ಬೆಂಗಳೂರು: “ಬೆಂಗಳೂರಿನ ರಸ್ತೆಗಳು ಭವಿಷ್ಯದಲ್ಲಿಯೂ ಉತ್ತಮವಾಗಿರಬೇಕು. ಆ ರೀತಿಯಾಗಿ ನಾವುಗಳು ಯೋಜನೆ ರೂಪಿಸಬೇಕು. ರಸ್ತೆ, ಪಾದಚಾರಿ ಮಾರ್ಗ, ಹಸಿರು ವಲಯ ಸೇರಿದಂತೆ ಎಲ್ಲಾ ಕಡೆಯೂ ಶಿಸ್ತು ಹಾಗೂ ಏಕರೂಪತೆ ಸಾಧಿಸಬೇಕು. ಇಲ್ಲದಿದ್ದರೇ ಬೆಂಗಳೂರಿಗೆ ನಾವುಗಳು ಮೋಸ ಮಾಡಿದಂತೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟರು.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ “ನಮ್ಮ ರಸ್ತೆ – ವಿನ್ಯಾಸ ಕಾರ್ಯಾಗಾರ” ಉದ್ಘಾಟನೆ ಮತ್ತು ಸಂಚಾರ ಪ್ರಯೋಗಾಲಯಕ್ಕೆ ಚಾಲನೆ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು.
“ಕೇವಲ ಎರಡು- ಮೂರು ವರ್ಷಗಳಲ್ಲಿ ಬೆಂಗಳೂರನ್ನು ಬದಲಾಯಿಸಲು ಆಗುವುದಿಲ್ಲ. ಮೇಲಿರುವ ಭಗವಂತ ಕೆಳಗೆ ಬಂದರೂ ಸಾಧ್ಯವಿಲ್ಲದ ಕೆಲಸ. ಆದರೆ ನಾವು ಯೋಜನೆಗಳ ರೂಪುರೇಷೆಗಳನ್ನು ಸರಿಯಾಗಿ ಮಾಡಿ, ಅನುಷ್ಠಾನಕ್ಕೆ ತಂದರೆ ಮಾತ್ರ ಇದು ಸಾಧ್ಯವಾಗುತ್ತದೆ. ರಕ್ಷಣೆ, ಗುಣಮಟ್ಟ ಮತ್ತು ಏಕರೂಪತೆ ಕಾಪಾಡುವುದು ನಮ್ಮ ಗುರಿ” ಎಂದು ಹೇಳಿದರು.
“ಈ ಕೈಪಿಡಿ ಮೂಲಕ ಅನೇಕ ಸಲಹೆ, ಸೂಚನೆಗಳನ್ನು ನಾವು ಪಡೆಯಬಹುದು. ರಸ್ತೆಬದಿ ಸಸಿಗಳನ್ನು ಎಲ್ಲಿ ನೆಡಬೇಕು, ಕಂಬಗಳು ಎಲ್ಲಿರಬೇಕು, ಮುಖ್ಯರಸ್ತೆ ಹೇಗಿರಬೇಕು, ವಾರ್ಡ್ ರಸ್ತೆಗಳು ಹೇಗಿರಬೇಕು, ಪಾದಚಾರಿ ಮಾರ್ಗಗಳನ್ನು ಹೇಗೆ ನಿರ್ಮಾಣ ಮಾಡಬೇಕು, ಜೊತೆಗೆ ರಸ್ತೆಯಲ್ಲಿ ಸಂಚಾರ ಮಾಡುವಾಗ, ನಡೆಯುವಾಗ ಹೇಗೆ ಶಿಸ್ತನ್ನು ಪಾಲಿಸಬೇಕು, ಬಸ್ ನಿಲ್ಧಾಣಗಳ ವಿನ್ಯಾಸ, ಮೆಟ್ರೋ ಪಿಲ್ಲರ್ ಗಳು, ವೃತ್ತಗಳ ಸೌಂದರ್ಯೀಕರಣದ ಬಗ್ಗೆ ಹೊಸ ಆಲೋಚನೆಗಳನ್ನು ಇಲ್ಲಿ ನೋಡಬಹುದು” ಎಂದು ಹೇಳಿದರು.
