ಬಿಜೆಪಿ ಸರ್ಕಾರ ತನ್ನ ಅಧಿಕಾರದ ಅವಧಿಯಲ್ಲಿ ಅವೈಜ್ಞಾನಿಕ ರೀತಿಯಲ್ಲಿ ರಸ್ತೆಗಳ ನಿರ್ಮಾಣ ಮಾಡಿರುವುದೇ ರಸ್ತೆಯಲ್ಲಿ ಗುಂಡಿಗಳು ಹೆಚ್ಚಾಗಿರಲು ಕಾರಣ ಎಂದು ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅವೈಜ್ಞಾನಿಕ ರಸ್ತೆಗಳ ನಿರ್ಮಾಣ ಆಗಿರೋದೇ ಬಿಜೆಪಿ ಸರ್ಕಾರದ ಅವಧಿಯಲ್ಲಿ. ಹೀಗಾಗಿಯೇ ರಸ್ತೆಗಳು ಗುಂಡಿ ಬಿದ್ದಿವೆ. ವಿಜಯೇಂದ್ರಣ್ಣ ನಿಮ್ಮ ತಂದೆಯವರೂ ಸಿಎಂ ಆಗಿದ್ದರು ಅಲ್ವಾ? ಆಗ ಗುಂಡಿಗಳ ಮೇಲೆ ನಿಮಗೆ ಪ್ರೀತಿ ಇರಲಿಲ್ವಾ ಎಂದು ಪ್ರಶ್ನಿಸಿದ್ದಾರೆ.
ನೀವು ಎಲ್ಲ ಖಾತೆಗಳನ್ನ ನಿರ್ವಹಿಸಿದ್ದೀರಿ ಅಶೋಕ್ ಅಣ್ಣ. ದೆಹಲಿಯ ಹಲವೆಡೆ ಸಾಕಷ್ಟು ರಸ್ತೆಗುಂಡಿಗಳು ಬಿದ್ದಿವೆ. ದೆಹಲಿ ಸಿಎಂ ಮನೆಯ ಅಕ್ಕ ಪಕ್ಕದ ರಸ್ತೆಗಳಲ್ಲಿಯೇ ಗುಂಡಿಗಳಿವೆ. ಅಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಎರಡೂ ನಿಮ್ಮದೆ. ಹೀಗಿರುವಾಗ ನಮ್ಮ ಬಗ್ಗೆ ಏನು ಮಾತಾಡ್ತೀರಾ ಎಂದು ತಿರುಗೇಟು ನೀಡಿದ್ದಾರೆ.
ಕರ್ನಾಟಕ ಬಿಜೆಪಿ ಪಕ್ಷದಲ್ಲೇ ಹಲವಾರು ಗುಂಡಿಗಳಿದ್ದೂ, ಅದಲ್ಲೂ ಮುಚ್ಚಲು ಆಗದೆ ರಸ್ತೆಗಿಳಿದು ಗುಂಡಿ ಮುಚ್ಚುತ್ತಿದ್ದರೆ. ಇನ್ನು ಮುಂದಿನ ಆರು ತಿಂಗಳಲ್ಲಿ, ಬಿಜೆಪಿಯಲ್ಲಿ ಕ್ರಾಂತಿ ನಡೆಯುತ್ತದೆ. ನಮ್ಮ ಸರ್ಕಾರದಲ್ಲಿ ಅಭಿವೃದ್ಧಿಯ ಕ್ರಾಂತಿ, ಶೈಕ್ಷಣಿಕ ಕ್ರಾಂತಿ, ಉದ್ಯೋಗ ಕ್ರಾಂತಿ ನಡೆದರೆ, ಬಿಜೆಪಿಯಲ್ಲಿಅದಿಕಾರದ ಹಗ್ಗಾ ಜಗ್ಗಾಟದ ಕ್ರಾಂತಿ ನಡೆಯುತ್ತದೆ, ಎಂದು ವ್ಯಂಗವಾಡಿದ್ದಾರೆ.
ರಾಜ್ಯದಲ್ಲಿ ಹದಗೆಟ್ಟಿರುವ ರಸ್ತೆ ಗುಂಡಿಗಳನ್ನು ವಿರೋಧಿಸಿ ಸ್ಥಳೀಯ ನಾಯಕರ ನೇತೃತ್ವದಲ್ಲಿ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಇಂದು ರಸ್ತೆ ರೋಕೋ (ರಸ್ತೆ ತಡೆ) ನಡೆಸಿ ಪ್ರತಿಭಟಿಸಿತು.
ಬೆಂಗಳೂರು ನಗರದ ಬಹುತೇಕ ರಸ್ತೆಗಳು ಗುಂಡಿಮಯ ಮತ್ತು ಹಾಳಾದ ಸ್ಥಿತಿಯಲ್ಲಿವೆ. ನಗರದ ನಿವಾಸಿಗಳು ಪ್ರಯಾಣಿಸಲು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಸ್ತೆ ಗುಂಡಿ ಸಮಸ್ಯೆ ಬಗ್ಗೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ರಾಜಕೀಯ ಯುದ್ಧ ತೀವ್ರಗೊಂಡಿದೆ.