ಮನ್ಯಾಗ ಖಾಲಿ ಕುಂತೇನಿ ಅಂತೇಳಿ ಒಂದು ಕವನ ಬರದು ನೀನಿಲ್ಲದ ಲೋಕವಿದು ಬರಿ ಶೂನ್ಯ. ಅನುದಿನವೂ ನಿನ್ನ ನೆನೆಯುತಿದೆ ನನ್ನ ಮನ ಅಂತ ಬರೆದು ಯಜಮಾನ್ತಿಗಿ ಕಳಸಿದ್ನಿ ಅದನ್ನ ನೋಡಿ ಯಜಮಾನ್ತಿ ಖುಷಿ ಅಕ್ಕಾಳಂದ್ರ ಯಾರಕಿ, ನಾ ಇಲ್ಲದಾಗ ಯಾರ್‌ನ ಹೊಗಳಿ ಕವನ ಬರದೀ ಅಂತ ಡೈರೆಕ್ಟ್ ಎನ್‌ಕ್ವಾಯರಿನ ಶುರು ಮಾಡಿದ್ಲು. ಅಷ್ಟು ಚಂದ ಕವನಾ ಬರದೇನಿ ಚಂದ್ ಐತೊ ಇಲ್ಲೊ ಹೇಳು ಅಂದ್ನಿ ಯಾರ್ ಬಗ್ಗೆ ಬರದಿ ಮದ್ಲ ಹೇಳು ಆ ಮ್ಯಾಲ ಚೂಲೊ ಐತೋ ಕೆಟ್ ಐತೊ ಅಂತ ಹೇಳಿನಿ ಅಂದ್ಲು.
ಇದೊಳ್ಳೆ ವಿಧಾನಸಭೆದಾಗ ನಂಗೂ ಆರ್‌ಎಸ್‌ಎಸ್ ಬಗ್ಗೆ ಗೊತ್ತು ಅಂತ ಹೇಳಿ ಡಿಸಿಎಂ ಡಿಕೆ ಸಾಹೇಬ್ರು ಆರ್‌ಎಎಸ್‌ಎಸ್ ಪ್ರಾರ್ಥನಾ ನಮಸ್ತೆ ಸದಾ ವತ್ಸಲೆ ಮಾತೃಭೂಮೇ ಅಂತ ಹೇಳಿ ಇಕ್ಕಟ್ಟಿನ್ಯಾಗ ಸಿಕ್ಕಾಕ್ಕೊಂಡಂಗ ಆತು ಅನಸ್ತು. ಕವಿ ಆದಾಂವ ಕವನ ಬರದಾಗ ಅದನ್ನ ಓದಾರು ನನ್ನ ಬಗ್ಗೆನ ಬರದಾನನ ಅಂತ ಅನಕೊಂಡು ಓದಿ ಖುಷಿ ಪಟ್ರ ಬರದಾಂವಗೂ ಖುಷಿ ಅಕ್ಕೇತಿ. ಆದ, ಅದ್ರಾಗ ಹುಳುಕು ಹುಡುಕಿದ್ರ ಆರ್‌ಎಸ್‌ಎಸ್ ಹಾಡಿನ ಬಗ್ಗೆ ಕಾಂಗ್ರೆಸ್ ತೀರ್ಮಾನ ತೊಗೊಂಡಂಗ ಅಕ್ಕೇತಿ.