“ನಗರದ ಎಲ್ಲಾ ರಸ್ತೆಗಳ, ಪಾದಚಾರಿ ಮಾರ್ಗಗಳ ವಿನ್ಯಾಸ ಏಕರೂಪತೆಯಿಂದ ಕೂಡಿರಬೇಕು ಎನ್ನುವುದು ನಮ್ಮ ಉದ್ದೇಶ. ರಸ್ತೆ ಬದಿ ಕಂಬಗಳ ಬಣ್ಣವೂ ಸಹ ಮೊದಲೇ ನಿರ್ಧಾರ ಮಾಡಲಾಗುವುದು. ನಗರದ ಅನೇಕ ಕಡೆ ಬೇರೆ, ಬೇರೆ ವಿನ್ಯಾಸ ಬಸ್ ನಿಲ್ದಾಣಗಳಿವೆ ಅವುಗಳನ್ನು ಸಹ ಒಂದೇ ಮಾದರಿಯಲ್ಲಿ ನಿರ್ಮಾಣ ಮಾಡಬೇಕು. ಈ ಬಗ್ಗೆ ಈ ಕಾರ್ಯಾಗಾರದಲ್ಲಿ ಚರ್ಚೆ ಮಾಡಲಾಗುವುದು” ಎಂದರು.
ಹೊರಗೆ ಇರುವ ಕೇಬಲ್ ವಯರ್ ಕತ್ತರಿಸಲು ಸೂಚನೆ
“ಹೊರಗಡೆ ಇರುವ ಎಲ್ಲಾ ಕೇಬಲ್ ವಯರ್ ಗಳನ್ನು ಕಿತ್ತು ಹಾಕಬೇಕು. ಇವುಗಳನ್ನು ಭೂಗತವಾಗಿ ಹಾಕುವಂತಹ ವ್ಯವಸ್ಥೆ ಮಾಡಬೇಕು ಎಂದು ಬಿಬಿಎಂಪಿಗೆ ಸೂಚನೆ ನೀಡಿದ್ದೇನೆ. ಇಷ್ಟು ದಿನ ಕಾದೆವು ಏನಾದರೂ ಬದಲಿ ವ್ಯವಸ್ಥೆ ಮಾಡಿಕೊಳ್ಳುತ್ತಾರೆ ಎಂದು, ಇದಾಗದ ಕಾರಣ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಎಲ್ಲಾ ಕೇಬಲ್ ಗಳನ್ನು ಕತ್ತರಿಸಿದರೆ ಅವರೇ ದಾರಿಗೆ ಬರುತ್ತಾರೆ” ಎಂದು ಹೇಳಿದರು.
“ಹೊಸ ಯೋಜನೆಗಳು, ಬೆಂಗಳೂರಿನ ರೂಪುರೇಷೆಗಳ ಬಗ್ಗೆ, ಪ್ರತಿ ನಾಗರೀಕನ ಆಸ್ತಿ ರಕ್ಷಣೆ ಕುರಿತು ಹೊಸ ನೀತಿಗಳನ್ನು ತರಲಾಗಿದ್ದು ಅದನ್ನು ಫೆಬ್ರವರಿ ತಿಂಗಳ ಕೊನೆಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಬಹಿರಂಗಗೊಳಿಸಲಾಗುವುದು” ಎಂದರು.
