ಪ್ರಧಾನಮಂತ್ರಿ ನರೇಂದ್ರ ಮೋದಿ 2022ರ ಮೇ ತಿಂಗಳಿನಿಂದ 2024ರ ಡಿಸೆಂಬರ್‌ವರೆಗೆ 38 ವಿದೇಶಿ ಪ್ರವಾಸಗಳನ್ನು ಕೈಗೊಂಡಿದ್ದು, ಇದಕ್ಕಾಗಿ ಸುಮಾರು 258 ಕೋಟಿ ರೂ. ಖರ್ಚಾಗಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ವಿದೇಶಾಂಗ ಸಚಿವಾಲಯದ ರಾಜ್ಯ ಸಚಿವೆ ಪಬಿತ್ರಾ ಮಾರ್ಗರಿಟಾ, ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ರೂಪದಲ್ಲಿ ಈ ಉತ್ತರವನ್ನು ನೀಡಿದ್ದಾರೆ.
ಕೇಂದ್ರ ಸರ್ಕಾರವು ಒದಗಿಸಿದ ದತ್ತಾಂಶದಲ್ಲಿ ಪ್ರಧಾನಮಂತ್ರಿ ಮೋದಿ ಅವರ ವಿದೇಶಿ ಪ್ರವಾಸಗಳ ಖರ್ಚು ವೆಚ್ಚವನ್ನು ದೇಶವಾರು ವಿಂಗಡಿಸಿದೆ. ಈ ಪ್ರವಾಸಗಳಲ್ಲಿ ಅಧಿಕೃತ ಪ್ರತಿನಿಧಿಗಳು, ಭದ್ರತಾ ಸಿಬ್ಬಂದಿ, ಮಾಧ್ಯಮ ಪ್ರತಿನಿಧಿಗಳು ಮತ್ತು ಇತರರ ಖರ್ಚು ಸೇರಿದೆ.
ಈ 38 ಪ್ರವಾಸಗಳಲ್ಲಿ 2023ರ ಜೂನ್‌ನಲ್ಲಿ ಅಮೆರಿಕಕ್ಕೆ (America) ನೀಡಿದ ಭೇಟಿಯು ಅತ್ಯಂತ ದುಬಾರಿ ಪ್ರವಾಸವಾಗಿದೆ. ಈ ಪ್ರವಾಸಕ್ಕೆ ಒಟ್ಟು 22.89 ಕೋಟಿ ರೂ. ಖರ್ಚಾಗಿವೆ ಎಂದು ಸರ್ಕಾರ ತಿಳಿಸಿದೆ. 2024ರ ಸೆಪ್ಟೆಂಬರ್‌ನಲ್ಲಿ ಅಮೆರಿಕಕ್ಕೆ ಮತ್ತೊಮ್ಮೆ ಭೇಟಿ ನೀಡಿದಾಗ 15.33 ಕೋಟಿ ರೂ. ಖರ್ಚಾಗಿತ್ತು ಎಂದು ವರದಿ ತಿಳಿಸಿದೆ.
ಪ್ರವಾಸಗಳ ಪಟ್ಟಿಯು 2022ರ ಮೇ ತಿಂಗಳ ಜರ್ಮನಿ ಭೇಟಿಯಿಂದ ಆರಂಭವಾಗಿ 2024ರ ಡಿಸೆಂಬರ್‌ನಲ್ಲಿ ಕುವೈತ್ ಭೇಟಿಯವರೆಗೆ ವಿಸ್ತರಿಸಿದೆ. ಇತರ ಪ್ರಮುಖ ಪ್ರವಾಸಗಳಲ್ಲಿ ಜಪಾನ್(17 ಕೋಟಿ ರೂ.), ಇಟಲಿ(14.36 ಕೋಟಿ ರೂ.), ಪೋಲೆಂಡ್(10.10 ಕೋಟಿ ರೂ.), ರಷ್ಯಾ(5.34 ಕೋಟಿ ರೂ.) ಮತ್ತು ನೇಪಾಳ(80 ಲಕ್ಷ ರೂ.) ವೆಚ್ಚವಾಗಿದೆ.
ಪ್ರಧಾನಮಂತ್ರಿ ಮೋದಿ ಅವರ ಪ್ರವಾಸಗಳ ಖರ್ಚನ್ನು ಹೋಲಿಕೆ ಮಾಡುವ ಸಲುವಾಗಿ, ಸರ್ಕಾರವು 2014ರ ಮೊದಲಿನ ಕೆಲವು ಪ್ರವಾಸಗಳ ದತ್ತಾಂಶವನ್ನು ಸಹ ಒದಗಿಸಿದೆ. 2011ರಲ್ಲಿ ಅಂದಿನ ಪ್ರಧಾನಮಂತ್ರಿ ಮನಮೋಹನ್ ಸಿಂಗ್ (Manmohan Singh) ಅಮೆರಿಕಕ್ಕೆ ಭೇಟಿ ನೀಡಿದಾಗ 10.74 ಕೋಟಿ ರೂ. ಖರ್ಚಾಗಿತ್ತು.
2013ರಲ್ಲಿ ರಷ್ಯಾಕ್ಕೆ ಭೇಟಿ ನೀಡಿದಾಗ 9.95 ಕೋಟಿ ರೂ., ಫ್ರಾನ್ಸ್‌ಗೆ 8.33 ಕೋಟಿ ರೂ. ಮತ್ತು ಜರ್ಮನಿಗೆ 6.02 ಕೋಟಿ ರೂ. ಖರ್ಚಾಗಿತ್ತು. ಈ ದತ್ತಾಂಶಗಳನ್ನು ಹಣದುಬ್ಬರ ಅಥವಾ ಕರೆನ್ಸಿ ಮೌಲ್ಯದ ಏರಿಳಿತಕ್ಕೆ ಹೊಂದಿಸದೇ ಒದಗಿಸಲಾಗಿದೆ ಎಂದು ಸ್ಪಷ್ಟಪಡಿಸಿದರು