ಅರ್ಚಕ ಲೈಂಗಿಕ ಕ್ರಿಯೆಗೆ ಒತ್ತಾಯಿಸಿರುವುದಾಗಿ ಯುವತಿಯೊಬ್ಬಳು ಆರೋಪಿಸಿ ಕೇಸ್ ದಾಖಲಿಸಿದ ಕೆಲವೇ ಗಂಟೆಗಳ ನಂತರ ಮುಂಬೈ ಉಪನಗರದ ದೇವಸ್ಥಾನದೊಳಗೆ ಅರ್ಚಕ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಕಾಂದಿವಲಿ ಪ್ರದೇಶದ ದೇವಾಲಯದಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಅರ್ಚಕರ ಮೃತದೇಹ ಪತ್ತೆಯಾಗಿದೆ ಎಂದು ಹೇಳಿದ್ದಾರೆ.
ಪೊಲೀಸ್ ಅಧಿಕಾರಿಯ ಪ್ರಕಾರ, 19 ವರ್ಷದ ಮಹಿಳೆ ಮತ್ತು ಆಕೆಯ ತಂದೆ ಬೆಳಗಿನ ಜಾವ ಕಾಂದಿವಲಿ ಪೊಲೀಸ್ ಠಾಣೆಗೆ ಭೇಟಿ ನೀಡಿ, ಅರ್ಚಕರು ಕರೆ ಮಾಡಿ ಲೈಂಗಿಕ ಕ್ರಿಯೆ ನಡೆಸಲು ಬರುವಂತೆ ಆಹ್ವಾನಿಸಿರುವುದಾಗಿ ಆರೋಪಿಸಿದ್ದರು. ಅವರನ್ನು ವಾಪಾಸ್ ಕಳುಹಿಸಿದ ಪೊಲೀಸರು ಮಹಿಳೆ ಮತ್ತು ಆಕೆಯ ತಂದೆಗೆ ದೂರು ನೀಡಲು ಬೆಳಿಗ್ಗೆ ಬರುವಂತೆ ಹೇಳಿದ್ದರು. ಬಳಿಕ ಅವರು ಅರ್ಚಕರನ್ನು ಹುಡುಕಲು ಪ್ರಾರಂಭಿಸಿದ್ದು, ಪತ್ತೆಹಚ್ಚಲು ಸಾಧ್ಯವಾಗಲಿಲ್ಲ.
ಮರುದಿನ ದೇವಾಲಯದೊಳಗೆ ಅರ್ಚಕರು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ. ಆ ಸ್ಥಳದಲ್ಲಿ ಯಾವುದೇ ಸುಸೈಡ್ ನೋಟ್ ಪತ್ತೆಯಾಗಿಲ್ಲ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಆಕಸ್ಮಿಕ ಸಾವಿನ ವರದಿ ದಾಖಲಿಸಲಾಗಿದ್ದು ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಕಾರ್ಮಿಕರಿದ್ದ ಬಸ್ ಉರುಳಿ ಮಹಿಳೆ ಸಾವು
ಕಾರ್ಮಿಕರಿದ್ದ ಬಸ್ ಉರುಳಿ ಮಹಿಳೆ ಮೃತಪಟ್ಟಿದ್ದು, 24 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ಅಭಯಪುರ ಗ್ರಾಮದ ಬಳಿ ನಡೆದಿದೆ. ಬಸ್ ಗುಜರಾತ್‌ನ ಜಾಮ್‌ನಗರದಿಂದ ಕಾರ್ಮಿಕರನ್ನು ಕರೆದೊಯ್ಯುತ್ತಿತ್ತು ಮತ್ತು ಅವರನ್ನು ಸ್ವಂತ ಜಿಲ್ಲೆಗಳಿಗೆ ಹಿಂದಿರುಗಿಸುತ್ತಿತ್ತು. ಬಸ್‌ನಲ್ಲಿದ್ದ ಹೆಚ್ಚಿನ ಕಾರ್ಮಿಕರು ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದವರಾಗಿದ್ದರು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಘನಶ್ಯಾಮ್ ಮಾಲ್ವಿಯಾ ಮಾಹಿತಿ ನೀಡಿದ್ದಾರೆ.
ಸುನೈರಾ ಪೊಲೀಸ್ ಠಾಣೆ ವ್ಯಾಪ್ತಿಯ ಹೆದ್ದಾರಿಯಲ್ಲಿ ಅತಿ ವೇಗದಲ್ಲಿ ಬಸ್ ಚಲಾಯಿಸುತ್ತಿದ್ದಾಗ ಚಾಲಕ ನಿಯಂತ್ರಣ ಕಳೆದುಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾಹಿತಿ ಪಡೆದ ಪೊಲೀಸರು, ಸಂಚಾರ ಇಲಾಖೆ ಅಧಿಕಾರಿಗಳು ಮತ್ತು ಆಂಬ್ಯುಲೆನ್ಸ್‌ಗಳು ಸ್ಥಳಕ್ಕೆ ಆಗಮಿಸಿ ಗಾಯಾಳುಗಳನ್ನು ತಕ್ಷಣ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಚಾಲಕನ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.