ಬೆಂಗಳೂರಿನಲ್ಲಿ ಅಖಿಲ ಕರ್ನಾಟಕ ಅರ್ಚಕರ ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟದಿಂದ ರಾಜ್ಯಪಾಲರ ವಿರುದ್ಧ ಸುದ್ದಿಗೋಷ್ಠಿ ನಡೆಯಿತು. ಮುಜರಾಯಿ ಕಾನೂನು ತಿದ್ದುಪಡಿ ಕಾಯ್ದೆಯನ್ನು ರಾಜ್ಯಪಾಲರು ತಡೆ ಹಿಡಿಯುತ್ತಿ ದ್ದಾರೆ ಎಂಬುದು ಒಕ್ಕೂಟದ ಆರೋಪ.
ಮುಜರಾಯಿ ತಿದ್ದುಪಡಿ ಕಾಯ್ದೆ ಉಭಯ ಸದನಗಳಲ್ಲಿ ಸಮ್ಮತಿ ಪಡೆದಿದೆ, ಶ್ರೀಮಂತ ಎ ಮತ್ತು ಬಿ ದರ್ಜೆಯ ದೇವಸ್ಥಾನಗಳ ಹೆಚ್ಚುವರಿ ಆದಾಯದಿಂದ ಅನುಪಾತಿಕವಾಗಿ ಗ್ರಾಮೀಣ ಪ್ರದೇಶದ ಸಿ ದರ್ಜೆಯ ದೇವಸ್ಥಾನಕ್ಕೆ ಬಳಸುವ ಬಗ್ಗೆ ಈ ತಿದ್ದುಪಡಿ ಅವಕಾಶ ಕಲ್ಪಿಸಿದೆ. ಕಳೆದ ಹತ್ತು ವರ್ಷಗಳಿಂದ ರಾಜ್ಯಪಾಲರ ಅಂಕಿತಕ್ಕಾಗಿ ತಿದ್ದುಪಡಿ ಬಿಲ್ ಕಾಯುತ್ತಿದೆ, ಆದರೆ ರಾಜ್ಯಪಾಲರು ಯಾಕೆ ಇದನ್ನು ತಡೆ ಹಿಡಿದಿದ್ದಾರೆ ಎಂಬುದು ಗೊತ್ತಾಗ್ತಿಲ್ಲ ಎಂದು ಒಕ್ಕೂಟ ಹೇಳಿದೆ.
ಹಲವು ಸಲ ನಾವು ರಾಜ್ಯಪಾಲರನ್ನು ಭೇಟಿಯಾಗಿ ಬಂದಿದ್ದೇವೆ, ರಾಜ್ಯಪಾಲರು ಇದನ್ನು ನಿರ್ಲಕ್ಷಿಸುತ್ತಲೇ ಬಂದಿದ್ದಾರೆ. ದೇವಸ್ಥಾನಕ್ಕೆ ಸಂಬಂಧಿಸಿದ ಹಲವು ಜಮೀನುಗಳು ಒತ್ತುವರಿಯಾಗಿದೆ, ಇದರ ಬಗ್ಗೆಯೂ ತಿದ್ದುಪಡಿ ಬಿಲ್ ನಲ್ಲಿ ಇದೆ, ಆದರೆ ಬಿಲ್ ಜಾರಿಯಾಗುವುದಕ್ಕೆ ರಾಜ್ಯಪಾಲರು ಅಡ್ಡಿಯಾಗಿದ್ದಾರೆ ಎಂದು ಅಖಿಲ ಕರ್ನಾಟಕ ಅರ್ಚಕರ ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟ ಹೇಳಿದೆ.
ಒಕ್ಕೂಟದ ಅಧ್ಯಕ್ಷ ಪ್ರೊ.ಕೆ. ಈ ರಾಧಾಕೃಷ್ಣ, ಪ್ರಧಾನ ಕಾರ್ಯದರ್ಶಿ ಕೆ.ಎಸ್.ಎನ್ ದೀಕ್ಷಿತ್ ಹಾಗೂ ಇತರ ಮುಖಂಡರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.