ಮೊಹಾಲಿ: ಪಂಜಾಬ್ ಕಿಂಗ್ಸ್ ತಂಡದ ಆರಂಭಿಕ ಪ್ರಿಯಾಂಶ್ ಆರ್ಯ ಶತಕ ಸಿಡಿಸಿ ಐಪಿಎಲ್ ಟಿ-20ಯಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ.
ಮೊಹಾಲಿಯಲ್ಲಿ ಮಂಗಳವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿದ ಪ್ರಿಯಾಂಶ್ ಆರ್ಯಾ 18ನೇ ಆವೃತ್ತಿಯ ಐಪಿಎಲ್ ನಲ್ಲಿ ಹಾಗೂ ವೈಯಕ್ತಿಕವಾಗಿ ಚೊಚ್ಚಲ ಶತಕ ಸಿಡಿಸಿದ ದಾಖಲೆ ಬರೆದಿದ್ದಾರೆ. ಅಲ್ಲದೇ ಅನ್ ಕ್ಯಾಪ್ಡ್ ಆಟಗಾರನಾಗಿ ಅತ್ಯಂತ ವೇಗದ ಶತಕ ಸಿಡಿಸಿದ ಮತ್ತೊಂದು ದಾಖಲೆಗೆ ಪಾತ್ರರಾದರು.
ಪಂಜಾಬ್ ತಂಡ ಒಂದರ ಹಿಂದೆ ಒಂದು ವಿಕೆಟ್ ಕಳೆದುಕೊಳ್ಳುತ್ತಿದ್ದರೂ ಎದೆಗುಂದದ ಪ್ರಿಯಾಂಶ್ 39 ಎಸೆತಗಳಲ್ಲಿ 7 ಬೌಂಡರಿ 9 ಸಿಕ್ಸರ್ ಸಿಡಿಸಿ ಶತಕ ಪೂರೈಸಿದರು. ಈ ಮೂಲಕ 40 ಎಸೆತದೊಳಗೆ ಅತ್ಯಂತ ವೇಗವಾಗಿ ಶತಕ ಪೂರೈಸಿದ ನಾಲ್ಕನೇ ಆಟಗಾರ ಎನಿಸಿಕೊಂಡರು.
ಇದಕ್ಕೂ ಮುನ್ನ ಆರ್ ಸಿಬಿ ಪರ ಕ್ರಿಸ್ ಗೇಲ್ 30 ಎಸೆತಗಳಲ್ಲಿ ಶತಕ ದಾಖಲಿಸಿ ಮೊದಲ ಸ್ಥಾನದಲ್ಲಿದ್ದರೆ, ನಂತರದ ಸ್ಥಾನದಲ್ಲಿ ಯೂಸುಫ್ ಪಠಾಣ್ ಇದ್ದಾರೆ.
ಪಂಜಾಬ್ ತಂಡ 83 ರನ್ ಗೆ 5 ವಿಕೆಟ್ ಕಳೆದುಕೊಂಡು ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಗೆ ಒಳಗಾಗಿತ್ತು. ಆದರೆ ಪ್ರಿಯಾಂಶ್ ಆರಂಭದಿಂದಲೇ ಹೊಡಿಬಡಿ ಆಟದಿಂದ ತಂಡವನ್ನು ಆಧರಿಸಿದರು. ಶಶಾಂಕ್ ಸಿಂಗ್ ಜೊತೆ 6ನೇ ವಿಕೆಟ್ ಗೆ 71 ರನ್ ಜೊತೆಯಾಟ ನಿಭಾಯಿಸಿದರು.
ಪ್ರಿಯಾಂಶ್ ಸಾಹಸದಿಂದ ಪಂಜಾಬ್ ಕಿಂಗ್ಸ್ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 219 ರನ್ ಪೇರಿಸಿತು. ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಇತಿಹಾಸದಲ್ಲೇ 180ಕ್ಕಿಂತ ಅಧಿಕ ಮೊತ್ತ ಚೇಸ್ ಮಾಡಿಲ್ಲ.