ವಾಸ್ತವದಲ್ಲಿ ಬೆಲೆ ಏರಿಕೆಯ ನಿಯಂತ್ರಣ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಹೊಣೆಗಾರಿಕೆ. ಇತ್ತೀಚೆಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯ ಸರ್ಕಾರಗಳು ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು ಎನ್ನುತ್ತಾ ಈ ಹೊಣೆಗಾರಿಕೆಯನ್ನು ರಾಜ್ಯದ ಮಡಿಲಿಗೆ ಹಾಕಿ ಉಪಾಯದಿಂದ ನುಣುಚಿಕೊಂಡಿದ್ದಾರೆ.
ರಾಜ್ಯ ಸಂಸದರು ವಿತ್ತ ಮಂತ್ರಿಗಳ ಈ ಹೇಳಿಕೆಯನ್ನು ಶಿರಸಾವಹಿಸಿ ರಿಪೀಟ್ ಮಾಡುತ್ತಿದ್ದಾರೆ ಮತ್ತು ಬೆಲೆ ಏರಿಕೆಯನ್ನು ನಿಯಂತ್ರಿಸಲಾಗದ್ದಕ್ಕೆ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಮಾಡುತ್ತಿದ್ದಾರೆ ಮತ್ತು ದೊರಕಿದ ಎಲ್ಲಾ ವೇದಿಕೆಯಿಂದ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ತಮ್ಮ ಆಡಳಿತದ ಅವಧಿಯಲ್ಲಿ ಬೆಲೆ ಏರಿಕೆ ಆಗಲೇ ಇಲ್ಲ ಎನ್ನುವಂತೆ ಮಾತನಾಡುತ್ತಾರೆ. ಸಿದ್ದರಾಮಯ್ಯನವರು ಈ ಪರಿ ಬೆಲೆ ಏರಿಕೆಗೆ ಕೇಂದ್ರ ಸರ್ಕಾರವನ್ನು ನೇರವಾಗಿ ಹೊಣೆ ಮಾಡಿ ದೂರುತ್ತಿದ್ದಾರೆ. ವಾಸ್ತವ ಏನೇ ಇರಲಿ ಬೆಲೆ ಏರಿಸುವುದರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪೈಪೋಟಿಯಲ್ಲಿ ಇದ್ದಂತೆ ಕಾಣುತ್ತವೆ.
ಈ ದಿನಗಳಲ್ಲಿ ಬೆಲೆ ಏರಿಕೆ ಪರ್ವ ಟಾಪ್ ಗೇರ್‌ನಲ್ಲಿ ಇದೆ. ಯಾವುದರ ಬೆಲೆ ಏರಿಲ್ಲ ಎನ್ನುವ ಪಟ್ಟಿಗಿಂತ ಯಾವುದರ ಬೆಲೆ ಏರಿದೆ, ಏರುತ್ತಿದೆ ಮತ್ತು ಇನ್ನೂ ಏರಬಹುದು ಎನ್ನುವ ಪಟ್ಟಿ ಉದ್ದವಾಗುತ್ತಿದೆ. ಬೆಳಗಾದೊಡನೆ ಇಂದು ಯಾವುದರ ಬೆಲೆ ಹೆಚ್ಚಾಗಬಹುದು ಎನ್ನುವ ಚಿಂತೆ ಕಾಡುತ್ತದೆ. ಮಾಸಿಕ ಬಜೆಟ್‌ನಲ್ಲಿನ ಕೊರತೆಯನ್ನು ಹೇಗೆ ಸರಿದೂಗಿಸಬೇಕು? ಎಲ್ಲಿ ಬೆಲ್ಟನ್ನು ಎಷ್ಟು ಬಿಗಿ ಮಾಡಬೇಕು ಎನ್ನುವ ಜಿಜ್ಞಾಸೆ ಕಾಡುತ್ತದೆ.
