ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಕುರಿತು ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಹೈಕೋರ್ಟ್‌ಗೆ ಸಲ್ಲಿಸುವಂತೆ ಅರ್ಜಿದಾರರಿಗೆ ನಿರ್ದೇಶನ ನೀಡಿದೆ.
ಜಿಬಿಎ ರಚನೆ ಕಾನೂನುಬಾಹಿರ ಎಂದು ಆರೋಪಿಸಿ ಪ್ರಕಾಶ ಬೆಳವಾಡಿ ಹಾಗೂ ಇತರರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಹಾಗೂ ಜಾಯ್‌ಮಲ್ಯ ಬಾಗ್ಚಿ ಪೀಠವು, ಜಿಬಿಎ ರಚನೆ ಕುರಿತು ಎತ್ತಿರುವ ಪ್ರಶ್ನೆ ಸೂಕ್ತವಾಗಿದೆ. ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸದೆ ನೇರವಾಗಿ ಸುಪ್ರೀಂ ಕೋರ್ಟ್‌ಗೆ ಬಂದಿದ್ದು ಏಕೆ ಎಂದು ಪ್ರಶ್ನಿಸಿದೆ.
ಅರ್ಜಿದಾರರ ಪರ ವಕೀಲರು, ಜಿಬಿಎ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿಯೊಂದು ಸಲ್ಲಿಕೆಯಾಗಿದೆ. ಹೀಗಾ, ಸುಪ್ರೀಂ ಕೋರ್ಟ್‌ಗೆ ಬಂದಿದ್ದೇವೆ ಎಂದರು. ಜಿಬಿಎ ರಚನೆ ಸಂವಿಧಾನ ವಿರೋಧಿ. ಜಿಬಿಎ ರಚನೆಯಿಂದ ಅಧಿಕಾರ ವಿಕೇಂದ್ರೀಕರಣ ಆಗುವುದಿಲ್ಲ. ಅಧಿಕಾರದ ಮರು ಕೇಂದ್ರೀಕರಣ ಆಗುತ್ತದೆ ಎಂದು ದೂರಿದ್ದಾರೆ. ಬಳಿಕ ಅರ್ಜಿದಾರರು ತನ್ನ ಅರ್ಜಿಯನ್ನು ವಾಪಸ್ ಪಡೆದುಕೊಂಡರು.
ಜಿಬಿಎ ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿತ್ತು. ಈ ಕಾಯಿದೆಯು ಸಂವಿಧಾನದ 74ನೇ ತಿದ್ದುಪಡಿಗೆ ವಿರುದ್ಧವಾಗಿದೆ ಎಂದು ಅರ್ಜಿದಾರರು ವಾದಿಸಿದ್ದು, ಪಾಲಿಕೆಯ ಆಡಳಿತವನ್ನು ಸರ್ಕಾರವು ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿದೆ ಎಂದು ದೂರಿದ್ದರು. ನ್ಯಾಯಾಲಯವು ಸರ್ಕಾರಕ್ಕೆ ನಾಲ್ಕು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿತ್ತು.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಜಾರಿ ಮುಂದೂಡಲಾಗಿದೆ. ಈ ವರ್ಷ ಬಿಜಿಎ ಸ್ಥಾಪನೆ ಇಲ್ಲ. ಐದು ಪಾಲಿಕೆಗಳಿಗೆ ಜನವರಿ ವೇಳೆಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ. ಅಲ್ಲಿಯವರೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಡಳಿತವೇ ಮುಂದುವರಿಯಲಿದೆ ಎಂದು ಸರ್ಕಾರ ಹೈಕೋರ್ಟ್‌ಗೆ ಈ ಹಿಂದೆ ತಿಳಿಸಿತ್ತು.