ಗರ್ಭಿಣಿಗೆ ಮಗು ಬೇಡವೆನಿಸಿದರೆ ಏಳೂವರೆ ತಿಂಗಳು (30 ವಾರ) ತುಂಬಿದ ಬಳಿಕವೂ ಗರ್ಭಪಾತ ಮಾಡಿಸುವ ಹಕ್ಕಿದೆ ಎಂದು ಸುಪ್ರೀಂ ಕೋರ್ಟ್ ಮಹತ್ತರ ತೀರ್ಪು ನೀಡಿದೆ. ಈವರೆಗೆ ಭಾರತದಲ್ಲಿ 5 ತಿಂಗಳವರೆಗೆ ಮಾತ್ರ ಗರ್ಭಪಾತಕ್ಕೆ ಅನುಮತಿಯಿದೆ. ವಿಶೇಷ ಪ್ರಕರಣವೊಂದರ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ.
ಮಹಿಳೆಯನ್ನು ತಾಯಿಯಾಗಲು ಒತ್ತಾಯಿಸಲು ಸಾಧ್ಯವಿಲ್ಲ, ಹುಟ್ಟದೇ ಇರುವ ಮಗುವಿನ ಹಕ್ಕಿಗಿಂತಲೂ ತಾಯಿಯ ಹಕ್ಕು ಬಹಳ ಮುಖ್ಯ ಎಂದು ನ್ಯಾಯಾಲಯ ಹೇಳಿದೆ. ವಿವಾಹಿತೆ, ಅವಿವಾಹಿತೆ, ಅಪ್ರಾಪ್ತ ವಯಸ್ಕೆ ಆಗಿರಲಿ, ಅನಗತ್ಯ ಗರ್ಭಧಾರಣೆ ಯನ್ನು ಮುಂದುವರಿಸಲು ಒತ್ತಾಯಿಸಲು ಕಾನೂನಿಗೂ ಸಾಧ್ಯವಿಲ್ಲ. ಅಪ್ರಾಪ್ತ ವಯಸ್ಕಳಾಗಿದ್ದಾಗ ಗರ್ಭ ಧರಿಸಿದ ಹುಡುಗಿಯ 30 ವಾರಗಳ ಗರ್ಭಧಾರಣೆಯನ್ನು ವೈದ್ಯಕೀಯವಾಗಿ ಮುಕ್ತಾಯಗೊಳಿಸಲು ಅನುಮತಿ ನೀಡಿದ ಸುಪ್ರೀಂ ಕೋರ್ಟ್ ಈ ಹೇಳಿಕೆ ನೀಡಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಮತ್ತು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರ ನ್ಯಾಯಪೀಠವು, ಗರ್ಭಿಣಿಯ ಸಂತಾನೋತ್ಪತ್ತಿ ಸ್ವಾಯತ್ತತೆಗೆ ಸರಿಯಾದ ಪ್ರಾಮುಖ್ಯತೆ ನೀಡಬೇಕು ಎಂದು ಹೇಳಿದೆ. ವಿಶೇಷವಾಗಿ ಅವಳಿಗೆ ಮಗುವನ್ನು ಹೆರಲು ಇಷ್ಟವಿಲ್ಲವೆಂದು ಸ್ಪಷ್ಟವಾಗಿ ಹೇಳುತ್ತಿರುವಾಗ ಆ ಮಗುವನ್ನು ಹೆರಲೇಬೇಕೆಂದು ಒತ್ತಾಯಿಸಲು ಸಾಧ್ಯವಿಲ್ಲ ಎಂದಿದೆ.
ಅರ್ಜಿ ಸಲ್ಲಿಸಿರುವ ಯುವತಿಯ ವಯಸ್ಸು ಮತ್ತು ಹಕ್ಕನ್ನು ಗಮನದಲ್ಲಿಟ್ಟುಕೊಂಡು ಈ ತೀರ್ಪು ನೀಡಲಾಗಿದೆ. ಯುವತಿಯದ್ದು ಉದ್ದೇಶಪೂರ್ವಕ ಗರ್ಭಧಾರಣೆ ಅಲ್ಲದ ಕಾರಣ ಮತ್ತು ಆ ಹುಡುಗಿ ಮಗುವನ್ನು ಹೆರಲು ಬಯಸದ ಕಾರಣ ಗರ್ಭಪಾತಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಕೋರ್ಟ್ ಹೇಳಿದೆ.
ಹುಡುಗಿ 17ನೇ ವಯಸ್ಸಿನಲ್ಲಿ ಗರ್ಭ ಧರಿಸಿದ್ದಳು. ಆಕೆಗೆ ಈಗ 18 ವರ್ಷ. ಆಕೆಯ ಗರ್ಭಧಾರಣೆಗೆ 30 ವಾರ ಆಗಿದೆ, ಸ್ನೇಹಿತನೊಂದಿಗಿನ ಸಂಬಂಧದಿಂದ ಗರ್ಭಿಣಿಯಾಗಿದ್ದು ಮದುವೆಯಾಗದೆ ಗರ್ಭಧಾರಣೆ ಮುಂದುವರಿಸುವುದು ಆ ಹುಡುಗಿಗೆ ಮಾನ ಸಿಕವಾಗಿ ಮತ್ತು ದೈಹಿಕವಾಗಿ ಆಘಾತಕಾರಿಯಾಗಿದೆ ಎಂದು ವಾದಿಸಲಾಗಿತ್ತು. ವೈದ್ಯಕೀಯ ಮಂಡಳಿಯ ವರದಿಯನ್ನು ಪರಿಶೀಲಿಸಿದ ನಂತರ ಈ ಸಮಯದಲ್ಲಿ ಗರ್ಭಪಾತಕ್ಕೆ ಅನುಮತಿಸಿದರೆ ಆ ಹುಡುಗಿಗೆ ಯಾವುದೇ ಗಂಭೀರ ಅಪಾಯ ಆಗು ವುದಿಲ್ಲ ಎಂದಾದರೆ ಆಕೆ ಬಯಸಿದರೆ ಗರ್ಭಪಾತಕ್ಕೆ ಅನುಮತಿ ನೀಡಲಾಗಿದೆ.


