ಇರಾನ್‌ನಲ್ಲಿ ಆರ್ಥಿಕ ಬಕ್ಕಟ್ಟು ತೀವ್ರಗೊಂಡಿದ್ದು, ಬೆಲೆ ಏರಿಕೆ ಹಾಗೂ ನಿರುದ್ಯೋಗದಿಂದ ತತ್ತರಿಸಿರುವ ಜನ ಪ್ರತಿಭಟನೆ ಆರಂಭಿಸಿದ್ದು, 35ಕ್ಕೂ ಹೆಚ್ಚು ಮಂದಿ ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ.
ಇರಾನ್‌ನಲ್ಲಿ ಅಯತೊಲ್ಲಾ ಅಲಿ ಖಮೇನಿ ಆಡಳಿತದ ವಿರುದ್ಧ ಸಾರ್ವಜನಿಕರು ಬಂಡೆದಿದ್ದಾರೆ. 1,200ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿರುವ ಸರ್ಕಾರ, ಇಂಟರ್ನೆಟ್ ನಿರ್ಬಂಧಿಸಿ ಪ್ರತಿಭಟನೆ ಹತ್ತಿಕ್ಕಲು ಮುಂದಾಗಿದೆ. ನಗರ ಮಾತ್ರವಲ್ಲದೆ ಹಳ್ಳಿಯವರೂ ಪ್ರತಿಭಟನೆಗಿಳಿದಿದ್ದಾರೆ. ಪ್ರತಿಭಟನೆ ದೊಡ್ಡ ಪ್ರಮಾಣದಲ್ಲಿ ವ್ಯಾಪಿಸಿದೆ.
ಸಾರ್ವಜನಿಕರು ಸರ್ವಾಧಿಕಾರ ವಿರೋಧಿ ಘೋಷಣೆಗಳನ್ನು ಕೂಗುತ್ತಿದ್ದಾರೆ, ಮುಲ್ಲಾ, ಇರಾನ್ ಬಿಟ್ಟು ಹೋಗಿ ಎಂದು ಘೋಷಣೆ ಕೂಗುತ್ತಿದ್ದಾರೆ. ಪ್ರತಿಭಟನೆಯಲ್ಲಿ ಯುವಕರು, ಕಾಲೇಜು ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು, ಇದನ್ನೂ ಜೆನ್ ಝಿ ಪ್ರತಿಭಟನೆ ಎಂದೇ ಕರೆಯಲಾಗುತ್ತಿದೆ.
ಟೆಹ್ರಾನ್‌ನಿಂದ ಆರಂಬಗೊಂಡಿರುವ ಪ್ರತಿಭಟನೆ ಹಲವಾರು ಪ್ರಾಂತ್ಯಗಳವರೆಗೆ ತಲುಪಿ, ಹೆಚ್ಚು ಹಿಂಸಾತ್ಮಕವಾಗುತ್ತಿವೆ, ಭದ್ರತಾ ಪಡೆಗಳು ಮತ್ತು ಪ್ರತಿಭಟನಾಕಾರರ ನಡುವಿನ ಘರ್ಷಣೆಯಲ್ಲಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಇರಾನಿನ ರಿಯಾಲ್‌ನ ವಿನಿಮಯ ದರದ ಕುಸಿಗೊಂಡು ರಿಯಾಲ್‌ನ ಮೌಲ್ಯವು ಐತಿಹಾಸಿಕ ಕನಿಷ್ಠ ಮಟ್ಟದಲ್ಲಿದೆ, ಸಾಮಾನ್ಯ ನಾಗರಿಕರ ಖರೀದಿ ಶಕ್ತಿ ಗಮನಾರ್ಹವಾಗಿ ಕುಸಿದು ಹಣದುಬ್ಬರ ತೀವ್ರಗೊಳ್ಳುತ್ತಿದೆ. ಒಂದು ಡಾಲರ್‌ನ ಮೌಲ್ಯವು ಇರಾನಿನ ಕರೆನ್ಸಿಯಲ್ಲಿ 1.4 ಮಿಲಿಯನ್ ರಿಯಾಲ್‌ಗಳನ್ನು ತಲುಪಿದೆ.
ಆಹಾರ, ಔಷಧ ಮತ್ತು ಇಂಧನ ಬೆಲೆ ಏರಿಕೆ, ನಿರುದ್ಯೋಗ, ವ್ಯಾಪಾರ ನಷ್ಟ, ಮಾರುಕಟ್ಟೆಗಳು ಬಂದ್ ಇವೆಲ್ಲವೂ ಎಲ್ಲಾ ವರ್ಗದ ಜರ ಬದುಕನ್ನು ಸಂಕಷ್ಟಕ್ಕೆ ತಳ್ಳಿದೆ. ಹಣದುಬ್ಬರ ಸರಿಪಡಿಸುವುದು ಮಾತ್ರವಲ್ಲದೆ ಆಡಳಿತ ರಚನೆಯಲ್ಲಿ ಬದಲಾವಣೆ ತರಲು ಪ್ರತಿಭಟನಾಕಾರರು ಒತ್ತಾಯಿಸುತ್ತಿದ್ದಾರೆ. ಜನರು ಉನ್ನತ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರನ್ನು ನೇರವಾಗಿ ಪ್ರಶ್ನಿಸುತ್ತಿದ್ದಾರೆ. ಸರ್ವಾಧಿಕಾರಕ್ಕೆ ಧಿಕ್ಕಾರ ಕೂಗಿದ್ದಾರೆ.
ಅಧಿಕಾರಿಗಳು ಭಾರೀ ಭದ್ರತಾ ಪಡೆಗಳನ್ನು ನಿಯೋಜಿಸಿ ಕಠಿಣ ಕ್ರಮ ಕೈಗೊಂಡಿದ್ದಾರೆ. ಪ್ರತಿಭಟನೆಗಳನ್ನು ನಿಯಂತ್ರಿಸಲು ಇಂಟರ್ನೆಟ್ಗೆ ನಿರ್ಬಂಧ ಹೇರಲಾಗಿದೆ. ಕೆಲವು ಗುಂಪುಗಳಿಗೆ ವಿದೇಶಿ ಏಜೆಂಟ್‌ಗಳು ಎಂದು ಆರೋಪಿಸಲಾಗಿದೆ. ಇರಾನ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿನ್ನೆಲೆ ಭಾರತವು ಇರಾನ್ನಲ್ಲಿರುವ ತನ್ನ ಪ್ರಜೆಗಳಿಗೆ ಪ್ರತಿಭಟನಾ ಪ್ರದೇಶಗಳಿಗೆ ತೆರಳದಂತೆ, ಅನಿವಾರ್ಯವಲ್ಲದ ಪ್ರಯಾಣವನ್ನು ತಪ್ಪಿಸುವಂತೆ ಸೂಚಿಸಿದೆ.