ವಾಸ್ತವದಲ್ಲಿ ಬೆಲೆ ಏರಿಕೆ ಅನಿರೀಕ್ಷಿತ ಬೆಳವಣಿಗೆಯಲ್ಲ. ಬೆಲೆಗಳು ನಿಂತ ನೀರಲ್ಲ. ಏರಿಕೆ ನಿರಂತರ ಪ್ರಕ್ರಿಯೆಯಾಗಿದ್ದು, ಆಗೊಮ್ಮೆ-ಈಗೊಮ್ಮೆ ಸ್ವಲ್ಪ ವಿರಾಮದ ನಂತರ ಏರುತ್ತಲೇ ಇರುತ್ತದೆ. ಆದರೆ, ಅದು ಒಂದು ಮಿತಿಯನ್ನು ದಾಟಿದಾಗ ಮತ್ತು ಈ ಪ್ರಕ್ರಿಯೆ ಪದೇಪದೇ ಆಗುತ್ತಲೇ ಇದ್ದರೆ ಅದು ಸುದ್ದಿಯಾಗುತ್ತದೆ ಮತ್ತು ಆಡಳಿತದಲ್ಲಿ ಇದ್ದವರಿಗೆ ಗುದ್ದು ಕೊಡಲು ಶುರು ಮಾಡುತ್ತದೆ. ಆಡಳಿತದಲ್ಲಿ ಇದ್ದವರು ಇದಕ್ಕೆ ಉತ್ತರದಾಯಿಯಾಗಬೇಕಾಗುತ್ತದೆ. ಬೆಲೆ ಏರಿಕೆಯ ಹಿಂದಿನ ಕಾರಣ ಏನೇ ಇರಲಿ, ಸರ್ಕಾರ ಮತ್ತು ಆಡಳಿತ ನಡೆಸುವ ಪಕ್ಷ ಇದರ ನೈತಿಕ ಹೊಣೆಗಾರಿಕೆಯನ್ನು ಹೊರಲೇಬೇಕಾಗುತ್ತದೆ. ಇಂದಿರಾಗಾಂಧಿಯವರು ಪ್ರಧಾನಿ ಯಾಗಿದ್ದ ಕಾಲದಲ್ಲಿ ಒಮ್ಮೆ ಬೆಲೆ ಏರಿಕೆ ಹತೋಟಿ ತಪ್ಪಿ ದೇಶಾದ್ಯಂತ ಆಕ್ರೋಶ ಮತ್ತು ಅಸಹನೆ ಮುಗಿಲು ಮುಟ್ಟಲು, ಈ ಬೆಲೆ ಏರಿಕೆಯನ್ನು ಪತ್ರಕರ್ತರು ತೀವ್ರ ವಾಗಿ ಪ್ರಶ್ನಿಸಿದಾಗ, ಇಂದಿರಾಗಾಂಧಿಯವರು ಅದನ್ನು ಅಂತಾರಾಷ್ಟ್ರೀಯ ಸಮಸ್ಯೆಯೆಂದು ಮತ್ತು ಅದು ಕೇವಲ ಭಾರತಕ್ಕೆ ಸೀಮಿತವಾಗಿಲ್ಲ ಎಂದು ಹೇಳಿ ಚರ್ಚೆ, ಲೇವಡಿ, ಟೀಕೆಗೆ ಗುರಿಯಾಗಿದ್ದು, ಈ ಸಮಸ್ಯೆಯನ್ನು ನೋಡುವ ದೃಷ್ಟಿ ಬದಲಾಗಬೇಕು ಎಂದಿದ್ದರಂತೆ. ಹಾಗೆಯೇ ಅಭಿವೃದ್ದಿಯಾಗುತ್ತಿರುವ ರಾಷ್ಟ್ರಗಳಲ್ಲಿ ಇದು ಅನಿವಾರ್ಯವಾದ ಬೆಳವಣಿಗೆ ಎಂದೂ ಹೇಳಿ ಪತ್ರಕಕರ್ತರ ಬಾಯಿಯನ್ನು ಮುಚ್ಚಿಸಿದ್ದರಂತೆ. ಅಭಿವೃದ್ದಿ ಮತ್ತು ಬೆಲೆ ಏರಿಕೆ ಜೊತೆಯಾಗಿ ಹೋಗುವುದು ತೀರಾ ಸಾಮಾನ್ಯ ಮತ್ತು