ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೊ ವೈರಲ್ ಪ್ರಕರಣದಲ್ಲಿ ಪೆನ್ಡ್ರೈವ್ ಹಂಚಿಕೆ ವಿಚಾರವಾಗಿ ವಿಶೇಷ ತನಿಖಾ ತಂಡ ಹಾಸನದ ಹಿರಿಯ ಸಿವಿಲ್ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದೆ. 13,712 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದ್ದು, 52 ಜನರ ಹೆಸರು ಉಲ್ಲೇಖಿಸಲಾಗಿದೆ. 39 ಜನರ ವಿರುದ್ಧ ಆರೋಪಗಳು ಸಾಬೀತಾಗಿವೆ ಎಂದು ಎಸ್ಐಟಿ ತಿಳಿಸಿದೆ.
2024ರ ಲೋಕಸಭಾ ಚುನಾವಣೆಯ ವೇಳೆ ಜೆಡಿಎಸ್ ಏಜೆಂಟ್ ಆಗಿದ್ದ ವಕೀಲ ಪೂರ್ಣಚಂದ್ರ ನೀಡಿದ ದೂರಿನ ಆಧಾರದಲ್ಲಿ ತನಿಖೆ ಆರಂಭವಾಗಿತ್ತು. ಅಶ್ಲೀಲ ವೀಡಿಯೊ ಹಂಚಲು ಆರೋಪಿಗಳು ಹಾಸನದಲ್ಲೇ 70 ಪೆನ್ಡ್ರೈವ್ಗಳನ್ನು ಖರೀದಿಸಿದ್ದ ವಿಚಾರ ಪತ್ತೆಯಾಗಿದ್ದಾಗಿ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ. 277 ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಲಾಗಿದೆ. ತಾಂತ್ರಿಕ ಸಾಕ್ಷ್ಯಗಳು ಹಾಗೂ ಫೋರೆನ್ಸಿಕ್ ಸೈನ್ಸ್ ಲ್ಯಾಬ್ ವರದಿ ಆಧರಿಸಿ ಆರೋಪಿಗಳ ವಿರುದ್ಧ ದೋಷಾರೋಪ ಹೊರಿಸಲಾಗಿದೆ.
ಎ1 ನವೀನ್, ಎ2 ಪ್ರಜ್ವಲ್ ಅವರ ಕಾರು ಚಾಲಕರಾಗಿದ್ದ ಕಾರ್ತಿಕ್ ಎನ್, ಎ3 ಚೇತನ್ ಬಿಸಿ, ಎ4 ಚೇತನ್ ವೈ ಎಸ್, ಎ5 ಲಿಖಿತ್ ಗೌಡ ಸೇರಿದಂತೆ 39 ಆರೋಪಿಗಳ ವಿರುದ್ಧ ದೋಷಾರೋಪ ಮಾಡಲಾಗಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಹೆಸರುಗಳೂ ಸೇರಿವೆ. ಬಿಜೆಪಿ ನಾಯಕ ಪ್ರೀತಂಗೌಡ, ಸಂಸದ ಶ್ರೇಯಸ್ ಅತ್ಯಾಪ್ತರ ವಿರುದ್ಧ ಆರೋಪ ಸಾಬೀತಾಗಿದೆ.
ಪೆನ್ಡ್ರೈವ್ ಹಂಚಿಕೆ ಕೇಸ್ನಲ್ಲಿ ಪ್ರಜ್ವಲ್ ಆರೋಪಿಯಾಗಿಗಿದ್ದು, ಮಹಿಳೆಯರ ಸಮ್ಮತಿಯಿಲ್ಲದೆ ಮೊಬೈಲ್ ಮೂಲಕ ವೀಡಿಯೊ ಚಿತ್ರೀಕರಣ ಮಾಡಿ ಪೆನ್ಡ್ರೈವ್ ಮೂಲಕ ಹಂಚಿಕೆ ಮಾಡಿದ ಆರೋಪಗಳನ್ನು ಎಸ್ಐಟಿ ದೃಢಪಡಿಸಿದೆ. ಕೆಲವು ಆರೋಪಿಗಳು ಮೊಬೈಲ್ಗಳಿಂದ ಇತರರಿಗೆವೀಡಿಯೊ ಹಂಚಿರುವುದನ್ನು ತನಿಖಾ ತಂಡ ಪತ್ತೆ ಮಾಡಿದೆ. ಈ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಹೆಸರೂ ಉಲ್ಲೇಖವಾಗಿದ್ದರೂ, ಚಾರ್ಜ್ಶೀಟ್ನಲ್ಲಿ ಅವರ ಹೆಸರು ಸೇರಿಸಿಲ್ಲ ಎನ್ನಲಾಗಿದೆ.


