ಐಟಿ ಹಬ್ ಆಗಿ ಗುರುತಿಸಿಕೊಂಡಿರುವ ಬೆಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್ ದಂಧೆ ಮಾಡುತ್ತಿದ್ದ ಸೈಬರ್ ಕಂಪನಿ ಪತ್ತೆಯಾಗಿದೆ. ಹೆಚ್ಎಸ್ಆರ್ ಲೇಔಟ್ ನಲ್ಲಿ ಪತ್ತೆಯಾಗಿರುವ ಕಚೇರಿಯ ಮೇಲೆ ಪೊಲೀಸರು ದಾಳಿ ನಡೆಸಿ 16 ಸಿಬ್ಬಂದಿಯನ್ನು ಬಂಧಿಸಿದ್ದಾರೆ.
ಡಿಜಿಟಲ್ ಅರೆಸ್ಟ್ ಹೆಸರಲ್ಲಿ ಭಯ ಹುಟ್ಟಿಸಿ ಹಣ ದೋಚುತ್ತಿದ್ದ ಹಲವು ಪ್ರಕರಣಗಳು ನಗರದಲ್ಲಿ ಬೆಳಕಿಗೆ ಬಂದಿವೆ. ಇದೇ ಮೊದಲ ಬಾರಿ ಭಾರತದಲ್ಲಿ ಕುಳಿತು ಅಮೆರಿಕ ಮತ್ತು ಕೆನಡಾ ಪ್ರಜೆಗಳನ್ನು ಡಿಜಿಟಲ್ ಅರೆಸ್ಟ್ ಮಾಡುತ್ತಿದ್ದ ಕಚೇರಿ ಹೆಚ್ಎಸ್ಆರ್ ಲೇಔಟ್ ನಲ್ಲಿ ಪತ್ತೆಯಾಗಿದ್ದು, ಕಚೇರಿಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ಹೆಚ್ಎಸ್ಆರ್ ಲೇಔಟ್‌ನ 24ನೇ ಕ್ರಾಸ್ ನಲ್ಲಿ ಸಿಬೈಟ್ ಎಂಬ ಕಂಪನಿಯಲ್ಲಿ ಸಂಜೆ ಆರು ಗಂಟೆಗೆ ಕಚೇರಿ ಶುರುವಾಗಿ ಅಮೆರಿಕದ ಶಿಫ್ಟ್ ಪ್ರಕಾರ ಕೆಲಸ ಮಾಡುತ್ತಿದ್ದರು. ಅಮೆರಿಕ ಪ್ರಜೆಗಳನ್ನು ಗುರಿಯಾಗಿಸಿಕೊಂಡು ಡಿಜಿಟಲ್ ಅರೆಸ್ಟ್ ಮಾಡುತ್ತಿ ದ್ದರು. ನಾವು ಬಾರ್ಡರ್ ಸೆಕ್ಯುರಿಟಿ ಫೋರ್ಸ್ ಹಾಗೂ ಇನ್ವೆಸ್ಟಿಗೇಷನ್ ಏಜೆನ್ಸಿಯವರು. ನಿಮ್ಮ ಐಡಿಗಳನ್ನು ಬಳಸಿ ಪಾರ್ಸಲ್ ಬಂದಿದೆ. ಅದರಲ್ಲಿ ನಾರ್ಕೊಟಿಕ್ಸ್ ಪತ್ತೆಯಾಗಿದೆ. ನಿಮ್ಮ ವಿರುದ್ದ ಕೇಸ್ ದಾಖಲಾಗಿದೆ ಎಂದು ಬೆದರಿಸುತ್ತಿದ್ದರು. ಅಮೆರಿಕದ ಸುಪ್ರೀಂ ಕೋರ್ಟ್ ಹಾಗೂ ಅಮೇರಿಕ ಜಿಲ್ಲಾ ನ್ಯಾಯಾಲಯದ ನಕಲಿ ಆದೇಶಗಳನ್ನು ತೋರಿಸುತ್ತಿದ್ದರು. ನಂತರ ಕರೆಯನ್ನು ಮತ್ತೊಂದು ಇನ್ವೆಸ್ಟಿಗೇಶನ್ ಟೀಮ್ಗೆ ವರ್ಗಾಯಿಸುತ್ತೇವೆಂದು ಹೇಳಿ ಡಿಜಿಟಲ್ ಅರೆಸ್ಟ್ ಮಾಡಿ ಡಾಲರ್ಗಳಿಗೆ ಬೇಡಿಕೆ ಇಡುತ್ತಿದ್ದರು ಎಂದು ಬೆಂಗಳೂರು ಪೊಲೀಸ್ ಕಮೀಷನರ್ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.
ಈ ದಂಧೆಯ ಬಗ್ಗೆ ಖಚಿತ ಮಾಹಿತಿ ಪಡೆದ ಅಗ್ನೇಯ ಸೆನ್ ಪೊಲೀಸರು ಕಂಪನಿ ಮೇಲೆ ದಾಳಿ ಮಾಡಿದ್ದಾರೆ. ಅಲ್ಲಿ ಕೆಲಸ ಮಾಡುತ್ತಿದ್ದ 16 ಸಿಬ್ಬಂದಿಯನ್ನು ಬಂಧಿಸಿದ್ದಾರೆ. ಗುಜರಾತ್ ಮೂಲದ 4 ಮಂದಿ, ಮಹಾರಾಷ್ಟ್ರದ 8, ಒರಿಸ್ಸಾ, ಜಾರ್ಖಂಡ್, ಮಧ್ಯಪ್ರದೇಶ ಮೂಲದ ಒಬ್ಬನನ್ನು ಬಂಧಿಸಲಾಗಿದೆ. ಕೆಲಸ ಮಾಡುತ್ತಿದ್ದ ನೌಕರರಿಗೆ 22 ಸಾವಿರ ಸಂಬಳ ನೀಡಲಾಗುತ್ತಿತ್ತು ಎಂದು ಪೊಲೀಸ್ ಕಮೀಷನರ್ ಹೇಳಿದ್ದಾರೆ.