ಈ ಏರಿಕೆ ಅಭಿವೃದ್ಧಿಯ ಸೂಚಕ ಎಂದಿದ್ದರಂತೆ. ಜನತೆ ಇದನ್ನು ಪ್ರತಿಭಟಿಸದೆ ಮುಂದಿನ ಅಚ್ಛೇ ದಿನಗಳಿಗಾಗಿ ಕಾಯ ಬೇಕು ಎಂದಿದ್ದ ರಂತೆ. ಕೆಲವು ಅರ್ಥ ಶಾಸ್ತ್ರಜ್ಞರು ಇದಕ್ಕೆ ಸಹಮತ ವ್ಯಕ್ತ ಮಾಡಿದ್ದರಂತೆ ಮತ್ತು ಬೆಲೆ ಏರಿಕೆಗೆ ಅಂಕುಶ ಹಾಕಲಾರದ ಆಡಳಿತಗಾರರು ಹೇಳಿಕೆಯ ಅಡಿಯಲ್ಲಿ ಆಶ್ರಯ ಪಡೆದಿದ್ದರಂತೆ ಮತ್ತು ಬದುಕಿದೆಯಾ ಬಡಜೀವ ಎನ್ನುತ್ತಾ ನಿಟ್ಟುಸಿರುಬಿಟ್ಟಿದ್ದರಂತೆ.
ಬೆಲೆ ಏರಿಕೆಯ ನಿಟ್ಟಿನಲ್ಲಿ ಜನತೆ ಆಕ್ರೋಶಗೊಂಡಿರುವುದು ಸ್ವಾಭಾವಿಕ. ಆದರೆ, ಅದಕ್ಕಿಂತಲೂ ಹೆಚ್ಚು ಆಕ್ರೋಶವನ್ನು ಅವರು ರಾಜಕೀಯ ಪಕ್ಷಗಳ ಬಗೆಗೆ ಮತ್ತು ಈ ನಿಟ್ಟಿನಲ್ಲಿ ರಾಜಕಾರಣಿಗಳ ನಿಲುವಿನ ಬಗೆಗೆ ವ್ಯಕ್ತ ಮಾಡುತ್ತಿದ್ದಾರೆ. ಪಕ್ಷವು ಯಾವುದೇ ಇರಲಿ, ತನ್ನ ಆಡಳಿತ ಅವಧಿಯಲ್ಲಿ ಬೆಲೆ ಏರಿದರೆ, ಅದಕ್ಕೆ ಹಿಂದೆ ಅಧಿಕಾರದಲ್ಲಿದ್ದ ಪಕ್ಷವನ್ನು ದೂರುತ್ತಾರೆ ಮತ್ತು ಅವರ ದುರಾಡಳಿತದ ಫಲವಾಗಿ ಬೆಲೆ ಏರುತ್ತಿದೆ ಎಂದು ಜನತೆ ನಂಬುವಂತೆ ಸಮಜಾಯಿಷಿ ನೀಡುತ್ತಾರೆ. ವಿಪಕ್ಷದವರು ಆಡಳಿತ ಪಕ್ಷದ ವೈಫಲ್ಯದ ಫಲವಾಗಿ ಮತ್ತು ಸಪ್ಲೈ ಚೇನ್ ಅನ್ನು ಸರಿಯಾಗಿ ನಿರ್ವಹಿಸದಿರುವುದರಿಂದ ಬೆಲೆ ಏರಿದೆ ಎಂದು ಬೊಬ್ಬೆ ಹೊಡೆಯು ತ್ತಾರೆ. ಹಾಗೆಯೇ ಕಾಳ ಸಂತೆಕೋರರನ್ನು ನಿಯಂತ್ರಿಸದಿರುವುದನ್ನೂ ಎತ್ತಿ ತೋರಿಸುತ್ತಾರೆ. ವಾಸ್ತವದಲ್ಲಿ ಬೆಲೆ ಏರಿಕೆಯ ನಿಯಂತ್ರಣ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಹೊಣೆಗಾರಿಕೆ. ಆದರೆ, ಇತ್ತೀಚೆಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯ ಸರ್ಕಾರಗಳು