ಬೆಂಗಳೂರು: ಪಾಕಿಸ್ತಾನದ ಮೇಲೆ ದಾಳಿ ನಡೆಸಿ, ಉಗ್ರರ ನೆಲೆಗಳನ್ನು ಧ್ವಂಸ ಮಾಡುವಲ್ಲಿ ಭಾರತೀಯ ಸೇನೆಗೆ ನೆರವು ನೀಡಿದ್ದ ಭಾರತೀಯ ಬಾಹ್ಯಾಕಾಶ ಕೇಂದ್ರ (ಇಸ್ರೋ)ದ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.
ನಗರದ ಹೊರವಲಯದ ತಾವರೆಕೆರೆ ಬಳಿಯ ಬ್ಯಾಲಾಳುವಿನ 120 ಎಕರೆ ಪ್ರದೇಶದಲ್ಲಿರುವ ಇಸ್ರೋದ ಭಾರತೀಯ ಕಡು ಅಂತರಿಕ್ಷ ಸಂಪರ್ಕ (ಇಂಡಿಯನ್ ಡೀಪ್ ಸ್ಪೇಸ್ ನೆಟ್ ವರ್ಕ್) ಕೇಂದ್ರಕ್ಕೆ ಪೊಲೀಸರ ಭದ್ರತೆಯನ್ನು ಬಿಗಿಗೊಳಿಸಿ ಸುತ್ತಲಿನ ಗ್ರಾಮಗಳಲ್ಲಿ ಪೊಲೀಸರ ಗಸ್ತು ಹೆಚ್ಚಿಸಲಾಗಿದೆ.
ಭಾರತೀಯ ಸೇನೆಗೆ ಪಾಕಿಸ್ತಾನದಲ್ಲಿನ ಉಗ್ರನೆಲೆಗಳ ಬಗ್ಗೆ ಮಾಹಿತಿ ನೀಡಿ, ಇಡೀ ನೆಲೆಗಳ ಮೇಲೆ ಸ್ಯಾಟ್‌ಲೈಟ್ ಮೂಲಕ ಇಸ್ರೋ ಹದ್ದಿನ ಕಣ್ಣಿಟ್ಟಿತ್ತು. ಭಾರತೀಯ ಸೇನೆಗೆ ನರಮಂಡಲದಂತ್ತಿರುವ ಇಂಡಿಯನ್ ಡೀಪ್ ಸ್ಪೇಸ್ ನೆಟ್‌ವರ್ಕ್ ಕೇಂದ್ರದಲ್ಲಿ ಯಾವುದೇ ಅವಘಡ ಸಂಭವಿಸಬಾರದೆಂಬ ಉದ್ದೇಶದಿಂದ ಪೊಲೀಸ್ ಇಲಾಖೆಯು ತನ್ನ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಲಾಗಿದೆ.
ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಬ್ಯಾಲಾಳುವಿನ ಸುತ್ತಲಿನ ಗ್ರಾಮಗಳ ಮನೆಮನೆಗಳಿಗೆ ತೆರಳಿ ಪೊಲೀಸ್ ಇಲಾಖೆ ಪರಿಶೀಲನೆ ನಡೆಸುತ್ತಿದೆ. ಯಾವುದೇ ಅನುಮಾನಸ್ಪದ ಚಲನವಲನಗಳ ಕಂಡು ಬಂದಲ್ಲಿ ಕೂಡಲೇ ಪೊಲೀಸ್ ಇಲಾಖೆ ಇಲ್ಲವೇ ಸಿಐಎಸ್‌ಎಫ್ (ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್) ಅಧಿಕಾರಿಗಳಿಗೆ ಮಾಹಿತಿ ನೀಡಿ ಎಂದು ಗ್ರಾಮಸ್ಥರಲ್ಲಿ ರಾಮನಗರ ಜಿಲ್ಲಾ ಪೊಲೀಸರು ಅರಿವು ಮೂಡಿಸತೊಡಗಿದ್ದಾರೆ.
