Saturday, December 06, 2025
Menu

ಕಾರವಾರ ಜೈಲಿನಲ್ಲಿ ಕೈದಿಗಳ ಅಟ್ಟಹಾಸ: ಜೈಲರ್, ಪೊಲೀಸರ ಮೇಲೆ ಹಲ್ಲೆ!

karwar jail police

ತಂಬಾಕು, ಸಿಗರೇಟು ಮುಂತಾದ ಮಾದಕ ವಸ್ತುಗಳಿಗಾಗಿ ಇಬ್ಬರು ಕೈದಿಗಳು ಜೈಲರ್ ಸೇರಿದ ಮೂವರು ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಘಟನೆ ಕಾರವಾರದಲ್ಲಿ ನಡೆದಿದೆ.

ಕಾರವಾರ ಜಿಲ್ಲಾ ಕಾರಾಗೃಹದಲ್ಲಿ ಜಿಲ್ಲಾಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳಿಬ್ಬರು ಶನಿವಾರ ಕಾರಾಗೃಹ ಅಧಿಕಾರಿ, ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ.

ಮಂಗಳೂರು ಮೂಲದ ರೌಡಿ ಶೀಟರ್‌ಗಳಾದ ಮೊಹ್ಮದ್ ಅಬ್ದುಲ್ ಫಯಾನ್ ಹಾಗೂ ಕೌಶಿಕ ನಿಹಾಲ್ ಹಲ್ಲೆ ನಡೆಸಿದ ಆರೋಪಿಗಳು.

‘ಡಕಾಯತಿ ಸೇರಿದಂತೆ 12ಕ್ಕೂ ಹೆಚ್ಚು ಗಂಭೀರ ಪ್ರಕರಣಗಳಲ್ಲಿ ಆರೋಪಿಗಳಾಗಿರುವ ಇವರನ್ನು, ಮಂಗಳೂರು ಕಾರಾಗೃಹದಲ್ಲಿ ಕೈದಿಗಳ ಸಂಖ್ಯೆ ಹೆಚ್ಚಾದ ಕಾರಣ ಕಾರವಾರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿತ್ತು.

ಮಾದಕ ವಸ್ತು ಒದಗಿಸುವಂತೆ ಗಲಾಟೆ ಮಾಡಿದ ಕೈದಿಗಳು ಪರಸ್ಪರ ಹಲ್ಲೆ ನಡೆಸಿಕೊಂಡಿದ್ದಾರೆ. ಈ ವೇಳೆ ಜಗಳ ಬಿಡಿಸಲು ಬಂದ ಜೈಲರ್ ಕಲ್ಲಪ್ಪ ಗಸ್ತಿ, ಇತರ ಮೂವರು ಸಿಬ್ಬಂದಿ ಮೇಲೆ ಹಲ್ಲೆಗೈದಿದ್ದಾರೆ ಎಂದು ಕಾರಾಗೃಹ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಾರಾಗೃಹದಲ್ಲಿ ಕದ್ದುಮುಚ್ಚಿ ಮಾದಕ ದ್ರವ್ಯಗಳನ್ನು ಕೈದಿಗಳು ಪಡೆದುಕೊಳ್ಳುತ್ತಿದ್ದರು. ಕೆಲ ದಿನಗಳಿಂದ ಇದಕ್ಕೆ ಕಡಿವಾಣ ಬಿದ್ದಿದೆ. ಇದೇ ಕಾರಣಕ್ಕೆ ಮಂಗಳೂರು ಕಾರಾಗೃಹದಿಂದ ಇಲ್ಲಿಗೆ ಸ್ಥಳಾಂತರಗೊಂಡಿದ್ದ ಕೈದಿಗಳಿಬ್ಬರು ಗಲಾಟೆ ಮಾಡಿದ್ದಾರೆ ಎಂದೂ ಹೇಳಿದರು.

ಇತ್ತೀಚೆಗೆ ಜೈಲಿಗೆ ಭೇಟಿ ನೀಡಿದ್ದ ವೇಳೆ ಹಿರಿಯ ಅಧಿಕಾರಿಗಳು ವಿಚಾರಣಾಧೀನ ಕೈದಿಗಳಿಂದ ತಂಬಾಕು, ಸಿಗರೇಟು ಮುಂತಾದ ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿದ್ದರು. ಈ ಇಬ್ಬರು ಕೈದಿಗಳು ಈ ಹಿಂದೆಯೂ ಮಂಗಳೂರು ಜೈಲಾಧಿಕಾರಿಯಾಗಿದ್ದ ಶಶಿಕುಮಾರ್ ಅವರ ಮೇಲೆಯೂ ತಟ್ಟೆ ಎಸೆದು ಉದ್ದಟತನ ಮೆರೆದಿದ್ದರು.

Related Posts

Leave a Reply

Your email address will not be published. Required fields are marked *