ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಲ್ಲಿನ ಜನತೆಗೆ ಗ್ಯಾರಂಟಿ ಭಾಗ್ಯ ಘೋಷಿಸಿದ್ದಾರೆ. ಭಾರತ ಸೇರಿದಂತೆ ವ್ಯಾಪಾರಿ ಪಾಲುದಾರ ದೇಶಗಳ ಮೇಲೆ ಭಾರಿ ತೆರಿಗೆ ಹೇರಿದ್ದು, ಅದರಿಂದ ಸಂಗ್ರಹವಾಗುವ ಹಣವನ್ನು ಅಮೆರಿಕನ್ನರಿಗೆ ಹಂಚುವುದಾಗಿ ಟ್ರಂಪ್ ಭರವಸೆ ನೀಡಿದ್ದಾರೆ. ಶ್ರೀಮಂತರನ್ನು ಹೊರತುಪಡಿಸಿ ಎಲ್ಲರಿಗೂ 1.77 ಲಕ್ಷ ರೂ. ಹಂಚಲಾಗುವುದು ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಗ್ಯಾಂಟಿ ಯೋಜನೆಗಳ ಬಗ್ಗೆ ಲೇವಡಿ ಮಾಡುತ್ತಿದ್ದ, ಅಸಹನೆ ವ್ಯಕ್ತಪಡಿಸುತ್ತಿದ್ದ ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿಯು ಚುನಾವಣೆ ವೇಳೆ ಇತರ ರಾಜ್ಯಗಳಲ್ಲೂ ಗ್ಯಾರಂಟಿ ಘೋಷಿಸುತ್ತಲೇ ಚುನಾವಣೆ ಎದುರಿಸುತ್ತ ಬರುತ್ತಿರುವುದು ವಾಸ್ತವ. ಭಾರತೀಯ ಮೂಲದ ಮಮ್ದಾನಿ ಅಮೆರಿಕದ ನ್ಯೂಯಾರ್ಕ್‌ನ ಮೇಯರ್ ಹುದ್ದೆಗೇರುವಾಗಲೂ ಅಲ್ಲಿನ ಜನತೆಗೆ ಗ್ಯಾರಂಟಿ ಘೋಷಿಸಿದ್ದರು ಎಂಬುದು ಗಮನಾರ್ಹ.
ಟ್ರುಥ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಟ್ರಂಪ್ ಅವರು, ತೆರಿಗೆ ವಿರೋಧಿಗಳನ್ನು ಮೂರ್ಖರು ಎಂದು ಕರೆದಿದ್ದಾರೆ. ತೆರಿಗೆ ಕ್ರಮದಿಂದಾಗಿಯೇ ನಾವೀಗ ವಿಶ್ವದಲ್ಲಿ ಅತಿ ಸಿರಿವಂತ ಮತ್ತು ಗೌರವಾನ್ವಿತ ದೇಶವಾಗಿದ್ದೇವೆ. ದೇಶದಲ್ಲೀಗ ಹಣದುಬ್ಬರವಿಲ್ಲ ಹಾಗೂ ಷೇರುಮಾರುಕಟ್ಟೆ ದಾಖಲೆಯ ಮಟ್ಟಕ್ಕೆ ತಲುಪಿದೆ. ದೇಶೀಯ ಹೂಡಿಕೆ ಏರಿಕೆಯಾಗಿ ಉದ್ಯಮಗಳು ಇತ್ತ ಮುಖ ಮಾಡುತ್ತಿವೆ ಎಂದು ತಮ್ಮ ನೀತಿಯನ್ನು ಸಮರ್ಥಿಸಿಕೊಂಡಿದ್ದಾರೆ.
ಅನ್ಯ ದೇಶಗಳಿಂದ ಸಂಗ್ರಹವಾಗುವ ಹಣದಲ್ಲಿ ನಮ್ಮ 3250 ಲಕ್ಷ ಕೋಟಿ ರೂ. ಸಾಲ ತೀರಿಸುತ್ತೇವೆ. ಬಳಿಕ ಉಳಿದ ಹಣದಿಂದ ಅಮೆರಿಕನ್ನರಿಗೆ 1.77 ಲಕ್ಷ ರೂ.. ಲಾಭಾಂಶ ಹಂಚುತ್ತೇವೆ ಎಂದು ಘೋಷಿಸಿದ್ದಾರೆ.


