ಪೋಕ್ಸೋ ಕಾಯ್ದೆಯಡಿ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗುವ ಬಾಲ ಗರ್ಭಿಣಿ ಪ್ರಕರಣದ ಕುರಿತು ಆರೋಗ್ಯ ಇಲಾಖೆ ಮಾರ್ಗಸೂಚಿ ಪ್ರಕಟ ಮಾಡಿದೆ. ಕಡ್ಡಾಯವಾಗಿ ವರದಿ ಮತ್ತು ಕ್ರಮದ ಬಗ್ಗೆ ಮಾರ್ಗಸೂಚಿ ಪ್ರಕಟ ಮಾಡಿದ್ದು, ಎಲ್ಲಾ ಆಸ್ಪತ್ರೆಗಳು ಈ ನಿಯಮಗಳನ್ನು ಪಾಲಿಸಬೇಕು ಎಂದು ಆದೇಶದಲ್ಲಿ ತಿಳಿಸಿದೆ.
ಪೋಕ್ಸೋ ಪ್ರಕರಣದ ವಿವರಗಳನ್ನು ಸೂಕ್ತವಾಗಿ ದಾಖಲಿಸಬೇಕು. ವೈದ್ಯಕೀಯ ದಾಖಲೆಗಳನ್ನು ಕಾನೂನುಬದ್ಧವಾಗಿ ಸಂಗ್ರಹಿಸಬೇಕು. ರೋಗಿಯ ಗೌಪ್ಯತೆಯನ್ನು ಕಾಪಾಡಬೇಕು. ತನಿಖಾಧಿಕಾರಿಗಳಿಗೆ ಅಗತ್ಯ ಸಹಕಾರ ನೀಡಬೇಕು. ಎಲ್ಲಾ ಖಾಸಗಿ ಆಸ್ಪತ್ರೆಗಳು ತಮ್ಮ ವೈದ್ಯರು ಮತ್ತು ಸಿಬ್ಬಂದಿಗೆ ಪೋಕ್ಸೋ ಕಾಯಿದೆಯ ವಿಧಿ-ನಿಯಮಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಈ ಸೂಚನೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಕ್ರಮ ಕೈಗೊಳ್ಳಬೇಕು ಎಂಬ ನಿಯಮಗಳನ್ನು ಮಾರಗ್ಸೂಚಿ ಒಳಗೊಂಡಿದೆ.
18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರು ಗರ್ಭಿಣಿಯಾಗಿ ಆಸ್ಪತ್ರೆಗೆ ದಾಖಲಾದ ತಕ್ಷಣ ಮಾಹಿತಿಯನ್ನು 1098 ಮಕ್ಕಳ ಸಹಾಯವಾಣಿ ಅಥವಾ ಸ್ಥಳೀಯ ಪೊಲೀಸರಿಗೆ ತಿಳಿಸಬೇಕು. ಪೋಕ್ಸೊ ಅಡಿಯಲ್ಲಿ ಯಾವುದೇ ಲೈಂಗಿಕ ದೌರ್ಜನ್ಯದ ಬಗ್ಗೆ ಮಾಹಿತಿ ತಿಳಿದಿದ್ದರೆ ವರದಿ ಮಾಡುವುದು ವಿಶೇಷವಾಗಿ ವೈದ್ಯರ ಜವಾಬ್ದಾರಿ. ಸಂಬಂಧಿಸಿದ ವೈದ್ಯಕೀಯ ದಾಖಲೆಗಳನ್ನು ಕಾನೂನು ಉದ್ದೇಶಗಳಿಗಾಗಿ ಸಂರಕ್ಷಿಸಬೇಕು. ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗೆ ಪೋಕ್ಸೊ ಕಾಯ್ದೆಯ ನಿಬಂಧನೆಗಳ ಬಗ್ಗೆ ಅರಿವು ಮೂಡಿಸಬೇಕು. ಸಂತ್ರಸ್ತರಿಗೆ ತುರ್ತು ವೈದ್ಯಕೀಯ ಚಿಕಿತ್ಸೆ ಒದಗಿಸುವುದು ಕಡ್ಡಾಯ. ಈ ಮಾರ್ಗಸೂಚಿಗಳನ್ನು ಉಲ್ಲಂಘಿಸಿದರೆ ಕಾಯ್ದೆಯಡಿ ಜೈಲು ಶಿಕ್ಷೆ ಮತ್ತು ದಂಡವನ್ನು ಎದುರಿಸಬೇಕಾಗುತ್ತದೆ.


