ತುಮಕೂರು ಜಿಲ್ಲೆ ಸಿದ್ಧಲಿಂಗಯ್ಯನಪಾಳ್ಯದಲ್ಲಿ 4 ವರ್ಷದ ಮಗುವನ್ನು ಹತ್ಯೆ ಮಾಡಿರುವ ಆರೋಪದಲ್ಲಿ ಚಂದ್ರಶೇಖರ್ ಎಂಬ ವ್ಯಕ್ತಿಯನ್ನು ಮಹಿಳಾ ಪೊಲೀಸರು ಬಂಧಿಸಿದ್ದಾರೆ. ಮಗು ಹಾವು ಕಚ್ಚಿ ಮೃತಪಟ್ಟಿದೆ ಎಂದು ಆರೋಪಿ ಬಿಂಬಿಸಿದ್ದ. ಅಂತ್ಯಕ್ರಿಯೆಗೂ ಮುನ್ನ ಗ್ರಾಮಸ್ಥರೊಬ್ಬರು ತೆಗೆದಿದ್ದ ಫೋಟೊದಿಂದ ಅನುಮಾನ ವ್ಯಕ್ತವಾಗಿ ಪೊಲೀಸರಿಗೆ ದೂರು ನೀಡಲಾಗಿತ್ತು. ಮಗುವಿನ ಸಾವಿನ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬಂಧಿತ ಚಂದ್ರಶೇಖರ್ ಚಾಮರಾಜನಗರದವನು, ಕ್ರಷರ್ನಲ್ಲಿ ಲಾರಿ ಚಾಲಕ. ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಬೆಳ್ಳೂರು ಕ್ರಾಸ್ನ ಕಾವ್ಯಾ ಎಂಬಾಕೆ ಅಶೋಕ್ ಎಂಬಾತನನ್ನು ವಿವಾಹವಾಗಿದ್ದಳು. ಗರ್ಭಿಣಿಯಾಗಿದ್ದಾಗಲೇ ಚಂದ್ರಶೇಖರ್ ಜೊತೆ ಹೋಗಿದ್ದು, ಬಳಿಕ ಮಗುವಿಗೆ ಜನ್ಮ ನೀಡಿದ್ದಳು. ಮಗುವಿನ ವಿಚಾರವಾಗಿ ಈ ಜೋಡಿ ಮಧ್ಯೆ ಜಗಳವಾಗುತ್ತಿತ್ತು ಎನ್ನಲಾಗಿದೆ.
ಮಾರ್ಚ್ 20ರಂದು ಕಾವ್ಯಾ ಕೆಲಸಕ್ಕೆ ಹೋದ ಸಮಯದಲ್ಲಿ ಚಂದ್ರಶೇಖರ್ ಮಗುವಿಗೆ ಹಲ್ಲೆ ನಡೆಸಿದ್ದ. ಗಾಯಗೊಂಡ ಮಿಥುನ್ ಪ್ರಜ್ಞೆ ತಪ್ಪಿಬಿದ್ದಿದ್ದ. ಮಗುವಿಗೆ ಹಾವು ಕಚ್ಚಿದೆ ಎಂದು ಸುಳ್ಳು ಹೇಳಿದ್ದ. ತಕ್ಷಣವೇ ಗ್ರಾಮಸ್ಥರು ಮಗುವನ್ನು ಊರ್ಡಿಗೆರೆ ಕ್ಲಿನಿಕ್‌ಗೆ ಕರೆದೊಯ್ದಾಗ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದರು.
ಅಂತ್ಯಕ್ರಿಯೆಗೆ ಮುನ್ನ ಸ್ಥಳೀಯ ಎಸ್ಆರ್ ಗಂಗಾಧರಯ್ಯ ಮೃತದೇಹದ ಫೋಟೊ ತೆಗೆದಿದ್ದರು. ಮಾರ್ಚ್ 22ರಂದು ಮತ್ತೆ ಇದನ್ನು ವೀಕ್ಷಿಸಿದಾಗ ಸಾವಿನ ಬಗ್ಗೆ ಅನುಮಾನ ಮೂಡಿತ್ತು. ಈ ಬಗ್ಗೆ ಗ್ರಾಮದ ಜನರು ಸೇರಿ ಚಂದ್ರಶೇಖರ್‌ನನ್ನು ಪ್ರಶ್ನಿಸಿದಾಗ ಕೊಲೆಯ ಬಗ್ಗೆ ಬಾಯಿಬಿಟ್ಟಿದ್ದಾನೆ ಎನ್ನಲಾಗಿದೆ.
ಈ ಸಂಬಂಧ ಗಂಗಾಧರಯ್ಯ ಪೊಲೀಸರಿಗೆ ದೂರು ನೀಡಿದ್ದರು, ಪ್ರಕರಣ ದಾಖಲಿಸಿಕೊಂಡ ಮಹಿಳಾ ಪೊಲೀಸ್ ಠಾಣೆ ಅಧಿಕಾರಿಗಳು ಚಂದ್ರಶೇಖರ್‌ನನ್ನು ಬಂಧಿಸಿದ್ದಾರೆ. ತಕ್ಷಣವೇ ಮಗುವಿನ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ಮಾಡಿಸಲಾಗಿದೆ.
ಈ ಹತ್ಯೆ ಪ್ರಕರಣದಲ್ಲಿ ಕಾವ್ಯಾಳ ಪಾತ್ರದ ಬಗ್ಗೆಯೂ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಮಗುವಿನ ಸಾವಿನ ನಂತರ ಕಾವ್ಯಾಳ ನಡೆ ಅನುಮಾನಾಸ್ಪದ ವಾಗಿದ್ದು, ಆಕೆಯ ಕೈವಾಡ ಇದೆಯಾ ಎಂಬ ಆಯಾಮದಲ್ಲಿಯೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.