“ಸುರಂಗರಸ್ತೆಯ ನಿರ್ಮಾಣಕ್ಕೆ ಹಲವಾರು ಸವಾಲುಗಳಿವೆ. ಇನ್ನೂ ಟೆಂಡರ್ ಕರೆಯಲು ಸಾಧ್ಯವಾಗಿಲ್ಲ. ಏಕೆಂದರೆ ಭೂಮಿಯ ಸ್ವಾಧೀನ, ಹಣಕಾಸು, ತಾಂತ್ರಿಕ ಅಂಶಗಳಿವೆ. ನೂತನ ಮೆಟ್ರೋ ಮಾರ್ಗಗಳಲ್ಲಿ ಡಬಲ್ ಡೆಕ್ಕರ್ ಅನ್ನು ಕಾರ್ಯಗತಗೊಳಿಸಲಾಗಿದೆ. ಈ ಹಿಂದೆ ಮೆಟ್ರೋ ಮಾರ್ಗವಿರುವ ಕಡೆ ಡಬಲ್ ಡೆಕ್ಕರ್ ಸಾಧ್ಯವಾಗಿಲ್ಲ” ಎಂದರು.
“ಬೆಂಗಳೂರಿನಲ್ಲಿ ಸುಮಾರು 1,700 ಕಿಮೀ ವಿಸ್ತೀರ್ಣಕ್ಕೆ ವೈಟ್ ಟಾಪಿಂಗ್ ಹಾಕಲಾಗುತ್ತಿದೆ. ಮುಂದಿನ 30 ವರ್ಷ ಇದು ಬಾಳಿಕೆ ಬರುತ್ತದೆ. ರಾಜಕಾಲುವೆ ಪಕ್ಕದಲ್ಲಿ ಹೊಸ ರಸ್ತೆಗಳ ನಿರ್ಮಾಣ. ಮೇಲ್ಸೇತುವೆ ಸೇರಿದಂತೆ ಅನೇಕ ನೂತನ ಯೋಜನೆಗಳು ಸರ್ಕಾರದ ಮುಂದಿವೆ” ಎಂದು ಹೇಳಿದರು.
“ಬಾಬಾ ಸಾಹೇಬರ ಸಂವಿಧಾನ ನಮ್ಮೆಲ್ಲರ ಬದುಕನ್ನು ರೂಪಿಸಿದೆ. ಅದೇ ರೀತಿ ಈ ನಮ್ಮರಸ್ತೆ ಎನ್ನುವ ಕೈಪಿಡಿ ಬೆಂಗಳೂರಿನ ಭವಿಷ್ಯ ಹೇಗಿರಬೇಕು ಎಂದು ದಾರಿ ತೋರಿಸಲಿದೆ. ನಾನು ಬೆಂಗಳೂರು ಅಭಿವೃದ್ದಿ ಸಚಿವನಾಗಿ ಅಧಿಕಾರವಹಿಸಿಕೊಳ್ಳುವ ಮೊದಲು ಹಾಗೂ ನಂತರವೂ ಅನೇಕ ಸ್ಥಳಗಳಿಗೆ ಭೇಟಿ ನೀಡಿದಾಗ ಅಲ್ಲಿನ ರಸ್ತೆ, ಮೆಟ್ರೋ, ಸುರಂಗ ರಸ್ತೆಗಳ ಕುರಿತು ಕುತೂಹಲಕ್ಕೆ ತಿಳಿದುಕೊಳ್ಳುತ್ತಿದ್ದೆ” ಎಂದರು.
“ಅನೇಕ ಸಂಸ್ಥೆಗಳು ಈಗಾಗಲೇ ಹಲವಾರು ಸಲಹೆಗಳನ್ನು ನೀಡಿದ್ದಾರೆ. ಮೆಟ್ರೋ ಪಿಲ್ಲರ್ ಗಳ ಮೇಲೆ ನಮ್ಮ ಸಂಸ್ಕೃತಿ, ಕ್ರೀಡೆ, ಕಲೆಗಳನ್ನು ಬಿಂಬಿಸುವ ಕಲಾತ್ಮಕ ಕೃತಿಗಳನ್ನು ಚಿತ್ರಿಸುವ ಬಗ್ಗೆ ಸಲಹೆ ಬಂದಿದೆ. ಈಗಾಗಲೇ ಈ ಕೆಲಸವನ್ನು ಅನೇಕ ಕಡೆಗಳಲ್ಲಿ ಕಾರ್ಯಗತಗೊಳಿಸಲಾಗಿದೆ” ಎಂದು ಹೇಳಿದರು.
