ಸೌದಿ ಅರೇಬಿಯಾದಲ್ಲಿರುವ ಬಂಟ್ವಾಳದ ಯುವಕ ಮಂಗಳೂರಿನಲ್ಲಿ ಕೋಮು ಭಾವನೆ ಕೆರಳಿಸುವಂತಹ ಪೋಸ್ಟ್ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದ ಪ್ರಕರಣದಡಿ ಆತ ಭಾರತಕ್ಕೆ ಬಂದಿಳಿದ ತಕ್ಷಣ ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ಪಾಣೆಮಂಗಳೂರಿನ 27 ವರ್ಷದ ಅಬ್ದುಲ್ ಖಾದರ್ ನೇಹಾದ್ ಬಂಧಿತ ಆರೋಪಿ. ಆತ ಸೌದಿ ಆರೇಬಿಯಾದಲ್ಲಿ ಇದ್ದು, ಇನ್ಸ್ಟಾಗ್ರಾಮ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಅನ್ಯ ಧರ್ಮದವರ ಬಗ್ಗೆ ಅವಹೇಳನಕಾರಿ ಹಾಗೂ ಪ್ರಚೋದನಕಾರಿ ವಿಚಾರಗಳನ್ನು ಪೋಸ್ಟ್ ಮಾಡಿ ಕೋಮು ಭಾವನೆಯನ್ನು ಕೆರಳಿಸುತ್ತಿದ್ದ.
sdpi_2025 ಎಂಬ ಇನ್ಸ್ಟಾಗ್ರಾಮ್ ಖಾತೆಯನ್ನು ನಿಭಾಯಿಸುತ್ತಿದ್ದು, ಆಕ್ಟೋಬರ್ 11 ರಂದು ಇದೇ ಖಾತೆಯ ಮೂಲಕ ಆತ ಅನ್ಯಧರ್ಮಗಳ ಬಗ್ಗೆ ತೀವ್ರ ಆಕ್ಷೇಪಾರ್ಹ ಹಾಗೂ ಅವಮಾನಕಾರಿ ಪೋಸ್ಟ್ ಮಾಡಿದ್ದ. ಬಜ್ಪೆ ಪೊಲೀಸರು ಸ್ವಯಂಪ್ರೇರಿತ ವಾಗಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದಾಗ ಪಾಣೆಮಂಗಳೂರು ನಿವಾಸಿ ಪ್ರಸ್ತುತ ಸೌದಿ ಅರೇಬಿಯಾದಲ್ಲಿ ನೆಲೆಸಿರುವ ಅಬ್ದುಲ್ ಖಾದರ್ ಅಲ್ಲಿಂದಲೇ ಪೋಸ್ಟ್ ಮಾಡಿರುವುದು ಪತ್ತೆಯಾಗಿತ್ತು.
ವಿದೇಶದಲ್ಲಿ ಕುಳಿತು ಇಲ್ಲಿ ಕೋಮು ಗಲಭೆಗೆ ಪ್ರೇರಣೆ ನೀಡುತ್ತಿರುವ ಅಬ್ದುಲ್ ಖಾದರ್ ವಿರುದ್ಧ ಮಂಗಳೂರು ಪೊಲೀಸರು ಲುಕೌಟ್ ನೋಟೀಸ್ ಜಾರಿ ಮಾಡಿದ್ದರು. ಡಿಸೆಂಬರ್ 14ರಂದು ಸೌದಿ ಅರೇಬಿಯಾದಿಂದ ಅಬ್ದುಲ್ ಖಾದರ್ ಕೇರಳದ ಕಲ್ಲಿಕೋಟೆ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ಕೂಡಲೇ ಪೊಲೀಸರು ಆತನನ್ನು ಬಂಧಿಸಿದ್ದಾರೆ.


