ಬ್ರಿಟನ್ ಮೂಲದ ರಕ್ಷಣಾ ವ್ಯಾಪಾರಿ ಸಂಜಯ್ ಭಂಡಾರಿ ವಿರುದ್ಧದ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಅವರ ಪತಿ ರಾಬರ್ಟ್ ವಾದ್ರಾ ವಿರುದ್ಧ ಜಾರಿ ನಿರ್ದೇಶನಾಲಯ ಹೊಸ ಚಾರ್ಜ್ಶೀಟ್ ಸಲ್ಲಿಸಿದೆ.
ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಕೆಯಾಗಿದೆ. ಜುಲೈನಲ್ಲಿ ಪಿಎಂಎಲ್‌ಎ ಅಡಿ ಅವರ ಹೇಳಿಕೆಯನ್ನು ದಾಖಲಿಸಲಾಗಿತ್ತು. ಇಡಿಯಿಂದ 5 ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆದಿತ್ತು. ಪ್ರಕರಣದಲ್ಲಿ ರಾಬರ್ಟ್ ವಾದ್ರಾ ಅವರನ್ನು ಆರೋಪಿಯನ್ನಾಗಿ ಹೆಸರಿಸಿದ್ದು ಇದೇ ಮೊದಲು. ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ರಾಬರ್ಟ್ ವಾದ್ರಾರ ಹೇಳಿಕೆಯನ್ನು ದಾಖಲಿಸಿದ ನಂತರ ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯದಲ್ಲಿ ಪ್ರಾಸಿಕ್ಯೂಷನ್ ದೂರು ದಾಖಲಿಸ ಲಾಗಿದೆ.
ಸಂಜಯ್ ಭಂಡಾರಿಯೊಂದಿಗೆ ಸುಮಿತ್ ಚಡ್ಡಾ, ಸಂಜೀವ್ ಕಪೂರ್, ಅನಿರುದ್ಧ್ ವಾಧ್ವಾ, ಸ್ಯಾಂಟೆಕ್ ಇಂಟರ್ನ್ಯಾಷನಲ್ ಎಫ್‌ಜೆಡ್‌ಸಿ, ಆಫ್‌ಸೆಟ್ ಇಂಡಿಯಾ ಸಲ್ಯೂಷನ್ಸ್ ಎಫ್‌ಜೆಡ್‌ಸಿ, ಶಾಮ್ಲಾನ್ ಗ್ರೋಸ್-1 ಇಂಕ್ ಮತ್ತು ಚೆರುವತ್ತೂರ್ ಚಕ್ಕುಟ್ಟಿ ಥಂಪಿ ಅವರನ್ನು ಆರೋಪಿಗಳೆಂದು ಹೆಸರಿಸಲಾಗಿದೆ.
ಹರಿಯಾಣ ಮತ್ತು ರಾಜಸ್ಥಾನದಲ್ಲಿ ಭೂ ವ್ಯವಹಾರ ಅಕ್ರಮ ಒಳಗೊಂಡಂತೆ ವಾದ್ರಾ ವಿರುದ್ಧ ಮೂರು ಪ್ರತ್ಯೇಕ ಹಣ ವರ್ಗಾವಣೆ ಪ್ರಕರಣಗಳಲ್ಲಿ ಇಡಿ ನಿಗಾ ಇಟ್ಟಿದೆ. ಪ್ರಕರಣದಲ್ಲಿ ಇಡಿ 2009ರಲ್ಲಿ ಸಂಜಯ್ ಭಂಡಾರಿಯ ಲಂಡನ್‌ನಲ್ಲಿರುವ ಆಸ್ತಿಯನ್ನು ಸ್ವಾಧೀನಪಡಿಸಿಕೊಂಡಿತ್ತು. 2016ರಲ್ಲಿ ದೆಹಲಿಯಲ್ಲಿ ಸಂಜಯ್ ಭಂಡಾರಿ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ ನಂತರ ಭಾರತದಿಂದ ಪಲಾಯನ ಮಾಡಿದ್ದಾರೆ.


