ಬೆಳಗಾವಿ: ನಾನು ನೀರಾವರಿ ಇಲಾಖೆ ಜವಾಬ್ದಾರಿ ತೆಗೆದುಕೊಂಡ ಮೇಲೆ ವಿಶೇಷವಾಗಿ ಉತ್ತರ ಕರ್ನಾಟಕದ ನೀರಾವರಿಗೆ ಆದ್ಯತೆ ನೀಡಿದ್ದೇವೆ. ಕೃಷ್ಣಾ, ಮಹದಾಯಿ ಯೋಜನೆಗಳ ಪರವಾಗಿ ಕೆಲಸ ಮಾಡುತ್ತಿದ್ದೇವೆ. ಈ ಹಿಂದೆ ಬಜೆಟ್ ಮೀರಿ ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿತ್ತು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ವಿಧಾನ ಪರಿಷತ್ ಕಲಾಪದ ಶೂನ್ಯ ವೇಳೆಯಲ್ಲಿ ಸದಸ್ಯ ಸಿ.ಟಿ.ರವಿ ಅವರು ಉತ್ತರ ಕರ್ನಾಟಕ ನೀರಾವರಿ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದಾಗ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದರು.
ನೀರಾವರಿ ಇಲಾಖೆಯ ವಾರ್ಷಿಕ ಬಜೆಟ್ 22 ಸಾವಿರ ಕೋಟಿ. ಇದರಲ್ಲಿ ಸುಮಾರು 5 ಸಾವಿರ ಕೋಟಿಯಷ್ಟು ಹೊಸ ಕೆಲಸಗಳನ್ನು ತೆಗೆದುಕೊಳ್ಳಬಹುದಿತ್ತು. ಆದರೆ ಈ ಹಿಂದೆ 25 ಸಾವಿರ ಕೋಟಿ ಮೊತ್ತದ ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ. ಯಾರ ಕಾಲದಲ್ಲಿ ಬಜೆಟ್ ಗೂ ಮೀರಿ ಕಾಮಗಾರಿಗಳನ್ನು ತೆಗೆದುಕೊಳ್ಳಲಾಯಿತು ಎಂದು ಪ್ರಸ್ತಾಪಿಸಿದರೆ ರಾಜಕೀಯ ಎಂದು ಎಲ್ಲರೂ ಮುಗಿಬೀಳುತ್ತಾರೆ ಎಂದರು.
ಹಣಕಾಸಿನ ಪರಿಸ್ಥಿಗೆ ಅನುಗುಣವಾಗಿ ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳಲ್ಲಿ ಒಂದಷ್ಟನ್ನು ಕೈಗೆತ್ತಿಕೊಂಡಿದ್ದೇವೆ, ಒಂದಷ್ಟನ್ನು ತೆಗೆದುಕೊಂಡಿಲ್ಲ. ಚಿಕ್ಕೋಡಿ, ಅಥಣಿ, ಕಾಗವಾಡ, ಗೋಕಾಕ್, ರಾಮದುರ್ಗ ಸೇರಿದಂತೆ ಉತ್ತರ ಕರ್ನಾಟಕ ಭಾಗದ ನೀರಾವರಿ ಯೋಜನೆಗಳ ಬಗ್ಗೆ ಚರ್ಚಿಸಲು ಇಂದು ಸಂಜೆ 3 ಗಂಟೆಗೆ ಮುಖ್ಯಮಂತ್ರಿಗಳು ಸಭೆ ಕರೆದಿದ್ದಾರೆ. ಇನ್ನೊಮ್ಮೆ ಸವಿವರವಾಗಿ ಇದಕ್ಕೆ ಉತ್ತರಿಸುತ್ತೇನೆ ಎಂದರು.
ಮೇಕೆದಾಟು ಯೋಜನೆಗೆ ನ್ಯಾಯ ಸಿಕ್ಕಿದೆ
ನಮ್ಮ ನೀರು ನಮ್ಮ ಹಕ್ಕು ಪಾದಯಾತ್ರೆ ಹಾಗೂ ನನ್ನ ಒತ್ತಡ ಮತ್ತು ಪರಿಶ್ರಮದ ಫಲದಿಂದ ಮೇಕೆದಾಟು ವಿಚಾರದಲ್ಲಿ ನಮಗೆ ಸುಪ್ರೀಂಕೋರ್ಟ್ ನಿಂದ ನ್ಯಾಯ ಸಿಕ್ಕಿದೆ ಎಂದರು.


