ಮಗ ಅನ್ಯ ಜಾತಿಯ ಯುವತಿಯನ್ನು ಮದುವೆ ಆಗಿದ್ದಕ್ಕೆ ಆತನ ತಾಯಿ ಮೇಲೆ ಧಾರವಾಡದ ಕುಂದಗೋಳ ಠಾಣೆಯ ಪೊಲೀಸರು ಮನ ಬಂದಂತೆ ಥಳಿಸಿರುವ ಆರೋಪ ಕೇಳಿ ಬಂದಿದೆ.
ಧಾರವಾಡದ ಕುಂದಗೋಳ ತಾಲೂಕಿನ ಮುಳ್ಳಳಿ ಗ್ರಾಮದ ಯುವಕ ದೇವರಾಜ್ ಎದುರು ಮನೆ ಯುವತಿ ಜೊತೆ ಹೋಗಿ ಮದುವೆ ಆಗಿದ್ದಾನೆ. ತಿಂಗಳ ಹಿಂದೆ ಇವರಿಬ್ಬರ ವಿವಾಹ ನಡೆದಿದೆ. ಈ ಮದುವೆಗೆ ಒಪ್ಪಿಗೆ ಇಲ್ಲದ ಕಾರಣ ಯುವತಿ ಪೋಷಕರು ಕುಂದಗೋಳ ಠಾಣೆಗೆ ದೂರು ನೀಡಿದ್ದರು. ಈ ಹಿನ್ನಲೆ ದೇವರಾಜ್ ತಾಯಿ ಲಕ್ಷ್ಮವ್ವ ಬೆಂತೋಳಿ ಅವರನ್ನು ಪೊಲೀಸರು ವಿಚಾರಣೆಗೆ ಕರೆದು, ನಿನ್ನ ಮಗ ಎಲ್ಲಿದ್ದಾನೆಂದು ಪ್ರಶ್ನಿಸಿದ್ದಾರೆ. ಆ ಬಗ್ಗೆ ತನೆಗೆ ಮಾಹಿತಿ ಇಲ್ಲ ಎಂದು ಲಕ್ಷ್ಮವ್ವ ಹೇಳಿದ್ದಕ್ಕೆ ಮನ ಬಂದಂತೆ ಆಕೆಯನ್ನು ಥಳಿಸಿದ್ದಾರೆ ಎನ್ನಲಾಗಿದೆ.
ಲಕ್ಷ್ಮವ್ವ ಮೇಲೆ ಮಹಿಳಾ ಪೊಲೀಸರ ಜೊತೆ ಪುರುಷ ಸಿಬ್ಬಂದಿಯೂ ಹಲ್ಲೆ ನಡೆಸಿದ್ದಾರೆ. ಮಗ ದೇವರಾಜ್ ಎಲ್ಲಿದ್ದಾನೆಂದು ಗೊತ್ತಿಲ್ಲ ಎಂದರೂ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಪೊಲೀಸರ ಲ್ಲೆಗೊಳಗಾದ ಲಕ್ಷ್ಮವ್ವ ಸ್ಥಿತಿ ಗಂಭೀರವಾಗಿದ್ದು, ಅಸ್ವಸ್ಥಗೊಂಡಿರುವ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಧಾರವಾಡ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಪೊಲೀಸರು ಹಲ್ಲೆ ನಡೆಸಿರುವ ಆರೋಪ ಕೇಳಿಬಂದ ಹಿನ್ನೆಲೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.