ವಿಧಾನಸಭಾ ಅಧಿವೇಶನ ಅಂದ್ರ ಸೇರಿಗೆ ಸವ್ವಾಸೇರು ಅನ್ನುವಂಗ ಸವಾಲಿಗಿ ಪಾಟೀ ಸವಾಲು ಹಾಕಿ ಎದುರಿಗಿ ಇರಾರ ಮಾತಿನ್ಯಾಗ ಕಟ್ಟಿ ಹಾಕೂದ ಅಲ್ಲಿಗಿ ಬರೂ ನಾಯಕರ ತಾಕತ್ತು ಏನು ಅಂತ ತೋರಸಾಕ ಇರೂ ವೇದಿಕೆ. ಪ್ರತಿಪಕ್ಷದ ನಾಯಕರು ಯಾವುದೋ ಸವಾಲು ಹಾಕಿದಾಗ ಆಡಳಿತ ಪಕ್ಷದಾಗ ಇರಾರು ಅದ್ರಾಗೂ ಸಿಎಂ, ಡಿಸಿಎಂ ಆದಾರು ಅವರಿಗೆ ಕೌಂಟರ್ ಕೊಡಲಿಲ್ಲ ಅಂದ್ರ ಸರ್ಕಾರ ಮುಜುಗರಕ್ಕೊಳಗಾಗಿ ಮಾರನೇ ದಿನಾ ಮಂದ್ಯಾಗ ಮುಖಾ ತೋರಸದಂಗ ಅಕ್ಕೇತಿ. ಹಿಂಗಾಗಿ ವಿರೋಧ ಪಕ್ಷದಾರು ಹೇಳೂ ಯಾವದ ವಿಷಯಕ್ಕೂ ನಿಮಗಿಂತ ಜಾಸ್ತಿ ನಮಗೂ ಗೊತ್ತು ಅಂತ ತೋರಸೂದು ಸರ್ಕಾರದಾಗ ಇರಾರ ತಾಕತ್ತು. ಮನ್ನಿ ನಡದಿರೋ ಅಧಿವೇಶನದಾಗ ಡಿಸಿಎಂ ಡಿಕೆ ಸಾಹೇಬ್ರೂ ವಿರೋಧ ಪಕ್ಷದಾರು ಹಿಂದೂವಿರೋಧಿ ಸರ್ಕಾರ ಅಂತ ಆರೋಪ ಮಾಡಿದ್ಕ ತಿರಗೇಟು ಕೊಡಬೇಕಂತೇಳಿ ಆರ್‌ಎಸ್‌ಎಸ್ ಬಗ್ಗೆ ನನಗೂ ಗೊತ್ತು ಅಂತೇಳಿ, ಅದರ ಪ್ರಾರ್ಥನಾ ಹಾಡನ ತುಂಬಿದ ಸದನದಾಗ ಹಾಡಿ ವಿರೋಧ ಪಕ್ಷದಾರು ಬಾಯಿ ತಕ್ಕೊಂಡು ನೋಡುವಂಗ ಮಾಡಿದ್ರು, ಆದ್ರ ಅವರ ಪಕ್ಷದಾಗಿನ ಅವರ ವಿರೋಧಿಗೋಳು ಅದನ್ನ ಅಸ್ತ್ರಾ ಮಾಡ್ಕೊಂಡು ಪಕ್ಷದ ಹೈಕಮಾಂಡ್‌ಗೆ ಕಿಡ್ಡಿ ಇಟ್ಟು ಡಿಸಿಎಂನೂ ರಾಜಣ್ಣನಂಗ ಮಂತ್ರಿ ಸ್ಥಾನಾ ಕಸಗೊಂಡು ಮನಿಗಿ ಕಳಿಸಿ ಬಿಡಬೌದು ಅನ್ನೂ ಲೆಕ್ಕಾಚಾರ ಹಾಕಿದ್ರ ಅಂತ ಕಾಣತೈತಿ. ಕಾಂಗ್ರೆಸ್ ಹೈಕಮಾಂಡ್‌ಗೂ ಆರ್‌ಎಸ್‌ಎಸ್ ಅಂದ್ರೆ ಯಾಕ್ ಅಷ್ಟ ಸಿಟ್ಟೊ ಗೊತ್ತಿಲ್ಲಾ. ಡಿಕೆ ಸಾಹೇಬ್ರು ಬಹಿರಂಗವಾಗಿ ಮುಲಾಜಿಲ್ಲದ ಸಾರಿ ಕೇಳುವಂಗ ಮಾಡಿದ್ರು.
