ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪೊಲೀಸ್ ಠಾಣೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದು, ಪೋಕ್ಸೋ ಪ್ರಕರಣ ಸಂಬಂಧ ಲಂಚ ಪಡೆಯುತ್ತಿದ್ದ ಪಿಸಿ ಅಂಬರೀಷ್ ಎಂಬವರು ರೆಡ್‌ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.
ಚಾರ್ಜ್ ಶೀಟ್ ಸ್ಟ್ರಾಂಗ್ ಮಾಡಲು ಪಿಎಸ್‌ಐ ಜಗದೇವಿ ಅವರು ಪಿಸಿ ಅಂಬರೀಷ್ ಕೈಗೆ ಲಂಚ ಕೊಡುವಂತೆ ಹೇಳಿದ್ದ ಆಡಿಯೋ ವೈರಲ್ ಆಗಿತ್ತು. ಪಿಎಸ್ಐ ಜಗದೇವಿ ಮತ್ತು ಠಾಣಾ ಬರಹಗಾರ ಮಂಜುನಾಥ್ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಆ ಲಂಚವನ್ನು ಪಡೆಯುತ್ತಿದ್ದಾಗ ಅಂಬರೀಷ್ ಲೋಕಾಯುಕ್ತ ಅಧಿಕಾರಿಗಳ ತಂಡಕ್ಕೆ ಸಿಕ್ಕಿ ಬಿದ್ದಿದ್ದಾರೆ.
ಪಿಎಸ್ಐ ಜಗದೇವಿ ಮತ್ತು ಮಂಜುನಾಥ್ ಸ್ಥಳದಿಂದ ಪರಾರಿಯಾಗಿದ್ದಾರೆ. ಲೋಕಾಯುಕ್ತ ಎಸ್ ಪಿ ಕೆ.ವಂಶಿಕೃಷ್ಣ , ಡಿವೈಎಸ್ಪಿ ನಾಗೇಶ್ ಹಸ್ಲರ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಜಗದೇವಿ ಮತ್ತು ಮಂಜುನಾಥ್ 70 ಸಾವಿರಕ್ಕೆ ಬೇಡಿಕೆ ಇಟ್ಟಿದ್ದು, ಮುಂಗಡವಾಗಿ 50 ಸಾವಿರ ಪಡೆಯುವ ವೇಳೆ ಸಿಕ್ಕಿಬಿದ್ದಿದ್ದಾರೆ.

 