ಬೆಲೆ ಏರಿಕೆಯನ್ನು ನಿಯಂತ್ರಿ ಸಬೇಕು ಎನ್ನುತ್ತಾ ಈ ಹೊಣೆಗಾರಿಕೆಯನ್ನು ರಾಜ್ಯದ ಮಡಿಲಿಗೆ ಹಾಕಿ ಉಪಾಯದಿಂದ ನುಣುಚಿಕೊಂಡಿದ್ದಾರೆ. ರಾಜ್ಯ ಸಂಸದರು ವಿತ್ತ ಮಂತ್ರಿಗಳ ಈ ಹೇಳಿಕೆ ಯನ್ನು ಶಿರಸಾವಹಿಸಿ ರಿಪೀಟ್ ಮಾಡುತ್ತಿದ್ದಾರೆ ಮತ್ತು ಬೆಲೆ ಏರಿಕೆಯನ್ನು ನಿಯಂತ್ರಿಸಲಾಗದ್ದಕ್ಕೆ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಮಾಡುತ್ತಿದ್ದಾರೆ ಮತ್ತು ದೊರಕಿದ ಎಲ್ಲಾ ವೇದಿಕೆಯಿಂದ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ತಮ್ಮ ಆಡಳಿತದ ಅವಧಿಯಲ್ಲಿ ಬೆಲೆ ಏರಿಕೆ ಆಗಲೇ ಇಲ್ಲ ಎನ್ನುವಂತೆ ಮಾತನಾಡುತ್ತಾರೆ. ಸಿದ್ದರಾಮಯ್ಯನವರು ಈ ಪರಿ ಬೆಲೆ ಏರಿಕೆಗೆ ಕೇಂದ್ರ ಸರ್ಕಾರವನ್ನು ನೇರವಾಗಿ ಹೊಣೆ ಮಾಡಿ ದೂರುತ್ತಿದ್ದಾರೆ. ವಾಸ್ತವ ಏನೇ ಇರಲಿ ಬೆಲೆ ಏರಿಸುವುದರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪೈಪೋಟಿಯಲ್ಲಿ ಇದ್ದಂತೆ ಕಾಣುತ್ತವೆ.
ಬೆಲೆ ಏರಿಕೆಯ ಇನ್ನೊಂದು ವೈಚಿತ್ರ್ಯವೆಂದರೆ, ಒಂದು ವಸ್ತುವಿನ ಅಥವಾ ಸೇವೆಯ ಬೆಲೆ ಏರಿಸುವಾಗ ಬೆಲೆ ಹೆಚ್ಚು ಇರುವ ರಾಜ್ಯ ಅಥವಾ ಪ್ರದೇಶವನ್ನು ಮಾನದಂಡವಾಗಿ ಉಲ್ಲೇಖಿಸುತ್ತಾರೆ. ಹಾಲಿನ ದರ ಮಹಾರಾಷ್ಟ್ರದಲ್ಲಿ ಲೀಟರ್‌ಗೆ ಸುಮಾರು ೬೦ ರೂಪಾಯಿಯಷ್ಟು ಇದ್ದು, ಇದನ್ನು ಮಾನದಂಡವಾಗಿ ಬಳಸಿಕೊಂಡು ಹಾಲಿನ ದರವನ್ನು ಏರಿಸಲಾಗಿದೆ. ಪ್ರತಿ ಬಾರಿ ಹಾಲಿನ ದರವನ್ನು ಏರಿಸಿದಾಗ ಹಾಲು