ಕಾಂಗ್ರೆಸ್‌ನ್ಯಾರು ಯಾರ್ನ ಒಲಸ್ಕೊಳ್ಳಾಕ ಆರ್‌ಎಸ್‌ಎಸ್‌ನ ವಿರೋಧ ಮಾಡಾಕತ್ತಾರೋ ಏನು ಆರ್‌ಎಸ್‌ಎಸ್ ಬಗ್ಗೆನ ಅವರಿಗೆ ಅಷ್ಟೊಂದು ಕೆಟ್ ಭಾವನೆ ಐತೊ ಗೊತ್ತಿಲ್ಲಾ. ಒಂದು ಸಂಘ, ಸಮಾಜ. ಅಂದ ಮ್ಯಾಲ ಚೊಲೊದು ಕೆಟ್ಟದ್ದು ಇದ್ದ ಇರತಾವು ಎಲ್ಲಾ ವ್ಯವಸ್ಥೆದಾಗೂ ಎಲ್ಲಾರಿಗೂ ಎಲ್ಲಾನೂ ಸರಿ ಐತಿ ಅಂತ ಅನಸೂದಿಲ್ಲ. ಕಾಂಗ್ರೆಸ್ ನ್ಯಾಗ ರಾಹುಲ್ ಗಾಂಧಿ ಎಷ್ಟೊ ವಿಷಯದಾಗ ನಡಕೊಳ್ಳೋ ರೀತಿ ಸರಿಯಿಲ್ಲ ಅಂತ ಎಷ್ಟು ಮಂದಿ ಹೇಳೂದಿಲ್ಲಾ ? ರಾಜಣ್ಣ ಒಬ್ರು ಬಾಯಿ ಬಿಟ್ಟು ಹೇಳಿ ಅಧಿಕಾರ ಕಳಕೊಂಡು ಕುಂತು. ಹಂಗಂತ ಎಲ್ಲಾರ ಮಾತು, ನಡವಳಿಕೆ ಎಲ್ಲಾರಿಗೂ ಸರಿ ಇರಬೇಕು ಅಂತೇನು ಇಲ್ಲಾ. ಪ್ರಜಾಪಭುತ್ವ ಅಂದಮ್ಮಾಲ ಹೊಗಳೂದು ತೆಗಳೂದು ಇದ್ದ ಇರತೈತಿ.
ಹಂಗ ನೋಡಿದ್ರ ಎಷ್ಟೋ ಸಾರಿ ಕಾಂಗ್ರೆಸ್ ಪಕ್ಷದ ತೀರ್ಮಾನಗೋಳು ಆ ಪಕ್ಷಾನ ಹಿಂದೂಗೋಳ ವಿರೋಧಿ ಐತನ ಅನ್ನುವಷ್ಟರ ಮಟ್ಟಿಗಿ ಇರತಾವು. ಕುಂಭ ಮೇಳಕ್ಕೆ ಹೋದ್ರ ಏನ್ ಮಾಡಿದ ಪಾಪ ತೊಳದ ಹೊಕ್ಕೇತನ ಅನ್ನೋದು, ಸಾಲಿ ಗ್ರೌಂಡಿನ್ಯಾಗ ಗಣಪತಿ ಇಡಬಾರದು, ಡಿಜೆ ಹಚ್ಚಬಾರದು ಅಂತೆಲ್ಲಾ ಕಂಡಿಷನ್ ಹಾಕೂದು ನೋಡಿದ್ರ ಆ ಪಕ್ಷದ ನಾಯಕರ ಉದ್ದೇಶ ಏನು ಅಂತನ ತಿಳಿದಂಗ ಆಗೇತಿ. ಸ್ವಾತಂತ್ರ್ಯ ಹೋರಾಟದ ಸಂದರ್ಭದಾಗ ತಿಲಕರು ಬ್ರಿಟೀಷರ ವಿರುದ್ಧ ಎಲ್ಲಾ ಭಾರತೀಯರು ಒಗ್ಗೂಡಾಕ ಅಂತೇಳಿ ಸಾರ್ವಜನಿಕ ಗಣೇಶೋತ್ಸವಾ ಶುರು ಮಾಡಿದ್ರಂತ, ಅವಾಗಿನ ಮುಸ್ಲಿಂ ಲೀಗೂ ಈಗಿನ ಕಾಂಗ್ರೆಸ್‌ನಂಗ್ ವಿರೊಧ ಮಾಡಿತ್ತೊ ಇಲ್ಲೊ ಅಷ್ಟು ಮೈಮ್ಯಾಲ್ ತೊಗೊಂಡಾರು. ಪಕ್ಷದ ಮುಖಂಡರು ಆರ್‌ಎಸ್‌ಎಸ್‌ನ ಹೊಗಳಿದ್ರ ಎಲ್ಲಿ ಓಟ್ ಬ್ಯಾಂಕ್ ಕೈಕೊಡತೈತೆನೊ ಅಂತ ಅನಕೊಂಡಾರೋ ಗೊತ್ತಿಲ್ಲ. ಸಾರ್ವಜನಿಕ ಜೀವನದಾಗ ಇರಾರು ಎಲ್ಲಾ ಧರ್ಮ, ಸಮಾಜ, ಜಾತಿ, ವ್ಯವಸ್ಥೆ ಬಗ್ಗೆ ತಿಳಕೊಂಡಿರಬೇಕು. ಆದ್ರಾಗ ರಾಜಾ ಆದಾವ್ರು ವಿರೋಧಿಗಳ ಹಿಂದಿರೋ ಶಕ್ತಿ ಯಾವುದು, ಅದಕ್ಕ ಯಾ ಆಸ್ತ್ರಾ ಬಳಸಬೇಕು ಅಂತ ತಿಳಕೊಬೇಕು ಅಂದ್ರ ವಿರೋಧಿಗಳ ಮೂಲದ ಬಗ್ಗೆ ತಿಳಕೊಂಡಿರಬೇಕು. ಹಂಗ ಡಿಕೆ ಸಾಹೇಬ್ರು ಆರ್‌ಎಸ್‌ಎಸ್ ಬಗ್ಗೆ ತಿಳಕೊಂಡಾರು ಅಂತ ಅನಸ್ತೈತಿ, ಸಣ್ಣಾರಿದ್ದಾಗ ಶಾಖಾಕ ಹೋಗಿ ಕಬಡ್ಡಿ ಆಡಿ ಕಾಲು ಕೆತ್ತಿಸಿಕೊಂಡು ಬಂದೂ ಬಂದಿರಬೌದು. ಈಗ ಅದನ್ನ ಹೇಳಿದ್ರಂತೂ ಪೂರಾ ಅವರ ಬುಡಕ್ಕ ಬರತೇನೊ ಏನೋ. ಕಾಂಗ್ರೆಸ್‌ನ್ಯಾಗ ಇರೋ ಅವರ ವಿರೋಧಿಗೋಳು ಡಿಕೆ ಸಾಹೇಬು ಸಣ್ಣಾರಿದ್ದಾಗ ಎಲ್ಲರ ಶಾಖಾದ ಗಣವೇಶ ಧರಿಸಿ ನಿಂತಿರೋ ಫೋಟೊ ಐತೆನ ಅಂತೇಳಿ, ಧರ್ಮಸ್ಥಳದಾಗ ಯಾವನೋ ಮಾಸ್ಕ್ ಮ್ಯಾನ್ ಹೇಳಿದಂತೇಳಿ ಕಂಡ್ ಕಂಡಲ್ಲಿ ತಗ್ಗು ತಗದು ಹೆಣಾ ಹುಡುಕಿದ್ರಲ್ಲಾ ಹಂಗ್ ಹುಡುಕಾಕ್ ಏನಾದ್ರೂ ಸಿಕ್ರೆಟ್ ಎಸ್‌ಐಟಿ ಕೆಲಸಾ ಮಾಡಾಕತ್ತಿರಬೇಕು. ಹಿಂದ್ ಬಿಜೆಪ್ಪಾಗಿದ್ದು ಚಡ್ಡಿ ಹಾಕೊಂಡು ಶಾಖಾಕ ಹೋಗಿ ಈಗ ಅಧಿಕಾರದ ಸಲುವಾಗೊ, ಅಸ್ತಿತ್ವಾ ಉಳಸ್ಕೊಳ್ಳಾಕೊ ಕಾಂಗ್ರೆಸ್‌ಗೆ ಹೋಗಿರಾರು ಎಷ್ಟು ಮಂದಿ ಕಾರ್ಯಕರ್ತರು ಅದಾರೊ, ಎಷ್ಟು ಮಂದಿ ನಾಯಕರದಾರೊ ಗೊತ್ತಿಲ್ಲಾ, ಈಗ ಅಂತಾರ್ನೆಲ್ಲಾ ಹುಡುಕಾಕ ಕಾಂಗ್ರೆಸ್ ಹೈಕಮಾಂಡ್ ಇಂಟರನಲ್ ಎಸ್‌ಐಟಿ ಮಾಡಿ ಹುಡುಕಿ ಹೊರಗ ಹಾಕ್ತಾರೊ ಏನೊ ಗೊತ್ತಿಲ್ಲಾ. ಹಂಗೇನರ ಪಕ್ಕಾ ಸಂಘದ ಶಾಖಾಕ ಹೋಗಿ ಕಬಡ್ಡಿ ಆಡಿ ಯಾರು ಮಣಕಾಲು ಕೆತ್ತಿಸಿಕೊಂಡಾರೊ ಅಂತ ತಿಳಕೊಳ್ಳಾಕ ಎಲ್ಲಾರದೂ ಪ್ಯಾಂಟ್ ಕಳದ ಮಣಕಾಲು ಚೆಕ್ ಮಾಡ್ತಾರೋ ಏನೋ ಯಾರಿಗೊತ್ತು. ಯಾಕಂದ್ರ ಆರ್‌ಎಸ್‌ಎಸ್ ಶಾಖಾದಾಗ ಪ್ರೊ ಕಬಡ್ಯಾರಂಗ ಮ್ಯಾಟ್ ಮ್ಯಾಲ್ ಮಣಕೈಗೆ ಮಣಕಾಲಿಗೆ ಫುಲ್ ಗ್ಲೌಸ್ ಹಾಕಿ ಕಬಡ್ಡಿ ಆಡೋದಿಲ್ಲ. ಅಲ್ಲೇನಿದೂ, ಗಟ್ಟಿ ಮಣ್ಣಾಗ ಆಟ, ಕಾಲ್ ಕೆತ್ತಿದ್ರೂ ಆಡಬೇಕು. ದುಬ್ಬ ಕೆತ್ತಿದ್ರೂ ಆಡಬೇಕು ಅಂದ್ರ ಎದುರಗಡೆ ಎಷ್ಟ ದೊಡ್ಡ ಶಕ್ತಿ ಇದ್ರೂ ಅಪರೇಷನ್ ಸಿಂದೂರ ಥರಾ ಅವರ ಗ್ರೌಂಡಿನ್ಯಾಗ ಹೊಕ್ಕ ಹೊಡದ ಬರತೇನಿ ಅನ್ನೂ ಧೈರ್ಯ ತುಂಬೂದು, ಎಲ್ಲಾರೂ ಒಗ್ಗಟ್ಟಾಗಿ ಇರಬೇಕು ಅನ್ನೋದು ಅಷ್ಟ ಶಾಖಾದಾಗ ಕಬಡ್ಡಿ ಆಡ್ಸೂ ಉದ್ದೇಶ.
ಕಾಂಗ್ರೆಸ್‌ನ್ಯಾರು ಆರ್‌ಎಸ್‌ಎಸ್‌ನ ವಿರೋಧಿಸೊ ಭರದಾಗ ಹಿಂದೂ ಧರ್ಮಕ ಅವಮಾನ ಮಾಡಾಕತ್ತಾರು ಅಂತ ಅನಸ್ತೈತಿ, ಕಾಂಗ್ರೆಸ್ನ್ಯಾಗೂ ಎಟಿ ಪರ್ಸೆಂಟ್ ಹಿಂದೂಗೋಳ ಅದಾರು, ದಿನ್ನಾ ಮುಂಜಾನಿ ಶಾಖಾದಾಗ ಏಕಾತ್ಮತಾ ಸ್ತೋತ್ರ ಹೇಳತಾರು ಅದ್ರಾಗ ಅಖಂಡ ಭಾರತದ ಬಗ್ಗೆ ಹೇಳತಾರು. ಈ ದೇಶದ ನದಿ, ಬೆಟ್ಟ, ಪರ್ವತ, ಋಷಿ ಮುನಿಗೋಳು, ಪುರಾಣಪುಣ್ಯ ಪುರುಷರು, ವಿಜ್ಞಾನಿಗೋಳು, ಬೌದ್ಧ, ಜೈನ, ಸಿಖ್ ಧರ್ಮ ಗುರುಗೋಳು, ದೇಶದ ರಕ್ಷಣೆಗೆ ಹೋರಾಡಿದ ಛತ್ರಪತಿ ಶಿವಾಜಿ, ಮಹಾರಾಣಾ ಪ್ರತಾಪ್ ಸಿಂಹ, ಕೃಷ್ಣದೇವರಾಯ, ಕಿತ್ತೂರು ಚನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮೀ ಬಾಯಿ, ಸಮಾಜ ಸುಧಾರಕರಾದ ಬಸವಣ್ಣ, ರಾಜಾರಾಂ ಮೋಹನ್ ರಾಯ್, ಗಾಂಧೀಜಿ, ನಾರಾಯಣ ಗುರು, ಅಂಬೇಡ್ಕರ್ ಎಲ್ಲಾರ್ನೂ ಸ್ಮರನೀಯಾ ನಿರಂತರಂ ಅಂತ ಈ ದೇಶ ಕಟ್ಟಿದ ನಿಮ್ನ ದಿನ್ನಾ ನೆನಪಿಸ್ಕೋತೇವಿ ಅಂತ ಹೇಳ್ತಾರು. ಡಿಕೆ ಸಾಹೇಬ್ರಂತಾರು ಯಾರ್ ಏನರ ಅನಕೊಳ್ಳಲಿ ಅಂತೇಳಿ ತಮ್ಮ ಧರ್ಮ ನಿಷ್ಠೆ ಪಾಲನೆ ಓಪನ್ನಾಗೆ ಮಾಡ್ತಾರು. ಹೈಕಮಾಂಡ್ ಬ್ಯಾಡಂದ್ರೂ ಕುಂಭಮೇಳಕ್ಕ ಹೋಗಿ ಗಂಗಾ ನದ್ಯಾಗ ಮುಳುಗಿ ಪುಣ್ಯ ಸಿಗಲಿ ಅಂತ ಬೇಡ್ಕೊಂಡು ಬರತಾರು, ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆದೈತಿ, ಮಂಜುನಾಥನ ಬೆನ್ನಿಗಿ ನಾ ಅದೇನಿ ಅಂತೇಳಿ ತಮಗಿರೋ ದೈವ ಭಕ್ಷಿನ ಬಹಿರಂಗವಾಗೇ ತೋರಿಸಿಕೊಳ್ತಾರು. ಆದ, ಕಾಂಗ್ರೆಸ್‌ನ್ನಾಗ ಇದ್ಕೊಂಡು ಧರ್ಮನಿಷ್ಠೆ ತೋರಿಸೊ ತಾಕತ್ತು ಎಲ್ಲಾರಿಗೂ ಬರಬೇಕಲ್ಲಾ. ಈಗಿನ ಪರಿಸ್ಥಿತ್ಯಾಗ ಕಾಂಗ್ರೆಸ್‌ಗೆ ಡಿಕೆ ಸಾಹೇಬ್ರು ಬಿಸಿ ತುಪಿದ್ದಂಗ ನುಂಗಾಕು ಆಗೂದಿಲ್ಲಾ, ಉಗಳಾಕೂ ಆಗುದಿಲ್ಲಾ, ಬಾಯಾಗ ಹಾಕಿರೋ ತುಪ್ಪ ತಣ್ಣಗೆ ಆಗೂ ಮಟಾ ನಾಲಿಗ್ಯಾಗನ ಹೊಳಾಡ್ಸಿ ನುಂಗಬೇಕು. ಮೊದ್ಲ ಡಿಕೆ ಸಾಹೇಬ್ರು ನವೆಂಬರ್ ಕ್ರಾಂತಿ ಸಲುವಾಗಿ ಪಯತ್ನ ಕೈಕೊಟ್ಟರೂ ಪಾರ್ಥನೆ ಕೈಕೊಡುದಿಲ್ಲ ಅನ್ನೂ ನಂಬಿಕೆ ಇಡ್ಕೊಂಡು ಆದಾರು.
ಅವರಿಗಿ ಇರೋ ದೈವ ಭಕ್ತಿ ನಂಬಿರೋ ಧರ್ಮ, ಮಾಡಾಕತ್ತಿರೋ ಪ್ರಾರ್ಥನಾ ನೋಡಿದ್ರ ಅವರ ಪಕ್ಷ ಕೈಕೊಟ್ರು ದೇವರು ಕೈಬಿಡುದಿಲ್ಲ ಅಂತ ಅನಸ್ತೈತಿ ಹಿಂಗಾಗೆ ಅವರೂ ಇತ್ತೀಚೆಗೆ ಫುಲ್ ಕೂಲ್ ಆಗೆ ನವೆಂಬರ್ ಕ್ರಾಂತಿ ಅಕ್ಕೇತಿ ಅಂತ ಸಮಾಧಾನದಾಗ ಅದಾರು ಅಂತ ಅನಸ್ತೈತಿ. ಆ ಮಂಜುನಾಥನ ಕೃಪೆ ಯಾವಾಗ ಅಕ್ಕೆತೊ ದೇವರ ಬಲ್ಲಾ.
ನಮಗ ನಮ್ ಮನ್ಯಾಗ ಕ್ರಾಂತಿ ಆಗದಿದ್ರ ಸಾಕು, ಯಜಮಾನಿ ನಾ ಕವನಾನ ಅಕಿ ಬಗ್ಗೆನ ಬರದೇನಿ ಅಂದ್ಕೊಂಡ್ರ ಸಾಕು ಅಂತೇಳಿ ನಿನ್ ಬಿಟ್ರ ನನ್ ಕವನದ ನಾಯಕಿ ಯಾರದಾರು ಹೇಳು ಅಂತೇಳಿ ಸಮಾಧಾನ ಮಾಡಿದ್ನಿ
-ಶಂಕರ ಪಾಗೋಜಿ