ಮುಖ್ಯ ಮಾಹಿತಿ ಆಯುಕ್ತ ಸೇರಿದಂತೆ ಎಂಟು ಮಂದಿ ಆಯುಕ್ತರನ್ನು ಕರ್ನಾಟಕ ಮಾಹಿತಿ ಆಯೋಗಕ್ಕೆ ನೇಮಕ ಮಾಡಿ ಸರಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ. ಸುಪ್ರೀಂಕೋರ್ಟ್ ಆದೇಶ ಪಾಲಿಸದೆ ಈ ನೇಮಕ ನಡೆದಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಜೆ.ಪಿ.ನಗರದ ಕೆ.ಮಲ್ಲಿಕಾರ್ಜುನರಾಜು ಅರ್ಜಿ ಸಲ್ಲಿಸಿದ್ದು, ರಾಜ್ಯ ಮಾಹಿತಿ ಆಯೋಗದ ಮುಖ್ಯ ಆಯುಕ್ತರು ಹಾಗೂ ಮಾಹಿತಿ ಆಯುಕ್ತರ ನೇಮಕ ಪ್ರಕ್ರಿಯೆಯಲ್ಲಿ ಸಲ್ಲಿಕೆಯಾಗುವ ಅರ್ಜಿಗಳ ಪರಿಶೀಲನೆಗೆ ಶೋಧನಾ ಸಮಿತಿ ರಚನೆ ಮಾಡಬೇಕು. ಆಯ್ಕೆಯಾದವರ ಪಟ್ಟಿಯನ್ನು ಆಯ್ಕೆ ಸಮಿತಿಯ ಮುಂದೆ ಮಂಡಿಸ ಬೇಕೆಂದು ಅಂಜಲಿ ಭಾರಾಧ್ವಾಜ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದೆ. ಆದರೆ ರಾಜ್ಯ ಸರಕಾರ ಶೋಧನಾ ಸಮಿತಿ ರಚನೆ ಮಾಡದೆಯೇ 2024ರ ಜೂ.11ರಂದು ಅರ್ಜಿ ಆಹ್ವಾನಿಸಿದೆ. ಸಲ್ಲಿಕೆಯಾಗಿದ್ದ 184 ಅರ್ಜಿಗಳನ್ನು ಪರಿಶೀಲನೆ ನಡೆಸದೆ ಏಳು ಮಂದಿಯನ್ನು ನೇಮಕ ಮಾಡಿ 2025ರ ಜ.30ರಂದು ಆದೇಶ ಹೊರಡಿಸಿದೆ. ಇದು ಸುಪ್ರೀಂಕೋರ್ಟ್ ಆದೇಶದ ಉಲ್ಲಂಘನೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ರಾಜ್ಯ ಮುಖ್ಯ ಮಾಹಿತಿ ಆಯುಕ್ತರ ಹುದ್ದೆಗೆ ಆಯ್ಕೆಯಾಗಿರುವ ಎ.ಎಂ.ಪ್ರಸಾದ್ ಅರ್ಜಿಯನ್ನು ಸಲ್ಲಿಸಿಯೇ ಇಲ್ಲ. ರಾಜ್ಯ ಮಾಹಿತಿ ಆಯುಕ್ತರ ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸಿದ್ದಾರೆ. ವಿವರಣೆ ಇಲ್ಲದೆ ಅವರನ್ನು ಮುಖ್ಯ ಮಾಹಿತಿ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ ಎಂದು ದೂರಲಾಗಿದೆ.
ಇಂದು (ಫೆ.4) ಮುಖ್ಯ ಮಾಹಿತಿ ಆಯುಕ್ತರು ಹಾಗೂ ಮಾಹಿತಿ ಆಯುಕ್ತರಾಗಿ ನೇಮಕಗೊಂಡ 7 ಮಂದಿ ರಾಜಭವನದಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ. ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಲಿದ್ದಾರೆ. ಎಚ್.ಎಂ.ವೆಂಕಟೇಶ್ ನೇತೃತ್ವದಲ್ಲಿ ನೈಜ ಹೋರಾಟಗಾರರ ವೇದಿಕೆಯ ಸದಸ್ಯರು ಸೋಮವಾರ ರಾಜ್ಯಪಾಲರನ್ನು ಭೇಟಿ ಮಾಡಿ ಮಾಹಿತಿ ಆಯುಕ್ತರ ನೇಮಕದಲ್ಲಿ ಸುಪ್ರೀಂಕೋರ್ಟ್ ಆದೇಶ ಉಲ್ಲಂಘನೆಯಾಗಿದೆ ಎಂದು ಮನವಿ ಪತ್ರ ಸಲ್ಲಿಸಿದ್ದಾರೆ.