ತುಮಕೂರು: ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ 23 ಆರೋಪಿಗಳಿಗೆ 1 ವರ್ಷ ಶಿಕ್ಷೆ ಹಾಗೂ ತಲಾ 15.000 ರೂ.ನಂತೆ ಒಟ್ಟು 3.45 ಲಕ್ಷ ರೂ. ದಂಡ ವಿಧಿಸಿ ತುಮಕೂರು ಜೆಎಂಎಫ್ ಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಏನಿದು ಘಟನೆ?
2021 ಜುಲೈ 3 ರಂದು ಸಂಜೆ 5.00 ಗಂಟೆಗೆ ಕೋವಿಡ್-19 ವಾರದ ಲಾಕ್ ಡೌನ್ ಸಮಯದಲ್ಲಿ ಸರ್ಕಾರದ ಆದೇಶದನ್ವಯ ವಾರದ ಅಂತ್ಯದ ಲಾಕ್ ಡೌನ್ ಆದೇಶದಂತೆ ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ಅಂಗಡಿ ತೆರೆಯಲು ಅವಕಾಶ ವಿಧಿಸಲಾಗಿತ್ತು.
ಹೀಗಿದ್ದರೂ ಸರ್ಕಾರದ ಲಾಕ್‌ಡೌನ್ ಆದೇಶ ಉಲ್ಲಂಘಿಸಿ ಗುಬ್ಬಿ ತಾಲೂಕಿನ ಚಿಕ್ಕಕುನ್ನಾಲ ಸರ್ಕಲ್ನಲ್ಲಿ ಅಪರಾಧಿ-1 ಆದೀರ್ ಅಹಮದ್ ಅಂಗಡಿ ತೆರೆದು ವ್ಯಾಪಾರ ಮಾಡುತ್ತಿದ್ದ. ಸರ್ಕಾರದ ಆದೇಶದಂತೆ ಅಂಗಡಿ ಮುಚ್ಚುವಂತೆ ಸೂಚಿಸಿ ಪೊಲೀಸರನ್ನು 22 ಮಂದಿ ಸೇರಿ ಎಳೆದಾಡಿ ತಳ್ಳಿ ಕಲ್ಲಿನಿಂದ ಹೊಡೆದು ಗಾಯಗೊಳಿಸಿದ್ದರು. ಪೊಲೀಸರು ಜೀಪು ಹತ್ತಿ ವಾಪಸ್ಸಾಗುತ್ತಿದ್ದಾಗ ಕಲ್ಲು ಎಸೆದು ಸರ್ಕಾರಿ ವಾಹನವನ್ನು ಜಖಂ ಮಾಡಿದ್ದರು.
ಈ ಬಗ್ಗೆ ಸಿಎಸ್ ಪುರ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಎಪಿಡೆಮಿಕ್ ಆಕ್ಟ್ ಪ್ರಕಾರ ಪ್ರಕರಣ ದಾಖಲಾಗಿತ್ತು. ಪ್ರಕರಣದ ಸಂಬಂಧ ಪ್ರಕರಣದ ತನಿಖೆ ನಡೆಸಿದ್ದ ಗುಬ್ಬಿ ವೃತ್ತ ನಿರೀಕ್ಷಕ ನದಾಫ್ ಆರೋಪಿಗಳ ವಿರುದ್ಧ ದೋಷರೋಪಣ ಪತ್ರವನ್ನು ಜೆಎಂಎಫ್ಸಿ ಘನ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ನ್ಯಾಯಾಲಯದಲ್ಲಿ ಸಿಸಿ ನಂ-2921/2021 ರಂತೆ ವಿಚಾರಣೆ ನಡೆದು, ಆರೋಪಿಗಳು ಮಾಡಿದ ಕೃತ್ಯವು ಘನ ನ್ಯಾಯಾಲಯದಲ್ಲಿ ಸಾಬೀತಾದ ಕಾರಣ 23 ಆರೋಪಿಗಳಿಗೆ 1 ವರ್ಷ ಸಾದಾ ಶಿಕ್ಷೆ ಹಾಗೂ ತಲಾ 15,000 ರೂ ನಂತೆ ಒಟ್ಟು 3,45,000 ರೂ ದಂಡವನ್ನು ವಿಧಿಸಿದೆ.
ದಂಡದ ಮೊತ್ತದಲ್ಲಿ ಪ್ರಕರಣದ ಪ್ರಮುಖ ಸಾಕ್ಷಿದಾರರಾದ ಸೋಮಶೇಖರ್ ಪಿಎಸ್‌ಐ, ಕುಮಾರಸ್ವಾಮಿ ಎಎಸ್‌ಐ, ಸಿಬ್ಬಂದಿ ರಾಜು ದೊಡ್ಡನಿಂಗಣ್ಣನವರ್ ಹಾಗೂ ದುಶ್ಯಂತ್ ಅವರುಗಳಿಗೆ ತಲಾ 15,000/- ರೂಗಳನ್ನು ನೀಡುವಂತೆ ನ್ಯಾಯಾಲಯ ಆದೇಶಿಸಿದೆ.