ನೆಹರೂ ನಂತರ ಈ ದೇಶದ ಪ್ರಧಾನ ಮಂತ್ರಿ ಸ್ಥಾನವನ್ನು ಅಲಂಕರಿಸುವ ಸಮರ್ಥ ನಾಯಕ ಯಾರು ಎಂಬ ಮುಕ್ತ ಮತ್ತು ನಿರ್ಭೀತ ಚರ್ಚೆ ಅವರು ಬದುಕಿದ್ದಾಗಲೇ ಕಾಂಗ್ರೆಸ್ ಪಕ್ಷದಲ್ಲಿ ನಡೆದಿತ್ತು. ಆದರೆ ಇಂತಹ ಪಾರದರ್ಶಕ ಚರ್ಚೆ ಈಗ ಬಿಜೆಪಿ ಪಾಳೆಯದಲ್ಲಿ ಯಾಕಿಲ್ಲ ?
ರಾಜಕಾರಣದಲ್ಲಿ ವಯುಸು ಮುಖ್ಯವೇ ? ಇವರಿಗೆ ನಿವೃತ್ತಿ ಎಂಬುದಿದೆಯೇ ? ರಾಜಕಾರಣಿಗೆ ವಿದ್ಯಾರ್ಹತೆಗಳು ಕಡ್ಡಾಯವೇ .. ? ಈ ಪ್ರಶ್ನೆಗಳು ಕಳೆದ ಎಪ್ಪತ್ತೈದು ವರ್ಷಗಳಿಂದಲೂ ಈ ದೇಶದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಆದರೆ ಭಾರತೀಯ ಸಂವಿಧಾನದಲ್ಲಿ ನಿವೃತ್ತಿ ವಯಸ್ಸು ಅಥವಾ ಕನಿಷ್ಠ ವಿದ್ಯಾರ್ಹತೆಗಳ ಬಗ್ಗೆ ಯಾವುದೇ ನೇರ ಮತ್ತು ನಿಖರ ಉಲ್ಲೇಖಗಳಿಲ್ಲ ಮತ್ತು ಅವುಗಳು ಕಡ್ಡಾಯವೂ ಅಲ್ಲ.
ಭಾರತೀಯ ಜನತಾ ಪಕ್ಷವೀಗ ಪ್ರಜಾತಂತ್ರ ದೇಶಗಳಲ್ಲಿಯೇ ಅತಿದೊಡ್ಡ ರಾಜಕೀಯ ಪಕ್ಷವೆಂದು ಹೇಳಲಾಗಿದೆ. ಈ ಕುರಿತು ಜೆಪಿ ನಡ್ಡಾ ಎರಡು ದಿನಗಳ ಹಿಂದೆ ನೀಡಿರುವ ಹೇಳಿಕೆ ಗಮನಾರ್ಹ. ೧೯೮೦ ರಲ್ಲಿ ಜನ್ಮತಾಳಿದ ಬಿಜೆಪಿ ಇಂದು ಪ್ರಪಂಚದ ಅತಿದೊಡ್ಡ ಪ್ರಜಾತಂತ್ರ ದೇಶವಾದ ಭಾರತದ ಅಧಿಕಾರದ ಚುಕ್ಕಾಣಿ ಹಿಡಿಯುವಂತಹ ರಾಜಕೀಯ ಶಕ್ತಿ ಸಾಮರ್ಥ್ಯವನ್ನು ಸಂಪಾದಿಸಿಕೊಂಡಿದೆ.
ಹದಿನೈದು ವರ್ಷಗಳ ಬಿಜೆಪಿ, ರಾಜಕಾರಣದಲ್ಲಿ ನಿವೃತ್ತಿ ಸಂಬಂಧ ಕೈಗೊಂಡ ಪ್ರಮುಖ ನಿರ್ಣಯವೊಂದು ಈ ಪಕ್ಷದ ನಾಯಕತ್ವದ ದಿಕ್ಕು ಮತ್ತು ದಿಶೆಯನ್ನು ಬದಲಾಯಿಸಿತು . ಬಿಜೆಪಿಯ ಹುಟ್ಟುವಳಿಗೆ ಕಾರಣಕರ್ತರಾದವರಲ್ಲಿ ಪ್ರಮುಖರಾದ ಎಲ್ ಕೆ ಅಡ್ವಾಣಿ ಅವರು ಈ ದೇಶದ ಪ್ರಧಾನಿ ಆಗುವ ಅವಕಾಶ ತಪ್ಪಿ ಹೋಯಿತು ! ತದನನಂತರ ಬಿಜೆಪಿಯ ಇದೇ ಮಾರ್ಗಸೂಚಿ ಮುರುಳಿ ಮನೋಹರ ಜೋಶಿ ಮತ್ತು ಯಡಿಯೂರಪ್ಪ ಅವರನ್ನೂ ಹಿಂಬಾಲಿಸಿತು.