“ಅನೇಕ ಸಂಸ್ಥೆಗಳು, ವಿದ್ಯಾರ್ಥಿಗಳು, ಯುವ ಜನತೆ ನೀಡಿರುವ ಸಲಹೆ ಸೂಚನೆಗಳನ್ನು ಕಾಪಿಟ್ಟುಕೊಳ್ಳಲಾಗುವುದು. ವೆಬ್ ಸೈಟ್ ಅಲ್ಲಿಯೂ ಪ್ರದರ್ಶಿಸಲಾಗುವುದು. ನಾವು ಕೆಂಪೇಗೌಡರು, ಕೆಮಗಲ್ ಹನುಮಂತಯ್ಯ ಅವರು, ಎಸ್. ಎಂ.ಕೃಷ್ಣ ಅವರು ನೀಡಿರುವ ಕೊಡುಗೆಗಳನ್ನು ನಾವು ನೆಪಿಸಿಕೊಳ್ಳುತ್ತೇವೆ” ಎಂದರು.
“ಎಂಜಿನಿಯರ್ಗಳು, ರಾಜಕಾರಣಿಗಳು, ಸ್ಥಳೀಯ ಸಂಸ್ಥೆಯ ಪ್ರತಿನಿಧಿಗಳು ಇಂದು ಅಧಿಕಾರದಲ್ಲಿ ಇರುತ್ತಾರೆ, ನಾಳೆ ಹೋಗುತ್ತಾರೆ. ಅಧಿಕಾರ ಸಿಕ್ಕಾಗ ಅವರದೇ ರೀತಿಯಲ್ಲಿ ಕೆಲಸ ಮಾಡುತ್ತಾರೆ. ಯಾರೂ ಇಲ್ಲದೇ ಇದ್ದರೂ ʼನಮ್ಮರಸ್ತೆʼ ಎನ್ನುವ ಕೈಪಿಡಿ ಕೆಲಸ ಮಾಡಲು ಮಾರ್ಗದರ್ಶನ ನೀಡುತ್ತದೆ. ಕೈಪಿಡಿಯಲ್ಲಿ ಇರುವ ನಿಯಮಗಳ ಅನುಸಾರವೇ ಕೆಲಸ ಮಾಡಬೇಕು ಎಂದು ಸೂಚನೆ ನೀಡಲಾಗುತ್ತದೆ” ಎಂದರು.
“ಹೊಸ ಆಲೋಚನೆಯನ್ನು ನೀಡಲು ವಿದ್ಯಾರ್ಥಿಗಳು, ಯುವಕರು ಮುಂದೆ ಬಂದಿರುವುದು ಸಂತಸದ ವಿಚಾರ. ನಿಮ್ಮ ಭವಿಷ್ಯವನ್ನು ನೀವೇ ರೂಪಿಸಿಕೊಳ್ಳಲು ಈ ಕಾರ್ಯಕ್ರಮದಲ್ಲಿ ಸೇರಿದ್ದೀರಿ. ಯುವ ಸಮುದಾಯ ಸೇರಿ ಇಡೀ ಬೆಂಗಳೂರನ್ನು ವಿಶ್ವಮಟ್ಟಕ್ಕೆ ಏರಿಸಬೇಕು ಎನ್ನುವ ಆಲೋಚನೆಯಿಟ್ಟುಕೊಂಡು ಸಲಹೆಗಳನ್ನು ನೀಡಬೇಕು. ಎಲ್ಲರೂ ಒಟ್ಟಾಗಿ ಸೇರಿ ಬೆಂಗಳೂರನ್ನು ಸದೃಢಗೊಳಿಸೋಣ” ಎಂದು ಹೇಳಿದರು.