ಮುಂಬೈನಿಂದ ಬಾರಾಮತಿಗೆ ಹೊರಟಿದ್ದ ವಿಮಾನ ಇಂದು ಬೆಳಗ್ಗೆ ಪತನಗೊಂಡು ಎನ್‌ಸಿಪಿ ಮುಖ್ಯಸ್ಥ ಮತ್ತು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮೃತಪಟ್ಟಿದ್ದಾರೆ. ಪೈಲಟ್‌ಗಳು ಮತ್ತು ಪವಾರ್ ಅವರ ಭದ್ರತಾ ಸಿಬ್ಬಂದಿ ಸೇರಿದಂತೆ ಇತರ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ.
ಅಜಿತ್ ಪವಾರ್ ಬಳಸುತ್ತಿದ್ದ ವಿಮಾನವು ಬಾರಾಮತಿ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಪ್ರಯತ್ನಕ್ಕೆ ಮುಂದಾಗಿದ್ದಾಗ ಪತನಗೊಂಡಿದೆ. ಅವರು ನಾಲ್ಕು ಪ್ರಮುಖ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಲು ಬಾರಾಮತಿಗೆ ಹೊರಟಿದ್ದರು. ವಿಮಾನವು ಧಗಧಗನೆ ಹೊತ್ತಿ ಉರಿದಿದ್ದು ಸುಟ್ಟು ಕರಕಲಾಗಿದೆ..ತುರ್ತು ಲ್ಯಾಂಡಿಂಗ್ ಪ್ರಯತ್ನಕ್ಕೆ ಕಾರಣವೇನು ಎಂಬುದರ ಬಗ್ಗೆ ಇನ್ನಷ್ಟೇ ಮಾಹಿತಿ ತಿಳಿದು ಬರಬೇಕಿದೆ. ವಿಮಾನವು ತಾಂತ್ರಿಕ ದೋಷದಿಂದ ಅಥವಾ ಇಳಿಯುವಾಗ ಉಂಟಾದ ಅಡಚಣೆಯಿಂದ ಪತನಗೊಂಡಿರಬಹುದು ಎಂದು ಶಂಕಿಸಲಾಗಿದೆ. ವಿಮಾನವು ರನ್‌ವೇ ಮೇಲೆ ಅಪ್ಪಳಿಸಿದ ತಕ್ಷಣ ಬೆಂಕಿ ಹೊತ್ತಿಕೊಂಡಿದೆ.
ಮಹಾರಾಷ್ಟ್ರದ ರಾಜಕೀಯ ವಲಯದಲ್ಲಿ ಅಜಿತ್ ಪವಾರ್ ಸಾವು ದಿಗ್ಭ್ರಮೆ ಹುಟ್ಟಿಸಿದೆ. ಅವರು ಮಹಾರಾಷ್ಟ್ರದ ಪ್ರಭಾವಿ ನಾಯಕರಲ್ಲಿ ಒಬ್ಬರಾಗಿ ಸುದೀರ್ಘ ಕಾಲ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದವರು. ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ತೀವ್ರ ಆಘಾತ ವ್ಯಕ್ತಪಡಿಸಿದ್ದು, ಹಿರಿಯ ಅಧಿಕಾರಿಗಳಿಂದ ನಿರಂತರ ಮಾಹಿತಿ ಪಡೆಯುತ್ತಿದ್ದಾರೆ. ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ.


