ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಮಧ್ಯೆ ಮಾರಾಮಾರಿ ನಡೆದಿದ್ದು, ಒಬ್ಬನ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಈ ಘಟನೆ ಶುಕ್ರವಾರ ಸಂಜೆ ನಡೆದಿದ್ದು, ತಡವಾಗಿ ಸುದ್ದಿಯಾಗಿದೆ.
ಕ್ವಾರಂಟೈನ್ ಸೆಲ್ನೊಳಗೆ ವಿಚಾರಣಾಧೀನ ಖೈದಿ ಅನೀಲ್ ಕುಮಾರ್ ಮೇಲೆ ಭರತ್ ಮತ್ತು ಗ್ಯಾಂಗ್ ಆಯುಧದೊಂದಿಗೆ ದಾಳಿ ನಡೆಸಿದ್ದು, ಈ ದಾಳಿಯಿಂದ ಅನೀಲ್ ಗಂಭೀರವಾಗಿ ಗಾಯಗೊಂಡಿದ್ದಾನೆ. ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಎಫ್‌ಐಆರ್ ದಾಖಲಾಗಿದೆ. ಕೇಂದ್ರ ಕಾರಾಗೃಹದ ಕ್ವಾರಂಟೈನ್ ಜೈಲಿನ ಬ್ಯಾರಕ್-2, ಹಿಂಭಾಗದ ಭಾಗ-2, ಕೊಠಡಿ 6ರಲ್ಲಿ ಈ ದಾಳಿ ನಡೆದಿದೆ.
ಅನೀಲ್ ಕುಮಾರ್ ಟವರ್-1 ವಿಭಾಗದಿಂದ ಪ್ರಕರಣವೊಂದರ ವಿಚಾರಣೆಗೆ ವೀಡಿಯೊ ಕಾನ್ಫರೆನ್ಸಿಂಗ್ (ವಿಸಿ)ಗೆ ತೆರಳುತ್ತಿದ್ದ ಸಂದರ್ಭದಲ್ಲಿ ಇದೇ ಬ್ಯಾರಕ್‌ನ ಕೊಠಡಿ 2ರ ವಾಸಿಗಳಾದ ಭರತ್ ಮತ್ತು ಆತನ ಗುಂಪು ದಾಳಿ ನಡೆಸಿದೆ. ಗುಂಪಿನಲ್ಲಿ ಒಟ್ಟು ಎಂಟು ಮಂದಿ ಇದ್ದರು ಎನ್ನಲಾಗಿದೆ. ಅನೀಲ್ ಕುಮಾರ್‌ಗೆ ಗಂಭೀರ ಗಾಯಗಳಾಗಿದ್ದು, ಜೈಲಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.
ಪೊಲೀಸರು ಈಗಾಗಲೇ ತನಿಖೆಯನ್ನು ಆರಂಭಿಸಿದ್ದು, ದಾಳಿಯ ಹಿಂದಿನ ಕಾರಣ ಪತ್ತೆಹಚ್ಚಲು ಪ್ರಯತ್ನ ನಡೆಸುತ್ತಿದ್ದಾರೆ. ಈ ಘಟನೆಯು ಜೈಲಿನ ಆಡಳಿತದಲ್ಲಿ ಗಂಭೀರ ಲೋಪವನ್ನು ಸೂಚಿಸುತ್ತದೆ, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ರಾಜ್ಯದ ಅತಿದೊಡ್ಡ ಜೈಲುಗಳಲ್ಲಿ ಒಂದಾಗಿದ್ದು, 5,244 ಕೈದಿಗಳಿದ್ದಾರೆ. ಈ ಜೈಲಿನಲ್ಲಿ ಹಿಂದೆಯೂ ಅಕ್ರಮ ಚಟುವಟಿಕೆಗಳು, ಮೊಬೈಲ್ ಬಳಕೆ, ಮಾದಕ ವಸ್ತು ವ್ಯಾಪಾರ, ಮತ್ತು ರಾಜಾತಿಥ್ಯದ ಆರೋಪಗಳು ಕೇಳಿಬಂದಿವೆ. ಈ ಘಟನೆಯಿಂದಾಗಿ ಜೈಲಿನ ಆಡಳಿತದ ಬಗ್ಗೆ ವ್ಯಾಕ ಟೀಕೆಗಳು ಕೇಳಿ ಬರುತ್ತಿದ್ದು, ಕಟ್ಟುನಿಟ್ಟಾಗಿ ಕಾನೂನು ಜಾರಿಗೊಳಿಸಲು ಒತ್ತಾಯ ಕೇಳಿಬಂದಿದೆ.