ಏನಿದು ಘಟಕ:
ಕಳೆದ 2008 ರಲ್ಲಿ ಬ್ಯಾಲಾಳುವಿನಲ್ಲಿ ಈ ಕೇಂದ್ರ ತೆರಯಲಾಗಿದೆ. ಬಾಹ್ಯಾಕಾಶ ಸಂಶೋಧನಾ ನೌಕೆಗಳೊಂದಿಗೆ ಸಂಪರ್ಕ ಸಾಧಿಸಿ, ತರಂಗಗಳ ಯಶಸ್ವಿ ಸಂಗ್ರಹಕ್ಕೆ 18 ಮೀ. ಮತ್ತು 32 ಮೀಟರ್‌ನಷ್ಟು ಅತ್ಯಾಧುನಿಕ ಆಂಟೆನಾಗಳನ್ನು ಬ್ಯಾಲಾಳು ಕೇಂದ್ರದಲ್ಲಿ ಸ್ಥಾಪಿಸಲಾಗಿದೆ.
ಈ ಅಂಟೆನಾಗಳ ಮೂಲಕ ಬಾಹ್ಯಾಕಾಶ ಸಂಶೋಧನೆಯ ಅಮೂಲ್ಯ ಮಾಹಿತಿ ಸಂಗ್ರಹವಾಗಲಿದೆ. ಇದೇ ಕೇಂದ್ರದಲ್ಲಿ ಸಂಶೋಧನಾ ಮಾಹಿತಿ ಸಂಗ್ರಹಕ್ಕೆ ಆತ್ಯಾಧುನಿಕ ತಂತ್ರಜ್ಞಾನದ ವ್ಯವಸ್ಥೆಯಿದ್ದು, ವಿಜ್ಞಾನಿಗಳು ಇಲ್ಲಿಂದಲೇ ದೇಶದ 21 ಗೌಂಡ್ ಸ್ಟೇಷನ್‌ಗಳನ್ನು ಸಹ ಸಂಪರ್ಕಿಸಬಹುದಾಗಿದೆ.
ಇಸ್ರೋ ತನ್ನ ಟೆಲಿಮೆಟ್ರಿ, ಟ್ಯಾಕಿಂಗ್ ಮತ್ತು ಕಮಾಂಡ್ ನೆಟ್ ವರ್ಕ್ (ಐಎಸ್ ಟಿಆರ್‌ಎಸಿ) ಕಾರ್ಯಾಚರಣೆಗೆಂದು ಪೀಣ್ಯಾ ಕೈಗಾರಿಕಾ ಪ್ರದೇಶದಲ್ಲಿ ಪ್ರತ್ಯೇಕ ಕೇಂದ್ರ ನಡೆಸುತ್ತಿದೆ. ಈ ಕೇಂದ್ರದಿಂದ ವಿಜ್ಞಾನಿಗಳು ಬಾಹ್ಯಾಕಾಶ ನೌಕೆಗಳಿಗೆ ಅಗತ್ಯ ಸಂದೇಶ ರವಾನಿಸಲು ಬ್ಯಾಲಾಳುವಿನಲ್ಲಿರುವ ಅಂಟಿನಾ ನಿರ್ವಹಣಾ ಪ್ರದೇಶವನ್ನು ಸಂಪರ್ಕಿಸಬೇಕಿದೆ.
ವಿಶೇಷ ಸ್ಥಾನಮಾನ:
ತರಂಗಗಳ ರವಾನೆ, ಸಂವಹನ ಮಾತ್ರವಲ್ಲದೇ ಇದೇ ಬ್ಯಾಲಾಳುವಿನ ಸಂಕೀರ್ಣದಲ್ಲೇ ‘ಭಾರತೀಯ ಆಂತರಿಕ್ಷ ದತ್ತಾಂಶ ಕೇಂದ್ರ (ಇಂಡಿಯನ್ ಸ್ಪೇಸ್ ಸೈಸ್ಸ್ ಡೇಟಾ ಸೆಂಟರ್) ಸಹ ಕಾರ್ಯನಿರ್ವಹಿಸುತ್ತಿದೆ.