ಉತ್ಪಾದಕರಿಗೆ ಸಹಾಯ ಮಾಡಲು ಕ್ರಮ ತೆಗೆದು ಕೊಂಡಿವೆ ಎನ್ನಲಾಗುತ್ತದೆ. ನಿಜವಾಗಿಯೂ ಇದರ ಲಾಭ ಹಾಲು ಉತ್ಪಾದಕರಿಗೆ ದೊರಕುತ್ತದೆಯೋ ತಿಳಿಯದು. ಏರಿಕೆಯ ಮೊದಲು ಅವರಿಗೆ ಎಷ್ಟು ದೊರಕು ತ್ತಿತ್ತು. ಏರಿಕೆಯ ನಂತರ ಅವರಿಗೆ ಎಷ್ಟು ಸಿಗುತ್ತದೆ ಎನ್ನುವ ಸರಿಯಾದ ಮಾಹಿತಿ ಕಾಣುವುದಿಲ್ಲ. ಅಕಸ್ಮಾತ್ ಬೇರೆ ರಾಜ್ಯಗಳಲ್ಲಿ ಬೆಲೆ ಕಡಿಮೆ ಇದ್ದರೆ, ಈ ಮಾನ ದಂಡವನ್ನು ಉಲ್ಲೇಖಿಸಿ ಖರ್ಚು-ವೆಚ್ಚವನ್ನು ಸರಿದೂಗಿಸಲು ಎನ್ನುವ ಸೂತ್ರವನ್ನು ಬಳಸಲಾಗುತ್ತದೆ. ತಮಿಳುನಾಡಿನಲ್ಲಿ ಸಾರಿಗೆ ದರ ಕರ್ನಾಟಕಕ್ಕಿಂತ ಕಡಿಮೆ ಎನ್ನಲಾಗುತ್ತದೆ. ಆದರೆ, ದರ ಪರಿಷ್ಕರಣೆ ಮಾಡುವಾಗ ಸಂಬಂಧಪಟ್ಟವರು ಜಾಣ ಕಿವುಡು ಮತ್ತು ಕುರುಡುತನವನ್ನು ತೋರಿಸುತ್ತಾರೆ. ಇನ್ನೊಂದು ವಿಚಿತ್ರ ವೆಂದರೆ, ದರ ಏರಿಕೆ ಕೇಂದ್ರ ಸರ್ಕಾರ ಪ್ರೇರಿತವಾಗಿದ್ದರೆ, ಹೆಚ್ಚಿನ ಪ್ರತಿಭಟನೆ ಮತ್ತು ಆಕ್ರೋಶ ಕಾಣುವುದಿಲ್ಲ. ೨೦೧೪ರಿಂದ ಪೆಟ್ರೋಲಿಯಂ ದರ, ಅಡಿಗೆ ಅನಿಲ ಸಿಲಿಂಡರ್ ಏರುತ್ತಲೇ ಇದೆ. ಬೆಲೆ ಏರಿಕೆಯನ್ನು ಖಂಡಿಸುವ ಪಕ್ಷಗಳು ಬೀದಿಗಿಳಿಯಲಿಲ್ಲ. ಇದು ದೇಶಕ್ಕಾಗಿ ಅನಿವಾರ್ಯ ಎನ್ನುವ ಗಿಳಿಪಾಠ ಒಪ್ಪಿಸು ತ್ತಾರೆ. ಪೆಟ್ರೋಲ್ ಶತಕ ಬಾರಿಸಿದರೆ, ಅಡಿಗೆ ಅನಿಲ ಸಿಲಿಂಡರ್ ೫೦೦ರಿಂದ ಸಾವಿರ ಮುಟ್ಟಿದೆ ಮತ್ತು ಅದರೊಟ್ಟಿಗೆ ಸಹಾಯ ಧನವೂ ನಿಂತಿದೆ. ಈ ಏರಿಕೆ ಬಗೆಗೆ ಮತ್ತು ಸಹಾಯಧನ ನಿಲ್ಲಿಸುವಿಕೆಗೆ ಎಲ್ಲಿಯೂ ವಿರೋಧ ಕಾಣಲಿಲ್ಲ ಮತ್ತು ಜನರು ಅನ್ಯಥಾ ನಾಸ್ತಿ ಎನ್ನುವಂತೆ ಒಪ್ಪಿಕೊಂಡಿದ್ದಾರೆ.
