ಶಿವಮೊಗ್ಗ : ಸೋಗಾನೆಯ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಎರಡು ಗುಂಪುಗಳ ಮಧ್ಯೆ ಜಗಳವಾಗಿದ್ದು, ಕೆಲವು ಕೈದಿಗಳ ಮೇಲೆ ಹಲ್ಲೆ ನಡೆದಿದೆ. ಶರಾವತಿ ವಿಭಾಗದ ಸೊಹೈಲ್ ಅಹ್ಮದ್ ಮತ್ತು ಮೊಹ್ಮದ್ ಜುನೈದ್ ಎಂಬುವವರು ಟವರ್ ವಿಭಾಗದ ಬಳಿ ಬಂದಾಗ ಅನ್ವರ್ ಎಂಬಾತನೊಂದಿಗೆ ಮಾತಿನ ಚಕಮಕಿ ನಡೆದಿದೆ.
ನಂತರ ಅನ್ವರ್ ಮತ್ತು ಆತನ ಸಹಚರರು ಭದ್ರಾ ವಿಭಾಗದ ಕೊಠಡಿಗೆ ತೆರಳಿ ಸೊಹೈಲ್ ಮತ್ತು ಜುನೈದ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಗಾಯಗೊಂಡ ಕೈದಿಗಳನ್ನು ಚಿಕಿತ್ಸೆಗಾಗಿ ಕಾರಾಗೃಹದ ಆಸ್ಪತ್ರೆಗೆ ದಾಖಲಿಸಿದಾಗ, ಆರೋಪಿಗಳಾದ ತನ್ವೀರ್, ಅನ್ವರ್, ಸೈಯದ್ ಇಷಾಖ್ ಮತ್ತು ವಸೀಂ ಅಕ್ರಂ ಆಸ್ಪತ್ರೆಯ ಮುಂಭಾಗಕ್ಕೆ ಬಂದು ಒಳಗೆ ನುಗ್ಗಲು ಪ್ರಯತ್ನಿಸಿದ್ದಾರೆ.
ಈ ಸಂದರ್ಭ ಬಂದಿ ಅನ್ವರ್ ಎಂಬಾತ ಹೂವಿನ ಕುಂಡದಿಂದ ಹೊಡೆಯಲು ಯತ್ನಿಸಿ, ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ. ತಕ್ಷಣವೇ ಮಧ್ಯಪ್ರವೇಶಿಸಿದ ಕಾರಾಗೃಹದ ಅಧಿಕಾರಿಗಳು ಮತ್ತು ಸಿಬ್ಬಂದಿ ಪರಿಸ್ಥಿತಿ ನಿಯಂತ್ರಿಸಿ ಅಹಿತಕರ ಘಟನೆ ನಡೆಯದಂತೆ ತಡೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಅಧೀಕ್ಷಕಿ ಪ್ರೀತಿ ಆರ್. ಅವರು ನೀಡಿದ ದೂರಿನ ಮೇರೆಗೆ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನ್ವೀರ್, ಅನ್ವರ್, ಸೊಹೈಲ್ ಅಹ್ಮದ್, ಮೊಹ್ಮದ್ ಜುನೈದ್, ಮೊಹ್ಮದ್ ಇಮ್ರಾನ್, ಸೈಯದ್ ಇಷಾಖ್, ವಸೀಂ ಅಕ್ರಂ ಮತ್ತು ಫರ್ದೀನ್ ಶೇಖ್ ಎಂಬವವರು ವಿರುದ್ದ ಪ್ರಕರಣ ದಾಖಲಾಗಿದೆ.