ಆಂಟೆನಾಗಳ ವೈಶಿಷ್ಟ್ಯವಿಶ್ವದಲ್ಲೇ ಅಮೆರಿಕ, ಆಸ್ಪ್ರೇಲಿಯಾ, ಸ್ಪೇನ್, ಚೀನಾ ಹೊರತುಪಡಿಸಿದರೆ ಬೆಂಗಳೂರಿನಲ್ಲೇ ಈ ಡೀಪ್ ಸ್ಪೇಸ್ ನೆಟ್‌ವರ್ಕ್ ಅಂಟಿನಾ ವ್ಯವಸ್ಥೆ ಹೊಂದಲಾಗಿದೆ.
ಈ ವ್ಯವಸ್ಥೆಯಿಂದ ಏಕಕಾಲಕ್ಕೆ ಅನೇಕ ಉಪಗ್ರಹಗಳ ಮಾಹಿತಿಯನ್ನು ಪಡೆಯುವುದು ಮಾತ್ರವಲ್ಲದೇ ಇಲ್ಲಿನ ಕೇಂದ್ರದಿಂದ ಉಪಗ್ರಹಗಳಿಗೆ ರೇಡಿಯೋ ತರಂಗಗಳನ್ನು ರವಾನೆ ಮಾಡಬಹುದಾಗಿದೆ. ಇಂತಹ ಸಮರ್ಥ ಆಂಟೆನಾ ಬರೋಬ್ಬರಿ 350 ಟನ್ ತೂಕವಿದ್ದು, ವಿಶ್ವದಲ್ಲೇ ವಿಶೇಷ ಸ್ಥಾನಮಾನ ಪಡೆದಿದೆ.
2010ರಲ್ಲಿ ಶೂಟೌಟ್:
ಈ ಕೇಂದ್ರದಲ್ಲಿ 2010 ರ ಮಧ್ಯರಾತ್ರಿ 3.20ರ ಸುಮಾರಿಗೆ ಈ ಕೇಂದ್ರದಲ್ಲಿ ಶೂಟೌಟ್ ಸಹ ನಡೆದಿತ್ತು. ಇಬ್ಬರು ಅಪರಿಚಿತರು ಅನುಮಾನಸ್ಪಾದವಾಗಿ ಓಡಾಡುತ್ತಿದ್ದ ಹಿನ್ನೆಲೆಯಲ್ಲಿ ಇಲ್ಲಿನ ಭದ್ರತಾ ಸಿಬ್ಬಂದಿಗಳಿಂದ ಗುಂಡಿನ ದಾಳಿ ನಡೆದಿತ್ತು.
ಸದ್ಯಕ್ಕೆ ಪಾಕಿಸ್ತಾನ ಹಾಗೂ ಭಾರತದ ನಡುವಿನ ಯುದ್ಧ ಭೀತಿ ನಡುವಿನಲ್ಲಿಯೇ ಇಸ್ರೋದ ನರಮಂಡಲವಾಗಿರುವ ಬ್ಯಾಲಾಳು ಕೇಂದ್ರದ ಸುತ್ತಲೂ ಭದ್ರತೆ ಇನ್ನಷ್ಟು ಹೆಚ್ಚಾಗಿದೆ. ಈ ಕೇಂದ್ರದ ಸುತ್ತಲೂ ಅನುಮಾನಸ್ಪದ ಓಡಾಟ ನಡೆಸುವುದು ಅಪರಾಧ. ಸುತ್ತಲಿನ ಗ್ರಾಮಸ್ಥರು ಸಹ ಈ ಬಗ್ಗೆ ಇನ್ನಷ್ಟು ಎಚ್ಚರವಹಿಸಬೇಕಿದೆ.
ಬ್ಯಾಲಾಳುವಿನ ಸುತ್ತಲಿನ ಗ್ರಾಮಗಳ ಮನೆಮನೆಗಳಿಗೆ ತೆರಳಿ ಪೊಲೀಸ್ ಇಲಾಖೆ ಪರಿಶೀಲನೆ ನಡೆಸಿದೆ. ಯಾವುದೇ ಅನುಮಾನಸ್ಪದ ಚಲನವಲನಗಳ ಕಂಡು ಬಂದಲ್ಲಿ ಕೂಡಲೇ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ ಎಂದು ರಾಮನಗರ ಎಸ್ ಪಿ ಶ್ರೀನಿವಾಸ್‌ಗೌಡ ತಿಳಿಸಿದ್ದಾರೆ.