾ ತಂಡದ ಸಾಧನೆ ಬೆನ್ನಲ್ಲೇ ಬಿಸಿಸಿಐ ಭಾರತ ತಂಡದ ಆಟಗಾರ್ತಿಯರು, ಕೋಚ್ ಹಾಗೂ ಸಹಾಯಕ ಸಿಬ್ಬಂದಿಗೆ ಸೇರಿ ಒಟ್ಟಾರೆ 51 ಕೋಟಿ ರೂ. ಬಹುಮಾನ ಮೊತ್ತ ಘೋಷಿಸಿದೆ.
ಬಿಸಿಸಿಐ ಪ್ರಧಾನ ಕಾರ್ಯದರ್ಶಿ ದೇವಜಿತ್ ಸೈಕಿಯಾ ಬಹುಮಾನ ಮೊತ್ತ ಘೋಷಿಸಿದ್ದು, ಭಾರತ ಮಹಿಳಾ ತಂಡದ ಈ ಸಾಧನೆಯಿಂದ ಭಾರತೀಯ ಕ್ರಿಕೆಟ್ ಮತ್ತೊಂದು ಎತ್ತರ ತಲುಪಿದೆ ಎಂದಿದ್ದಾರೆ.
ಭಾರತ ಮಹಿಳಾ ತಂಡದ ಸಾಧನೆಯನ್ನು ಕ್ರಿಕೆಟ್ ದಿಗ್ಗಜರು ಕೊಂಡಾಡಿದ್ದು, 1983ರ ವಿಶ್ವಕಪ್ ಗೆಲುವಿಗೆ ಹೋಲಿಸಿದ್ದಾರೆ. ಇದು ಭಾರತೀಯ ಕ್ರಿಕೆಟ್ ನ ಪ್ರಮುಖ ಮೈಲುಗಲ್ಲು ಎಂದು ಬಣ್ಣಿಸಿದ್ದಾರೆ.


