ಪ್ರಿಯಾಂಕ್ ಖರ್ಗೆ ರಾಜ್ಯದ ಉಪಮುಖ್ಯಮಂತ್ರಿಯಾಗಲಿದ್ದಾರೆ ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದ್ದಾರೆ. ಸಿಎಂ ಬದಲಾವಣೆ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಪ್ರಿಯಾಂಕ್ ಖರ್ಗೆ ಉಪಮುಖ್ಯಮಂತ್ರಿ ಆಗುವ ಬಗ್ಗೆ ದೆಹಲಿಯಲ್ಲಿ ಎಐಸಿಸಿ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಈ ಪ್ಲ್ಯಾನ್ ನಡೆದಿದೆ ಎಂದರು.
ಒಂದು ವೇಳೆ ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಆದಲ್ಲಿ ವಾಲ್ಮೀಕಿ ಸಮುದಾಯಕ್ಕೆ ಬಲ ಬಂದಂತಾಗುತ್ತದೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರವು ವಿನಾಕಾರಣ ಆರ್‌ಎಸ್‌ಎಸ್ ವಿಚಾರದಲ್ಲಿ ದ್ವೇಷದ ರಾಜಕೀಯ ಮಾಡುತ್ತಿದೆ. ಆರ್‌ಎಸ್‌ಎಸ್‌ನಲ್ಲಿ ಮುಕ್ತವಾಗಿ ಭಾಗವಹಿಸಲು ಕೇಂದ್ರ ಸರ್ಕಾರ ಗೆಜೆಟ್ ಮೂಲಕ ಅವಕಾಶ ನೀಡಿದರೂ, ಕಾಂಗ್ರೆಸ್ ಇದರಲ್ಲಿ ರಾಜಕೀಯ ಮಾಡುತ್ತಿದೆ. ರಾಜ್ಯದಲ್ಲಿ ತುರ್ತು ಪರಿಸ್ಥಿತಿಯಿದೆ ಎಂದು ಶ್ರೀರಾಮುಲು ಕಿಡಿಕಾರಿದ್ದಾರೆ.
ಕಾಂಗ್ರೆಸ್ ಸರ್ಕಾರವು ಆಡಳಿತ ವೈಫಲ್ಯಗಳನ್ನು ಮರೆಮಾಚಲು ಆರ್‌ಎಸ್‌ಎಸ್ ವಿಚಾರವನ್ನು ಹುಟ್ಟುಹಾಕಿರುವುದಾಗಿ ಆರೋಪಿಸಿದ್ದಾರೆ. ವಿಧಾನಸೌಧದಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದವರನ್ನು ಕಾಂಗ್ರೆಸ್ ರಾಜ್ಯಸಭೆ ಮತ್ತು ಲೋಕಸಭೆಗೆ ಸದಸ್ಯರನ್ನಾಗಿ ಮಾಡುತ್ತಿದೆ. ಭಾರತ ಮಾತೆಗೆ ಜೈ ಎನ್ನುವವರನ್ನು ಅಥವಾ ಆರ್‌ಎಸ್‌ಎಸ್ ಜಿಂದಾಬಾದ್ ಎನ್ನುವವರ ವಿರುದ್ಧ ಕ್ರಮ ಕೈಗೊಳ್ಳುತ್ತದೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್‌ನ ಮನಸ್ಥಿತಿ ಏನು, ಅಧಿಕಾರಕ್ಕಾಗಿ ದೇಶದ್ರೋಹಿಗಳೊಂದಿಗೆ ರಾಜಿಯಾಗುವ ಮತ್ತು ದೇಶದ್ರೋಹಿಗಳಿಗೆ ಬೆಂಬಲ ನೀಡುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಅಧಿಕಾರಕ್ಕೆ ಬಂದಾಗಿಂದ ಅದರ ನಡೆಗಳನ್ನು ಗಮನಿಸಿದರೆ ಇದು ತಿಳಿಯುತ್ತದೆ. ಕಾಂಗ್ರೆಸ್ ಸರ್ಕಾರ ಭಾರತೀಯ ಸಂಸ್ಕೃತಿಯ ಬಗ್ಗೆ ಮಾತನಾಡುವ ಯಾವ ನೈತಿಕತೆಯನ್ನು ಹೊಂದಿಲ್ಲ ಎಂದು ಟೀಕಿಸಿದರು.