ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲಿನಲ್ಲಿರುವ ನಟ ದರ್ಶನ್ ವೀಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಯುವಾಗ 57ನೇ ಸಿಸಿಹೆಚ್ ಕೋರ್ಟ್‌ನಲ್ಲಿ ನ್ಯಾಯಾಧೀಶರ ಮುಂದೆ ಕಣ್ಣೀರು ಹಾಕಿ, ನನಗೆ ಜೈಲಿನಲ್ಲಿ ಬದುಕುವುದು ಕಷ್ಟವಾಗುತ್ತಿದೆ, ದಯವಿಟ್ಟು ನನಗೆ ವಿಷ ಕೊಡಿ, ನಾನು ಬಿಸಿಲು ನೋಡದೆ ೨೦ ದಿನ ಕಳೆದಿದೆ, ಕೈ ಫಂಗಸ್ ಬಂದಿದೆ, ನನ್ನ ಬಟ್ಟೆಗಳೆಲ್ಲ ಗಬ್ಬು ವಾಸನೆ ಬರುತ್ತಿದೆ ಎಂದು ಹೇಳಿದ್ದಾರೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್, ಜೈಲಿನ ಕಠಿಣ ಜೀವನಕ್ಕೆ ಬೇಸತ್ತು ಹೋಗಿ, ನನಗೆ ಜೀವನವೇ ಸಾಕಾಗಿದೆ, ನನಗೆ ಜೈಲಿನಲ್ಲಿ ಬದುಕೋಕೆ ಆಗ್ತಿಲ್ಲ, ದಯವಿಟ್ಟು ವಿಷ ಕೊಡಿ ಎಂದು ಮನವಿ ಮಾಡಿದ್ದಾರೆ.
ಕಳೆದ ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್‌ನಿಂದ ದರ್ಶನ್ ಅವರ ಜಾಮೀನು ರದ್ದಾಗಿ, ಮತ್ತೆ ಜೈಲಿಗೆ ಕಳುಹಿಸಲಾಗಿತ್ತು. ಹಿಂದೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್‌ಗೆ ವಿಶೇಷ ಆತಿಥ್ಯ ನೀಡಲಾಗಿತ್ತು ಎಂಬ ಆರೋಪದ ಹಿನ್ನೆಲೆ ಜೈಲಾಧಿಕಾರಿಗಳು ಈ ಬಾರಿ ಕಠಿಣ ಕ್ರಮ ಕೈಗೊಂಡು ದರ್ಶನ್‌ಗೆ ಪ್ರತ್ಯೇಕ ಸೆಲ್ ವ್ಯವಸ್ಥೆ ಮಾಡಿ ಬ್ಯಾರಕ್‌ಗೆ ಯಾರನ್ನೂ ಬಿಡದಂತೆ ಕಟ್ಟುನಿಟ್ಟು ಮಾಡಿದ್ದಾರೆ. ದರ್ಶನ್ ತನಗೆ ಉತ್ತಮ ಹಾಸಿಗೆ ಮತ್ತು ದಿಂಬು ನೀಡುವಂತೆ ಕೋರ್ಟ್‌ಗೆ ಈಗಾಗಲೇ ಮನವಿ ಮಾಡಿದ್ದಾರೆ.
20 ದಿನಗಳಲ್ಲಿ ದರ್ಶನ್ 3-5 ಕೆಜಿ ತೂಕ ಕಳೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ದರ್ಶನ್ ಮನವಿಗೆ ನ್ಯಾಯಾಧೀಶರು, ಹಾಗೆಲ್ಲ ಮಾತನಾಡಬಾರದು, ನಿಮ್ಮ ಮನವಿಯ ಬಗ್ಗೆ ಮಧ್ಯಾಹ್ನ 3 ಗಂಟೆಗೆ ಆದೇಶ ನೀಡುವುದಾಗಿ ಎಂದು ಪ್ರತಿಕ್ರಿಯಿಸಿ ವಿಚಾರಣೆ ಮುಂದೂಡಿದ್ದರು.
ರೇಣುಕಾಸ್ವಾಮಿ ಕೊಲೆ ಪ್ರಕರಣವು ಕಳೆದ ವರ್ಷ ಜೂನ್ 8ರಂದು ನಡೆದಿದ್ದು, ದರ್ಶನ್ ಮತ್ತು ತಂಡವು ರೇಣುಕಾಸ್ವಾಮಿಯನ್ನು ಅಪಹರಿಸಿ ಬೆಂಗಳೂರಿಗೆ ಕರೆತಂದು ಚಿತ್ರಹಿಂಸೆ ನೀಡಿ ಕೊಲೆ ಮಾಡಿದ ಆರೋಪದಡಿ ಜೈಲು ಸೇರಿದ್ದಾರೆ.