ಆದರೆ ರಾಜ್ಯಸರ್ಕಾರಗಳು ಏರಿಸಿದರೆ ಪ್ರತಿಭಟನೆ ನಡೆಯುತ್ತದೆ, ರಾಜ್ಯ ಸರ್ಕಾರ ಡೀಸೆಲ್ ಮೇಲೆ ಲೀಟರ್‌ಗೆ ೨ ರೂ ಏರಿಸಿದಂತೆ ಆಕ್ರೋಶ ಮುಗಿಲಿಗೇರಿತು. ಈಗ ಕೇಂದ್ರ ಸರ್ಕಾರವೂ ಅಬಕಾರಿ ಸುಂಕದ ಹೆಸರಿನಲ್ಲಿ ೨ ರೂ ಏರಿಸಿದ್ದು ಪ್ರತಿಭಟನೆ ಪಟ್ಟಿಯಲ್ಲಿ ಇದು ಕಾಣುತ್ತಿಲ್ಲ. ವಿಶೇಷವೆಂದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ ೭೩ ಡಾಲರ್‌ನಿಂದ ೬೨ಕ್ಕೆ ಇಳಿದರೂ ದೇಶದಲ್ಲಿ ತೈಲ ಬೆಲೆ ಹೆಚ್ಚಾಗುತ್ತಿದೆ. ಇದೂ ಸಾಲದು ಎನ್ನುವಂತೆ ಅಡಿಗೆ ಅನಿಲದ ದರವನ್ನು ಸಿಲಿಂಡರ್‌ಗೆ ೫೦ ರೂ.ನಷ್ಟು ಕೇಂದ್ರ ಸರ್ಕಾರ ಏರಿಸಿದೆ. ಈ ಏರಿಕೆಯಿಂದ ಜನಸಾಮಾನ್ಯರಿಗೆ ಹೊರೆ ಎಂದು ಒಪ್ಪಿಕೊಳ್ಳದೆ, ಮಾಜಿ ಸಂಸದ ಪ್ರತಾಪ ಸಿಂಹ ಅವರು ಮೂರು ವರ್ಷಗಳ ಹಿಂದೆ ೧೨೦೦ ರೂ. ಇದ್ದ ಸಿಲಿಂಡರ್ ಬೆಲೆಯನ್ನು ೮೦೦ ರೂ.ಗೆ ಇಳಿಸಿ ಈಗ ೫೦ ರೂ ನಷ್ಟು ಏರಿಸಲಾಗಿದೆ ಮತ್ತು ಮುಂದಿನ ದಿನಗಳಲ್ಲಿ ಕೊಳವೆ ಮೂಲಕ ಅನಿಲ ಪೂರೈಕೆಯಾಗುತ್ತಿದ್ದು ಇದು ೪೦೦-೫೦೦ ಕ್ಕೆ ಇಳಿಯುತ್ತದೆ ಎಂದು ಸಮರ್ಥನೆ ನೀಡಿದ್ದು ಲೇವಡಿಗೆ ಆಹಾರವಾಗಿದೆ. ಇನ್ನೂ ಮೂರು ವರ್ಷ ಬದುಕುವುದು ಹೇಗೆಂದು ಅವರು ವಿವರಿಸಿದ್ದರೆ ಚೆನ್ನಾಗಿತ್ತು. ರಾಜ್ಯ ಸರ್ಕಾರದ ಬೆಲೆ ಏರಿಕೆಯನ್ನು ವಿರೋಧಿಸುವವರಿಗೆ ಅಡಿಗೆ ಅನಿಲದ ದರ ಏರಿಸಿದ್ದು ಕಾಣುವುದಿಲ್ಲ. ಹೆದ್ದಾರಿಯಲ್ಲಿನ ಟೋಲ್ ನಿರಂತರವಾಗಿ ಏರುತ್ತಲೇ ಇದೆ. ಎರಡು ವರ್ಷದಲ್ಲಿ ಮೂರು ಬಾರಿ ಏರಿದೆ. ಎಲ್ಲೂ ಪ್ರತಿಭಟನೆ ಕಾಣುತ್ತಿಲ್ಲ ಮತ್ತು ವಾಹನಗಳ ಓಡಾಟ ಎಂದಿನಂತೆ ಇದೆ. ಒಂದು ದೇಶ ಒಂದು ತೆರಿಗೆ ಹೆಸರಿನಲ್ಲಿ ಜಿಎಸ್‌ಟಿ ಜಾರಿಗೊಳಿಸಲಾಗಿದ್ದು, ಇದು ಪರಿಷ್ಕರಣೆ ಹೆಸರಿನಲ್ಲಿ ಏರುತ್ತಲೇ ಇದೆ ಮತ್ತು ಹೊಸ ಹೊಸ ಐಟಂಗಳು ಇದಕ್ಕೆ ಸೇರಿಕೆಯಾಗುತ್ತಿವೆ.
ಜೀವ ವಿಮೆ ಮತ್ತು ಆರೋಗ್ಯ ವಿಮಾ ಪ್ರೀಮಿಯಂ ಮೇಲೆ ವಿಧಿಸಿರುವ ೧೮% ತೆರಿಗೆಯನ್ನು ತೆಗೆಯಲಾಗುವುದೆಂದು ಕಳೆದ ನವೆಂಬರ್‌ನಲ್ಲಿ ಭಾರೀ ಆಸೆ ಹುಟ್ಟಿಸಲಾಗಿತ್ತು. ಈಗ ಮಾರ್ಚ್ ತಿಂಗಳು ನಡೆಯುತ್ತಿದ್ದರೂ ಅದರ ಬಗೆಗೆ ಚಕಾರ ಕೇಳುತ್ತಿಲ್ಲ. ಕೇಂದ್ರಸಾರಿಗೆ ಮಂತ್ರಿ ಗಡ್ಕರಿ ಈ ಬಗೆಗೆ ಭಾರೀ ಲಾಬಿ ನಡೆಸಿ ದ್ದರು. ಆದರೂ ಯಾವುದೋ ನೆವದಲ್ಲಿ ತೆರಿಗೆ ಕಡಿಮೆ ಮಾಡುವುದನ್ನು ಅಥವಾ ರದ್ದು ಮಾಡುವುದನ್ನು ಮುಂದೆ ಹಾಕಲಾಗುತ್ತಿದೆ. ಇದು ದರ ಏರಿಕೆಯನ್ನು ವಿರೋಧಿಸುವವರಿಗೆ ಕಾಣಿಸುತ್ತಿಲ್ಲ. ವಿಪರ್ಯಾಸವೆಂದರೆ, ದರ ಏರಿಕೆಯನ್ನು ಕೇಂದ್ರ ಸರ್ಕಾರ ಮಾಡಿದರೆ ಸರಿ, ಅದಕ್ಕೆ ಕಾರಣ ಇರುತ್ತದೆ. ಅದನ್ನೇ ರಾಜ್ಯ ಸರ್ಕಾರ, ಅದರಲ್ಲೂ ಭಾಜಪೇತರ ಸರ್ಕಾರ ಮಾಡಿದರೆ ತಪ್ಪು. ಇದು ಯಾವ ನ್ಯಾಯ? ರಾಜ್ಯ ಸರ್ಕಾರ ಮಾಡುತ್ತಿರುವ ದರ ಏರಿಕೆಯ ಹಿಂದೆ ‘ಪಂಚ ಗ್ಯಾರಂಟಿಗಳು’ ಕಾರಣ ಎಂದು ಪುಂಗಿ ಊದುವವರು, ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಮತ್ತು ಅಡಿಗೆ ಅನಿಲ ಸಿಲಿಂಡರ್ ದರ ಏರಿಸುವುದರ ಹಿಂದೆ ತೋರಿಸುವ ಕಾರಣ ಏನು?
