ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕರ್ತವ್ಯನಿರತ ಜೈಲು ಸಿಬ್ಬಂದಿ ಮೇಲೆಯೇ ಕೈದಿಗಳು ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಕೆಲವು ದಿನಗಳ ಹಿಂದೆ ಜೈಲಿನಲ್ಲಿರುವ ಕೈದಿಗಳಿಗೆ ಸಂಬಂಧಿಸಿದ ಕಚೇರಿಗೆ ಅಕ್ರಮವಾಗಿ ನುಗ್ಗಲು ಯತ್ನಿಸಿದಾಗ ತಡೆದ ಜೈಲರ್ ಮೇಲೆ ಹಲ್ಲೆ ಮಾಡಲಾಗಿದೆ.
ಜನವರಿ ಏಳರ ಮಧ್ಯಾಹ್ನ ಕಾರಾಗೃಹದ ಶಿಕ್ಷಾ ಬಂಧಿ ಕಚೇರಿಗೆ ಕೈದಿಗಳಾದ ಆನಂದ ಮತ್ತು ಅಬ್ದುಲ್ ಘನಿ ನುಗ್ಗಲು ಪ್ರಯತ್ನಿಸಿದ್ದಾರೆ. ಅಲ್ಲಿದ್ದ ಅಸಿಸ್ಟೆಂಟ್ ಜೈಲರ್ ಅವರು ಕೈದಿಗಳನ್ನು ತಡೆದು, ನಿಯಮದಂತೆ ನಡೆದುಕೊಳ್ಳಲು ಸೂಚಿಸಿದ್ದಾರೆ. ಕೆರಳಿದ ದಿಗಳು ಅಸಿಸ್ಟೆಂಟ್ ಜೈಲರ್ ಅವರೊಂದಿಗೆ ವಾಗ್ವಾದ ನಡೆಸಿ ಕಾಲಿನಿಂದ ಒದ್ದು ಹಲ್ಲೆ ನಡೆಸಿದ್ದಾರೆ.
ಈ ಘಟನೆ ನಡೆದು ಹಲವು ದಿನಗಳಾದರೂ ಆಂತರಿಕ ವಿಚಾರಣೆ ನಡೆಯುತ್ತಿತ್ತು ಎನ್ನಲಾಗಿದೆ. ಪರಿಸ್ಥಿತಿ ಕೈಮೀರುವ ಮುನ್ನ ಸಿಬ್ಬಂದಿಯ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಮತ್ತು ಹಲ್ಲೆಕೋರರಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಲಾಗಿದೆ. ಜೈಲಿನ ಪ್ರಭಾರ ಅಧೀಕ್ಷಕರು ಸಂಬಂಧ ದೂರು ನೀಡಿದ್ದು, ಸರ್ಕಾರಿ ನೌಕರನ ಕರ್ತವ್ಯಕ್ಕೆ ಅಡ್ಡಿ ಮತ್ತು ಹಲ್ಲೆ ಪ್ರಕರಣ ದಾಖಲಾಗಿದೆ.
ಕೈದಿಗಳೇ ಈ ರೀತಿ ಕಾನೂನು ಕೈಗೆತ್ತಿಕೊಂಡರೆ ಜೈಲು ಸಿಬ್ಬಂದಿಯ ಸುರಕ್ಷತೆ ಹೇಗೆ ಎಂದು ಸಿಬ್ಬಂದಿ ಪ್ರಶ್ನಿಸುತ್ತಿದ್ದಾರೆ. ಹಿರಿಯ ಅಧಿಕಾರಿಗಳು ಮಧ್ಯಪ್ರವೇಶಿಸಿ ಜೈಲಿನಲ್ಲಿ ಶಿಸ್ತು ಕಾಪಾಡಲು ಮತ್ತು ಸಿಬ್ಬಂದಿಗೆ ಸೂಕ್ತ ರಕ್ಷಣೆ ನೀಡಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.


