Menu

ವೀಕೆಂಡ್‌ ಪಾರ್ಟಿಗೆ ಪೊಲೀಸರ ಭೇಟಿ: ಭಯಗೊಂಡು ಬಾಲ್ಕನಿಯಿಂದ ಹಾರಿದ ಯುವತಿ ಸ್ಥಿತಿ ಗಂಭೀರ

ಹೆಚ್‌ಎಎಲ್‌ನ ಎಇಸಿಎಸ್ ಲೇಔಟ್‌ನಲ್ಲಿರುವ ಹೊಟೇಲ್‌ವೊಂದರಲ್ಲಿ ಸ್ನೇಹಿತರೊಂದಿಗೆ ವೀಕೆಂಡ್‌ ಪಾರ್ಟಿ ಮಾಡುತ್ತಿದ್ದಾಗ ಪೊಲೀಸರು ಧಿಡೀರ್ ಬಂದ ಕಾರಣ ಭಯಗೊಂಡ ಯುವತಿ  ಬಾಲ್ಕನಿಯಿಂದ ಕೆಳಗೆ ಹಾರಿ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಯುವತಿಯ ತಲೆ, ಮೈಕೈಗೆ ಗಂಭೀರ ಗಾಯಗಳಾಗಿದ್ದು, ಕುಂದಲಹಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದುಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ. ಶನಿವಾರ ರಾತ್ರಿ ಯುವತಿ ಸೇರಿದಂತೆ ಎಂಟು ಸ್ನೇಹಿತರು ಸೇರಿ ಪಾರ್ಟಿ ಆಯೋಜಿಸಿದ್ದರು. ಪಾರ್ಟಿಗಾಗಿ ಮೂರು ರೂಂ ಬುಕ್ ಮಾಡಿದ್ದರು. ಬಳಿಕ ಯುವಕರು ಹಾಗೂ ಯುವತಿಯರು ಹಾಡು ಹಾಕಿಕೊಂಡು ಡ್ಯಾನ್ಸ್ ಮಾಡುತ್ತಿದ್ದರು. ಈ ಪಾರ್ಟಿ, ಡ್ಯಾನ್ಸ್ ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಹೊಟೇಲ್‌ಗೆ ಹೊಯ್ಸಳ ಪೊಲೀಸರು ಆಗಮಿಸಿದರು, ವಿಚಾರ ತಿಳಿದ ಯುವತಿ ಬಾಲ್ಕನಿಗೆ ತೆರಳಿ ಹಾರಿದ್ದಾಳೆ. ಕಬ್ಬಿಣದ ಗ್ರಿಲ್ಸ್ ಮೇಲೆ ಬಿದ್ದು ಗಂಭೀರ ಗಾಯಗಳಾಗಿವೆ. ಪಾರ್ಟಿ ವಿಚಾರ ತಿಳಿದು ಹೊಯ್ಸಳ ಸಿಬ್ಬಂದಿ ಹೊಟೇಲ್‌ಗೆ ಬಂದು ಪಾರ್ಟಿ ವೀಡಿಯೊ ತೋರಿಸಿ ದೂರು ಬಂದಿದೆ ಎಂದಿದ್ದರು. ನಂತರ ಹಣ ಕೇಳಿದ್ದಾರೆ ಎಂದು ಯುವಕನೊಬ್ಬ ಆರೋಪಿಸಿದ್ದಾನೆ. ಫೋನ್ ಪೇ ಮಾಡುತ್ತೇವೆ ಎಂದು ಯುವಕರು ಹೇಳಿದಾಗ ಫೋನ್ ಪೇ ಬೇಡ, ಕ್ಯಾಶ್ ಕೊಡಿ ಎಂದು ಪೊಲೀಸರು ಕೇಳಿದ್ದಾರೆ. ಎಟಿಎಂನಿಂದ ಹಣ ತರುತ್ತೇನೆ ಎಂದು ಯುವಕ ಹೋಟೆಲ್‌ನಿಂದ ಹೊರಗೆ ಬಂದ ವೇಳೆ ಯುವತಿ ಬಾಲ್ಕನಿಯಿಂದ ಹಾರಿದ್ದಾಳೆ. ಈ ಬಗ್ಗೆ ಹೆಚ್‌ಎಎಲ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಸ್ಥಳಕ್ಕೆ ತೆರಳಿದ ಪೊಲೀಸರು ಪರಿಶೀಲನೆ ನಡೆಸಿ ಘಟನೆ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಹೋಟೆಲ್ ಮಾಲೀಕರ ವಿರುದ್ಧ ಬಾಲ್ಕನಿಯಲ್ಲಿ ಸುರಕ್ಷತೆ ವಹಿಸದೆ ನಿರ್ಲಕ್ಷ್ಯ ವಹಿಸಿರುವುದಾಗಿ ಎಫ್‌ಐಆರ್‌ ದಾಖಲಿಸಲಾಗಿದೆ. ಪೊಲೀಸರ ತಪ್ಪು ಮುಚ್ಚಿಡಲು ಹೋಟೆಲ್ ಮಾಲೀಕರ ಮೇಲೆ ಎಫ್‌ಐಆರ್ ಮಾಡಿರುವ ಕುರಿತು ಅನುಮಾನವೂ ವ್ಯಕ್ತವಾಗಿದೆ.

Related Posts

Leave a Reply

Your email address will not be published. Required fields are marked *