ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ‘ಭಾರತ ಭಾಗ್ಯವಿಧಾತ’ ಬಿರುದು ನೀಡಿ ಉಡುಪಿ ಶ್ರೀ ಕೃಷ್ಣಮಠದಿಂದ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಪ್ರಧಾನಿಗೆ ಬೆಳ್ಳಿಯ ಕಡೆಗೋಲು ನೀಡಿ ಗೌರವಿಸಲಾಯಿತು.
ಉಡುಪಿ ಶ್ರೀ ಕೃಷ್ಣ ಮಠಕ್ಕೆ ಶುಕ್ರವಾರ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಶ್ರೀ ಕೃಷ್ಣನ ದರ್ಶನ ಪಡೆದು, ಕನಕದಾಸರಿಗೆ ಪುಷ್ಪಾರ್ಚನೆ ಮಾಡಿ ಕನಕನ ಕಿಂಡಿಗೆ ಹೊದಿಸಿರುವ ಚಿನ್ನದ ಕವಚ, ಸುವರ್ಣ ತೀರ್ಥ ಮಂಟಪವನ್ನು ಅನಾವರಣಗೊಳಿಸಿದರು. ಬಳಿಕ ಅವರು ಲಕ್ಷ ಕಂಠ ಗೀತಾ ಪಠಣ ಸಮಾವೇಶದಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಪ್ರಧಾನಿಯವರಿಗೆ ‘ಭಾರತ ಭಾಗ್ಯವಿಧಾತ’ ಬಿರುದು ನೀಡಿ ಸನ್ಮಾನಿಸಿದ ನಂತರ ಮಾತನಾಡಿದ ಪರ್ಯಾಯ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಅಯೋಧ್ಯೆಯಲ್ಲಿ ರಾಮನನ್ನು ಸ್ಥಾಪಿಸಿ, ಕೃಷ್ಣನ ಕ್ಷೇತ್ರಕ್ಕೆ ಪ್ರಧಾನಿ ಮೋದಿ ಆಗಮಿಸಿದ್ದಾರೆ. 14 ವರ್ಷದ ಮೇಲೆ ರಾಮ ಅಯೋಧ್ಯೆಗೆ ಮರಳಿದ್ದ. ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ 14 ವರ್ಷದ ಹಿಂದೆ ನರೇಂದ್ರ ಮೋದಿಯವರು ಉಡುಪಿ ಶ್ರೀ ಕೃಷ್ಣ ಮಠಕ್ಕೆ ಬಂದಿದ್ದರು. ಆಗಲೂ ನಮ್ಮ ಪರ್ಯಾಯ ನಡೆಯುತ್ತಿತ್ತು. ನಮ್ಮದು ಇಂದ್ರ ಪರ್ಯಾಯ ನಾನು ಸುಗುಣೇಂದ್ರ ಅವರು ನರೇಂದ್ರ ಎಂದರು.
ಶ್ರೀ ಕೃಷ್ಣನಲ್ಲಿ ನಾನು ಪ್ರಧಾನಿಯವರ ಆರೋಗ್ಯ ಶಕ್ತಿಯನ್ನು ಬೇಡುತ್ತೇನೆ. ರಾಮ ಮಂದಿರವನ್ನು ಕೃಷ್ಣಮಠಕ್ಕೆ ಬಂದು ಕೃಷ್ಣಾರ್ಪಣೆ ಮಾಡಿದ್ದಾರೆ. ಭಗವದ್ಗೀತೆಯ ಎಲ್ಲಾ ಅಂಶವನ್ನು ನರೇಂದ್ರ ಮೋದಿ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ಕೃಷ್ಣ ನಿಸ್ವಾರ್ಥ ಸೇವೆಯ ಬಗ್ಗೆ ಗೀತೆಯಲ್ಲಿ ಹೇಳಿದ್ದಾನೆ. ಅದನ್ನು ನರೇಂದ್ರ ಮೋದಿಯವರು ತಮ್ಮ ಕಾರ್ಯ ವೈಖರಿಯಲ್ಲಿ ಅಳವಡಿಸಿಕೊಂಡಿದ್ದಾರೆ ಎಂದು ಶ್ಲಾಘಿಸಿದರು.
ಧರ್ಮ ಸಂಸ್ಥಾಪನೆಗೆ ನಾನು ಮತ್ತೆ ಮತ್ತೆ ಅವತಾರಗಳನ್ನು ಎತ್ತಿ ಬರುತ್ತೇನೆ ಎಂದು ಕೃಷ್ಣ ಹೇಳಿದ್ದ. ಶ್ರೀ ಕೃಷ್ಣನ ಸಂದೇಶವನ್ನು ಮೋದಿ ಪಾಲಿಸುತ್ತಾ ಬಂದಿದ್ದಾರೆ. ಧರ್ಮದಿಂದ ಜಗತ್ತು ರಕ್ಷಣೆ ದುಷ್ಟರ ಶಿಕ್ಷೆ ಎಂಬುದನ್ನು ಪಾಲಿಸುತ್ತಿದ್ದಾರೆ. ವಿಶ್ವಗೀತಾ ಪರ್ಯಾಯಕ್ಕೆ ವಿಶ್ವನಾಯಕ ಮೋದಿ ಬಂದಿದ್ದಾರೆ ಎಂದು ಅವರು ಹೇಳಿದರು.
ಪ್ರಧಾನಿ ಮೋದಿ ಅವರು ರೋಡ್ ಶೋ ಮೂಲಕ ಶ್ರೀ ಕೃಷ್ಣ ಮಠಕ್ಕೆ ಪ್ರಧಾನಿ ಆಗಮಿಸಿದರು. ಈ ಮೂಲಕ ಅವರು ಜನರತ್ತ ಕೈ ಬೀಸಿದರು. ಉಡುಪಿ-ಬನ್ನಂಜೆಯ ಡಾ.ವಿ.ಎಸ್.ಆಚಾರ್ಯ ಬಸ್ ನಿಲ್ದಾಣದ ಬಳಿ ಶ್ರೀ ನಾರಾಯಣ ಗುರು ಸರ್ಕಲ್ನಿಂದ ರೋಡ್ ಶೋ ನಡೆಸಿದ ಪ್ರಧಾನಿ ಮೋದಿ ಅವರಿಗೆ ಪುಷ್ಪವೃಷ್ಟಿ ಸ್ವಾಗತ ಕೋರಲಾಯಿತು. ರಸ್ತೆ ಬದಿ ಕಾದು ನಿಂತು ಪ್ರಧಾನಿ ಅವರನ್ನು ಸಾರ್ವಜನಿಕರು ಸ್ವಾಗತಿಸಿದರು.