ರಾಜ್ಯಸರ್ಕಾರ ಮಾಡಿರುವ ದರ ಏರಿಕೆಯನ್ನು ಸರಿ ಎನ್ನಲಾಗದು. ಹಾಗೆಯೇ ತಪ್ಪು ಎಂದೂ ಹೇಳಲಾಗದು. ಇದನ್ನು ಒಂದು ಮಿತಿಯಲ್ಲಿ ಮಾಡಿದರೆ ಸರಿ. ಎಲ್ಲಾ ಬೆಲೆ ಏರಿಕೆ ಒಂದೇ ಮಟ್ಟದಲ್ಲಿ ಕಾಣುತ್ತಿರುವುದು ಜನಸಾಮಾನ್ಯರಿಗೆ ಸರಿದೂಗಿಸಲು ಕಷ್ಟವಾಗುತ್ತಿದೆ. ವಸ್ತುಗಳ ಮತ್ತು ಸೇವೆಯ ದರವು ನಿಂತ ನೀರಿನಂತೆ ಒಂದೇ ರೀತಿ ಇರಲು ಸಾಧವಿಲ್ಲ. ಹಣದುಬ್ಬರಕ್ಕೆ ಸರಿಯಾಗಿ ಅದು ಸ್ಪಂದಿಸುತ್ತಲೇ ಇರಬೇಕಾಗುತ್ತದೆ. ಆದರೆ, ಇದು ಒಂದು ಮಿತಿಯೊಳಗೆ ಇರುವಂತೆ ನೋಡ ಬೇಕು ಮತ್ತು ಗ್ರಾಹಕರು ಆಕ್ರೋಶ ವ್ಯಕ್ತ ಮಾಡದಿರುವಂತೆ ಎಚ್ಚರ ವಹಿಸಬೇಕು. ಅದಕ್ಕೂ ಮೇಲಾಗಿ ದರ ಏರಿಕೆ ಬೆಟಾಲಿಯನ್‌ದಲ್ಲಿ ಬರದಂತೆ ನಿಗಾ ವಹಿಸ ಬೇಕು. ರಾಜ್ಯದಲ್ಲಿ ಎಲ್ಲಾ ಬೆಲೆ ಏರಿಕೆಗಳು ಒಂದೇ ಉಸಿರಿನಲ್ಲಿ ಬಂದಂತೆ ಕಾಣುತ್ತವೆ. ಏರಿಕೆ ಮಾಡಿದಾಗ ಅದಕ್ಕೆ ಪೂರಕವಾಗಿ ಗ್ರಾಹಕರಿಗೂ ಯಾವುದಾದರೂ ರೀತಿಯಲ್ಲಿ ಸ್ವಲ್ಪಮಟ್ಟಿಗಾದರೂ ಅದು ಮರುಪೂರಣವಾಗುವಂತ ವ್ಯವಸ್ಥೆ ಜಾರಿಗೆ ಬರಬೇಕು. ಬೆಲೆ ಏರಿಕೆಯನ್ನು ತಡೆದುಕೊಳ್ಳಲು ಜನತೆಗೆ ಆದಾಯ ಹೆಚ್ಚಿಸಿ ಕೊಳ್ಳಲು ಏನಾದರೂ ದಾರಿ ತೋರಿಸಬೇಕು. ವಿಪರ್ಯಾಸವೆಂದರೆ ಪಂಚಗ್ಯಾರಂಟಿಗಳ ಪಂಚಾಮೃತ್ ಬೆಲೆ ಏರಿಕೆಯಲ್ಲಿ ತೇಲಿ ಹೋಗುತ್ತಿದೆ.
-ರಮಾನಂದ ಶರ್ಮಾ, ಲೇಖಕರು