ಬಾಯ್‌ಫ್ರೆಂಡ್‌ಗೆ ಕಳಿಸಿದ ಖಾಸಗಿ ಫೋಟೋಗಳು ವೈರಲ್ ಆಗಿದ್ದು, ಇದನ್ನು ಮುಂದಿಟ್ಟು ಹಣ ನೀಡುವಂತೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಯುವತಿ ಕೇಂದ್ರ ವಿಭಾಗ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಕಾಲೇಜಿನ 19 ವರ್ಷದ ವಿದ್ಯಾರ್ಥಿನಿ ಬಾಯ್‌ಫ್ರೆಂಡ್‌ಗೆ ಕಳಿಸಿರುವ ಪೋಟೊಗಳನ್ನಿಟ್ಟುಕೊಂಡು ಅಪರಿಚಿತ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ಹಣ ಕೊಡದಿದ್ದರೆ ಪೋಟೊಗಳನ್ನು ಸಾರ್ವಜನಿಕವಾಗಿ ಇನ್ನಷ್ಟು ವೈರಲ್ ಮಾಡುವುದಾಗಿ ಹೆದರಿಸಿದ್ದಾನೆ. ಭಯಗೊಂಡ ವಿದ್ಯಾರ್ಥಿನಿ ಒಂದು ಲಕ್ಷ ರೂ. ನೀಡಿದ್ದಾರೆ.
ಈ ವಿಚಾರವನ್ನು ಯುವತಿ ತನ್ನ ಸ್ನೇಹಿತನೊಂದಿಗೆ ಚರ್ಚಿಸಿದ್ದು, ಬ್ಲ್ಯಾಕ್‌ಮೇಲರ್ ಒತ್ತಡಕ್ಕೆ ಒಳಗಾಗಿ ಸ್ನೇಹಿತನ ಮೂಲಕ 1 ಲಕ್ಷ ರೂಪಾಯಿ ಪಾವತಿಸಿದ್ದಳು. ಅಪರಿಚಿತ ಸಂಖ್ಯೆಯಿಂದ ಹೆಚ್ಚಿನ ಹಣಕ್ಕೆ ಬೇಡಿಕೆ ಬರುತ್ತಲೇ ಇತ್ತು. ಫೋಟೋಗಳು ಬ್ಲ್ಯಾಕ್‌ಮೇಲರ್‌ಗೆ ಹೇಗೆ ಸಿಕ್ಕಿವೆ ಎಂಬ ಅನುಮಾನ ಉಂಟಾಗಿತ್ತು. ಮೊದಲಿಗೆ ಪ್ರಿಯಕರನೇ ಈ ಕೆಲಸ ಮಾಡಿರಬಹುದೆಂಬ ಅನುಮಾನ ಯುವತಿಗಿತ್ತು. ಈ ಕೃತ್ಯದಲ್ಲಿ ಬಾಯ್‌ಫ್ರೆಂಡ್ ಪಾತ್ರ ಇಲ್ಲ ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಕೇಂದ್ರ ವಿಭಾಗ ಸೈಬರ್ ಕ್ರೈಂ ಪೊಲೀಸರು ತಾಂತ್ರಿಕ ಸಾಕ್ಷ್ಯಾಧಾರಗಳ ಆಧಾರದಲ್ಲಿ ತನಿಖೆ ಮುಂದುವರಿಸಿದ್ದಾರೆ.


