ನವದೆಹಲಿ: 75ನೇ ಸಂವಿಧಾನ ದಿನದ ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು 9 ಭಾಷೆಗಳಲ್ಲಿ ಭಾರತದ ಸಂವಿಧಾನದ ಡಿಜಿಟಲ್ ಆವೃತ್ತಿ ಬಿಡುಗಡೆಗೊಳಿಸಿದ್ದಾರೆ.
ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಮುರ್ಮು ಮಲಯಾಳಂ, ಮರಾಠಿ, ನೇಪಾಳಿ, ಪಂಜಾಬಿ, ಬೋಡೋ, ಕಾಶ್ಮೀರಿ, ತೆಲುಗು, ಒಡಿಯಾ ಮತ್ತು ಅಸ್ಸಾಮಿ ಭಾಷೆಗಳಲ್ಲಿ ಭಾರತದ ಸಂವಿಧಾನದ ಡಿಜಿಟಲ್ ಆವೃತ್ತಿಯನ್ನು ಬಿಡುಗಡೆ ಮಾಡಿದರು. ಇದೇ ವೇಳೆ “ಭಾರತ್ ಕೆ ಸಂವಿಧಾನ್ ಮೈ ಕಲಾ ಔರ್ ಕ್ಯಾಲಿಗ್ರಫಿ” ಎಂಬ ಸ್ಮರಣಾರ್ಥ ಕಿರುಪುಸ್ತಕವನ್ನು ಸಹ ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಸಿಪಿ ರಾಧಾಕೃಷ್ಣನ್, ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ, ಕೇಂದ್ರ ಸಚಿವರಾದ ಜೆಪಿ ನಡ್ಡಾ ಮತ್ತು ಕಿರಣ್ ರಿಜಿಜು ಮತ್ತು ರಾಜ್ಯಸಭೆಯ ಉಪಾಧ್ಯಕ್ಷ ಹರಿವಂಶ್ ಉಪಸ್ಥಿತರಿದ್ದರು. ಸಂಸತ್ತಿನ ಉಭಯ ಸದನಗಳ ಹಲವಾರು ಕೇಂದ್ರ ಸಚಿವರು ಮತ್ತು ಸದಸ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು, ಸಂವಿಧಾನವು ರಾಷ್ಟ್ರದ ಗುರುತಿನ ಮೂಲಾಧಾರ. ವಸಾಹತುಶಾಹಿ ಮನಸ್ಥಿತಿಯನ್ನು ತ್ಯಜಿಸಿ ರಾಷ್ಟ್ರೀಯತಾವಾದಿ ಚಿಂತನೆಯನ್ನು ಅಳವಡಿಸಿಕೊಳ್ಳಲು ಮಾರ್ಗದರ್ಶಿ ದಾಖಲೆಯಾಗಿದೆ. ನಮ್ಮ ಸಂವಿಧಾನವು ರಾಷ್ಟ್ರದ ಹೆಮ್ಮೆಯ ದಾಖಲೆಯಾಗಿದೆ. ಇದೊಂದು ನಮ್ಮ ರಾಷ್ಟ್ರದ ಗುರುತು ಎಂದು ತಿಳಿಸಿದ್ದಾರೆ.


