ಪತ್ನಿಗೆ ತಿಳಿಯದಂತೆ ಆಕೆ ಜತೆಗಿನ ಲೈಂಗಿಕ ಕ್ರಿಯೆಯ ವೀಡಿಯೊ ಮಾಡಿ ಸ್ನೇಹಿತರಿಗೆ ಕಳುಹಿಸುತ್ತಿದ್ದ ವಿಕೃತ ವ್ಯಕ್ತಿಯೊಬ್ಬನ ವಿರುದ್ಧ ಆತನ ಪತ್ನಿಯೇ ಬೆಂಗಳೂರಿನ ಪುಟ್ಟೇನಹಳ್ಳಿ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
ಸೈಯದ್ ಇನಾಮುಲ್ ಎಂಬಾತನೊಂದಿಗೆ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಸಂತ್ರಸ್ತೆಯ ಮದುವೆಯಾಗಿದೆ. ಆತ ಮನೆಯ ಬೆಡ್ ರೂಂನಲ್ಲಿ ರಹಸ್ಯ ಕ್ಯಾಮರಾ ಅಳವಡಿಸಿ ಸೆಕ್ಸ್ ಮಾಡುತ್ತಿರುವುದನ್ನು ರೆಕಾರ್ಡ್ ಮಾಡಿ ಆ ಖಾಸಗಿ ವೀಡಿಯೊವನ್ನು ದುಬೈನಲ್ಲಿರುವ ಸ್ನೇಹಿತರಿಗೆ ಕಳುಹಿಸುತ್ತಿದ್ದ ಎಂಬುದಾಗಿ ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.
ಆರೋಪಿಯು ಈಕೆಯನ್ನು ಮದುವೆಯಾಗುವ ಮೊದಲೇ ಬೇರೆ ಮದುವೆಯಾಗಿದ್ದ. ಆ ವಿಚಾರವನ್ನು ತಿಳಿಸದೆ ತನ್ನನ್ನು ಎರಡನೇ ಮದುವೆ ಮಾಡಿಕೊಂಡಿದ್ದಾನೆಂದು ಸಂತ್ರಸ್ತೆ ಆರೋಪಿಸಿದ್ದಾರೆ. ಸಯ್ಯದ್ ದಿನನಿತ್ಯ ಹೆಂಡತಿಗೆ ಕಿರುಕುಳ ನೀಡುತ್ತಿದ್ದು, ತಾನು 19 ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದ. ಹೊರದೇಶದಲ್ಲಿರುವ ತನ್ನ ಕೆಲವು ಸ್ನೇಹಿತರೊಂದಿಗೂ ದೈಹಿಕ ಸಂಬಂಧ ಬೆಳೆಸುವಂತೆ ಒತ್ತಾಯಿಸುತ್ತಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ತನ್ನ ವಿವಾಹದ ಸಮಯದಲ್ಲಿ ವರದಕ್ಷಿಣೆಯಾಗಿ ಯಮಹಾ ಏರೋಕ್ ದ್ವಿ ಚಕ್ರ ವಾಹನ, 340 ಗ್ರಾಂ ಚಿನ್ನದ ಆಭರಣಗಳನ್ನು ಮನೆಯವರು ನೀಡಿದ್ದಾರೆ. ಮದುವೆ ಸಮಯದಲ್ಲಿ ಆರೋಪಿಯ ತಂಗಿಯ ಗಂಡ ಅಮೀನ್ ಬೇಗ್ (ಆರೋಪಿ-2) ಎಂಬಾತ ಕ್ಯಾಟರಿಂಗ್ ವಿಳಂಬ ವಿಚಾರದಲ್ಲಿ ಜಗಳ ಮಾಡಿ ನಮ್ಮ ಕುಟುಂಬಕ್ಕೆ ಅವಮಾನ ಮಾಡಿರುತ್ತಾನೆ. ತನ್ನ ತಂದೆ-ತಾಯಿಯನ್ನು ಭೇಟಿ ಮಾಡದಂತೆ ನೋಡಿಕೊಂಡಿದ್ದ ಆರೋಪಿ, ಒಂದು ವೇಳೆ ಭೇಟಿಯಾಗಿ ದೂರಿತ್ತರೆ ವಿಚ್ಛೇದನ ನೀಡುವುದಾಗಿ ಬೆದರಿಕೆ ಹಾಕಿದ್ದ ಎಂದು ದೂರಿನಲ್ಲಿ ಸಂತ್ರಸ್ತೆ ವಿವರಿಸಿದ್ದಾರೆ. ಪುಟ್ಟೇನಹಳ್ಳಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಆರೋಪಿಯ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.