ಒಂದು ತಿಂಗಳ ಹಿಂದೆ ಆರ್ ಎಸ್ ಎಸ್ ಸರಸಂಘಚಾಲಕರಾದ ಮೋಹನ್ ಭಾಗವತ್ ನೀಡಿದ ಹೇಳಿಕೆ ದೇಶದ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿತು. ಎಪ್ಪತ್ತೈದು ವರ್ಷ ಎಂದರೆ ಅದು ನಿವೃತ್ತಿಯ ಕಾಲ. ಓರ್ವ ವ್ಯಕ್ತಿ ಶಾಲು ಹೊದಿಸಿಕೊಂಡು ಸನ್ಮಾನ ಸ್ವೀಕರಿಸಿದರೆಂದರೆ ಅವರು ಸೇವೆಯಿಂದ ನಿವೃತ್ತಿ ಹೊಂದಿದರೆಂಬುದೇ ಅರ್ಥ ಎಂದು ಸ್ಪಷ್ಟವಾಗಿ ಹೇಳಿದರು. ಆದರೆ ಇದೇ ಹೇಳಿಕೆಯನ್ನು ಭಾಗವತ್ ಮೊನ್ನೆ ಬೇರೊಂದು ರೀತಿಯಲ್ಲಿ ವ್ಯಾಖ್ಯಾನಿಸಿದರು.
ದೇಶದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈಗ ಎಪ್ಪತ್ತೈದು ವರ್ಷಗಳು. ಬಿಜೆಪಿಯು ರೂಪಿಸಿದ ಶಿಸ್ತು ಮತ್ತು ನಿಯಮಾವಳಿ ಪ್ರಕಾರ ಅವರು ತಮ್ಮ ರಾಜಕೀಯ ನಿವೃತ್ತಿಯನ್ನು ಪಡೆಯಬೇಕು. ಆದರೆ ಈಗ ಈ ಬಗ್ಗೆ ಯಾವ ಚರ್ಚೆಯೂ ಇಲ್ಲ. ಚಕಾರವೂ ಇಲ್ಲ! ಅಡ್ವಾಣಿ, ಡಾ. ಜೋಶಿ ಮತ್ತು ಯಡಿಯೂರಪ್ಪ ಅವರಿಗೆ ಅನ್ವಯವಾದ ಬಿಜೆಪಿ ರೂಲ್ಸು ಮೋದಿ ಅವರಿಗೇಕೆ ಅನ್ವಯವಾಗುವುದಿಲ್ಲ ? ಈ ಪಶ್ನೆಯಿಂದು ಬಿಜೆಪಿ ಆಂತರಿಕ ವಲಯದ ನಾಯಕರಲ್ಲಿಯೇ ಒಳಗೊಳಗೆ ಚರ್ಚೆಯಾದ ಸಂಗತಿ. ಇದನ್ನು ಈ ದೇಶದ ಜನತೆ ಸಾರ್ವತ್ರಿಕವಾಗಿ ಚರ್ಚೆ ಮಾಡಬಾರದೆಂಬ ನಿಷೇಧ ಅಥವಾ ನಿರ್ಬಂಧವೇನಿಲ್ಲ. ಇದು ಪ್ರಜಾತಂತ್ರ .
ಪ್ರಪಂಚದ ಅತಿ ದೊಡ್ಡ ರಾಜಕೀಯ ಪಕ್ಷವೆಂದು ಎದೆಯುಬ್ಬಿಸಿ ಹೇಳಿಕೊಳ್ಳುವ ಪಾರ್ಟಿ, ತಾನೇ ಮಾಡಿದ ನಿಯಮಾವಳಿಯನ್ನು ಉಲ್ಲಂಘಿಸಿದರೆ ಇದಕ್ಕೆ ಜನತೆ ಏನನ್ನಬೇಕು. ನೆಹರೂ ನಂತರ ಈ ದೇಶದ ಪ್ರಧಾನಿಯಾಗುವ ಸಮರ್ಥ ನಾಯಕ ಯಾರು ಎಂಬ ಮುಕ್ತ ಮತ್ತು ನಿರ್ಭೀತ ಚರ್ಚೆ ಅವರು ಬದುಕಿದ್ದಾಗಲೇ ಕಾಂಗ್ರೆಸ್ ಪಕ್ಷದಲ್ಲಿ ನಡೆದಿತ್ತು. ಇಂತಹ ಚರ್ಚೆ ಈಗ ಬಿಜೆಪಿ ಪಾಳೆಯದಲ್ಲಿ ಯಾಕಿಲ್ಲ ಎಂಬುದೇ ಪ್ರಶ್ನೆ.