ಗದಗ: ಗದಗ ಗ್ರಾಮೀಣ ಪೊಲೀಸರು ಭರ್ಜರಿ ಕಾರ್ಯಾಚರಣೆಯನ್ನು ನಡೆಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಗದಗ-ಬೆಟಗೇರಿ ಅವಳಿ ನಗರದಾದ್ಯಂತ ಅಕ್ರಮ ಗಾಂಜಾ ಮಾರಾಟದ ಹಾವಳಿ ಹೆಚ್ಚಾಗಿತ್ತು. ಇದರಿಂದ ಯುವಕರು ಗಾಂಜಾ ಚಟಕ್ಕೆ ಮಾರುಹೋಗಿ ಅನೇಕ ಸಮಾಜದ್ರೋಹಿ ಕೆಲಸದಲ್ಲಿ ನಿರತರಾಗಿದ್ದರು. ಎಚ್ಚೆತ್ತುಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಒರ್ವ ಮಹಿಳೆ ಸೇರಿದಂತೆ 6 ಜನರನ್ನು ಬಂಧಿಸಿ 6.7 ಕೆ.ಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ನಗರದ ಗ್ರಾಮೀಣ ಠಾಣೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ ಎಸ್ ನೇಮಗೌಡ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಅಕ್ರಮ ಗಾಂಜಾ ಮಾರಾಟ ಮತ್ತು ಸಾಗಾಟಗಾರರಿಗೆ ಬಲೆ ಬಿಸಿದ್ದ ಪೊಲೀಸರು ಗ್ರಾಮೀಣ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಸಿದ್ದರಾಮೇಶ್ವರ ಗಡೇದ, ಪಿಎಸ್‌ಐಗಳಾದ ಎ.ಆರ್.ರಾಮೇನಹಳ್ಳಿ, ಎಸ್.ಬಿ.ಕವಲೂರ ಮತ್ತು ಸಿಬ್ಬಂದಿಯವರಾದ ಪ್ರಕಾಶ ಗಾಣಗೇರ, ಅಶೋಕ ಬೂದಿಹಾಳ, ಅನೀಲ ಬನ್ನಿಕೊಪ್ಪ, ಗಂಗಾಧರ ಮಜ್ಜಗಿ, ರಾಜಮಹ್ಮದ ಅಲಮದಾರ. ಹೇಮಂತ ಪರಸಣ್ಣವರ. ಲಕ್ಷ್ಮಣ ಪೂಜಾರ, ಪ್ರವೀಣ ಶಾಂತಪ್ಪನವರ: ರವಿ ನಾಯ್ಕರ ಮತ್ತು ತಾಂತ್ರಿಕ ಸಿಬ್ಬಂದಿ ಗುರು ಬೂದಿಹಾಳ, ಸಂಜೀವ ಕೊರಡೂರ ಇವರನ್ನೊಳಗೊಂಡ ತಂಡವನ್ನು ಎಸ್.ಪಿ ಬಿ. ಎಸ್ ನೇಮಗೌಡ ರಚಿಸಿದ್ದರು.
ತನಿಖೆ ಚುರುಕುಗೋಳಿಸಿದ್ದ ತಂಡ ಹಲವು ಆಯಾಮಗಳಿಂದ ಮಾಹಿತಿ ಸಂಗ್ರಹಿಸಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ 6 ಜನರನ್ನು ಬಂಧಿಸಿಸುವಲ್ಲಿ ಯಶಸ್ವಿಯಾಗಿದ್ದರು. ಬಂಧಿತರಿಂದ ಅಂದಾಜು 6.7 ಕೆ.ಜಿ ತೂಕದ ಗಾಂಜಾವನ್ನು ವಶಪಡಿಸಿಕೊಂಡಿದ್ದು, ಅದರ ಮೊತ್ತ ಅಂದಾಜು 6 ಲಕ್ಷ 70 ಸಾವಿರ ರೂಪಾಯಿಗಳು ಎಂದು ಗುರುತಿಸಲಾಗಿದೆ. ಈ ಬಗ್ಗೆ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 148/2025 ಕಲಂ 20(ಎ) ಎನ್‌ಡಿಪಿಎಸ್ ಪ್ರಕರಣ ಕೂಡ ದಾಖಲಾಗಿತ್ತು.
ಆರೋಪಿಗಳನ್ನು ಚಾಣಾಕ್ಷತನದಿಂದ ಬಂಧಿಸಿ ಸುಮಾರು 6 ಲಕ್ಷ 70 ಸಾವಿರ ರೂ. ಮೌಲ್ಯದ 6.7 ಕೆಜಿ ಅಕ್ರಮ ಗಾಂಜಾವನ್ನು ವಶಪಡಿಸಿಕೊಂಡು ಆರೋಪಿತರನ್ನು ನ್ಯಾಯಾಂಗ ವಶಕ್ಕೆ ನೀಡಿದ್ದಾರೆ. ಗಾಂಜಾ ಪೂರೈಕೆ ಆಗುತ್ತಿರುವದರ ಬಗ್ಗೆ ಇನ್ನೂ ಹೆಚ್ಚಿನ ತನಿಖೆ ಮುಂದುವರೆದಿದ್ದು, ಒಟ್ಟಾರೆಯಾಗಿ ಆರೋಪಿತರಿಂದ ಒಂದು ಬೈಕ್, 6 ಮೊಬೈಲ್ ಫೋನುಗಳು, 1 ಸಾವಿರ ರೂ.ನಗದು ಹಣ ವಶಪಡಿಸಿಕೊಂಡ ತನಿಖೆ ಮುಂದುವರಿಸಿದ್ದಾರೆ ಅಂತ ಎಸ್. ಪಿ ಬಿ. ಎಸ್ ನೇಮಗೌಡ ತಿಳಿಸಿದರು.
ಆಧುನಿಕ ಅಗತ್ಯ ತಂತ್ರಾಂಶ ಮತ್ತು ತಮ್ಮ ಕೌಶಲ್ಯದಿಂದ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಅಕ್ರಮ ಗಾಂಜಾ ಮಾರಾಟ ಜಾಲವನ್ನು ಬೇಧಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ಎಸ್. ನೇಮಗೌಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.