ಹುಬ್ಬಳ್ಳಿ ಗ್ರಾಮೀಣ ಠಾಣೆಯ ಇನ್ಸ್ಪೆಕ್ಟರ್ ಮುರುಗೇಶ್ ಚನ್ನಣ್ಣವರ ನೇತೃತ್ವದ ಭಾರತದ 6 ಜನರ ಪ್ರೈಡ್ ಆಫ್ ಇಂಡಿಯಾ ತಂಡ ಇಂಗ್ಲೆಂಡ್ನಲ್ಲಿನ 43 ಕಿಮೀ ಉದ್ದದ ಇಂಗ್ಲಿಷ್ ಕಾಲುವೆಯನ್ನು 13.37 ಗಂಟೆಯಲ್ಲಿ ಈಜುವ ಮೂಲಕ ದಾಖಲೆ ಮಾಡಿದೆ.
ಇಂಗ್ಲೆಂಡ್ನ ಸ್ಯಾಮ್ಥೈರ್ ಹೊಯ್ ದಡದಿಂದ ಆರಂಭವಾದ ಈಜು, ಫ್ರಾನ್ಸ್ನ ವಿಸ್ಸೆಂಟ್ ಬೀಚ್ನಲ್ಲಿ ಕೊನೆಗೊಂಡಿತು. ತಂಡದಲ್ಲಿ ಮುರುಗೇಶ ಚನ್ನಣ್ಣವರ, ಇಲ್ಲಿನ ಕೆಎಂಸಿಆರ್ಐ ನ ಎಂಬಿಬಿಎಸ್ ವಿದ್ಯಾರ್ಥಿ ಅಮನ್ ಶಾನಭಾಗ, ಹರಿಯಾಣದ ಐಎಎಸ್ ಅಧಿಕಾರಿ ದೀಪಕ್ ಬಾಬುಲಾಲ್ ಕಾರವಾ, ವಿಕಲಾಂಗ ಈಜುಗಾರರಾದ ಗಣೇಶ್ ಬಾಲಾಜಿ, ರಾಜಬೀರ, ಮಹಾರಾಷ್ಟ್ರದ ಬಿಬಿಎ ವಿದ್ಯಾರ್ಥಿ ಮಾನವ ಮೋರೆ ಇದ್ದರು.
ಇಂಗ್ಲಿಷ್ ಚಾನೆಲ್ ಅಸೋಸಿಯೇಶನ್ ನಿಯಮದಂತೆ ಈ 6 ಈಜುಗಾರರು ಒಬ್ಬರ ನಂತರ ಒಬ್ಬರಂತೆ ಮೇಲ್ವಿಚಾರಕ ರಾಬ್ ಸ್ಮಿಥ್, ಪೈಲೆಟ್ ಸ್ಟುವರ್ಟ್ ಹಾಗೂ ಪ್ರಶಾಂತ್ ಕರ್ಮಾಕರ ಮಾರ್ಗದರ್ಶನದಲ್ಲಿ ಈಜಿದರು. 13ರಿಂದ 16 ಡಿಗ್ರಿ ಸೆಲ್ಸಿಯಸ್ ಚಳಿ, ಉಕ್ಕೇರುವ ಅಲೆಗಳ ನಡುವೆಯೂ 43 ಕಿಮೀ ದೂರವನ್ನು ಕೇವಲ 13.37 ಗಂಟೆಗಳಲ್ಲಿ ಈಜುವ ಮೂಲಕ ಗುರಿ ತಲುಪಿದ್ದಾರೆ. ಪ್ರೈಡ್ ಆಫ್ ಇಂಡಿಯಾ ತಂಡ ಜೂ.16ರಂದು ಬೆಳಗಿನ 2.15ಕ್ಕೆ ಈಜು ಆರಂಭಿಸಿದ್ದು, ಮಧ್ಯಾಹ್ನ 3.52ಕ್ಕೆ ಮುಕ್ತಾಯಗೊಳಿಸಿದೆ. ತಂಡ ಭಾರತದ ತ್ರಿವರ್ಣ ಧ್ವಜ ಹಾಗೂ ಕರ್ನಾಟಕ ಪೊಲೀಸ್ ಧ್ವಜವನ್ನು ಇಂಗ್ಲೆಂಡಿನಲ್ಲಿ ಹಾರಿಸಿದೆ.
ಕಳೆದ ತಿಂಗಳು ಶ್ರೀಲಂಕಾದಿಂದ ಭಾರತದ ಧನುಷ್ಕೋಡಿವರೆಗೆ ರಾಮ ಸೇತು ಮೂಲಕ 28 ಕಿ.ಮೀ. ಈಜನ್ನು ಚನ್ನಣ್ಣವರ 8 ಗಂಟೆ 30 ನಿಮಿಷ ಪೂರ್ಣಗೊಳಿಸಿದ್ದರು. ಉತ್ತರ ಪ್ರದೇಶ ಮತ್ತು ಹರಿಯಾಣದ ಇಬ್ಬರು ಐಎಎಸ್ ಅಧಿಕಾರಿಗಳು, ಪಶ್ಚಿಮ ಬಂಗಾಲ ಮತ್ತು ಹರಿಯಾಣದ ಅಂಗವಿಕಲ ಕ್ರೀಡಾಪಟುಗಳು ಈ ತಂಡದಲ್ಲಿ ಇದ್ದರು.