ಸಂಘಟಿತ ಅಪರಾಧ (ಬಿಎನ್ಎಸ್ ಸೆಕ್ಷನ್ 111) ಅಡಿ ಪ್ರಕರಣ ದಾಖಲಿಸಲು ತನಿಖಾಧಿಕಾರಿಗಳಿಗೆ ಅನುಮತಿ ನೀಡುವಾಗ ವಿಚಾರಣಾ ನ್ಯಾಯಾಲಯಗಳು ಅತ್ಯಂತ ಎಚ್ಚರಿಕೆ ವಹಿಸಬೇಕು ಎಂದು ಸೋಮವಾರ ಹೈಕೋರ್ಟ್ ತಿಳಿಸಿದೆ.
ಮತ್ತೊಬ್ಬ ವ್ಯಕ್ತಿಯ ಎಟಿಎಂ ಕದ್ದು ಬಳಕೆ ಮಾಡಿ 1 ಲಕ್ಷ ರೂ. ಹಣ ಪಡೆದ ಆರೋಪದಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಜಾಮೀನು ಕೋರಿ ಹಾಗೂ ಸಂಘಟಿತ ಅಪರಾಧ ಪ್ರಕರಣ ದಾಖಲಿಸಲು ಅನುಮತಿ ನೀಡಿದ್ದ ವಿಚಾರಣಾ ನ್ಯಾಯಾ ಲಯದ ಅನುಮತಿ ರದ್ದು ಕೋರಿ ಅವಿನಾಶ ಎಂಬವರು ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯ ಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಅಲ್ಲದೆ, ಪ್ರಕರಣ ಕುರಿತ ದಾಖಲೆಗಳನ್ನು ಪರಿಶೀಲಿಸಿದ ಪೀಠ, ಪ್ರಕರಣದಲ್ಲಿ ಈವರೆಗೂ ಆರೋಪ ಪಟ್ಟಿ ಸಲ್ಲಿಕೆ ಯಾಗಿಲ್ಲ. ಆರೋಪ ಪಟ್ಟಿ ಸಲ್ಲಿಕೆಯಾಗದ ಹೊರತು, ಬಿಎನ್ಎಸ್ ಸೆಕ್ಷನ್ 111(3) ಮತ್ತು 111(4)ರ ಅಡಿಯಲ್ಲಿ ಸಂಘಟಿತ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸುವುದಕ್ಕೆ ಅವಕಾಶವೇ ಇಲ್ಲ. ಈ ರೀತಿಯ ಅರ್ಜಿಗಳು ಸಲ್ಲಿಕೆಯಾಗುವ ಸಂದರ್ಭಗಳಲ್ಲಿ ವಿಚಾರಣಾ ನ್ಯಾಯಾಲಯಗಳು ಸೂಕ್ತ ರೀತಿಯಲ್ಲಿ ಪರಿಶೀಲಿಸಿ, ವಿವೇಚನೆ ಬಳಸಿ ಕ್ರಮಕ್ಕೆ ಮುಂದಾಗಬೇಕು ಎಂದು ತಿಳಿಸಿತು.
ಜೊತೆಗೆ ತನಿಖಾಧಿಕಾರಿಗಳು ಸೂಕ್ತ ದಾಖಲೆಗಳೊಂದಿಗೆ ಆರೋಪ ಪಟ್ಟಿಯನ್ನು ಸಲ್ಲಿಸಿದ ಬಳಿಕ ಬಿಎನ್ಎಸ್ ಅಡಿ ಯಲ್ಲಿ ಸಂಘಟಿತ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಿಸುವುದಕ್ಕೆ ಅನುಮತಿ ಕೋರಬಹುದಾಗಿದೆ. ಈ ಎಲ್ಲ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಅವುಗಳನ್ನು ಪರಿಶೀಲಿಸಿ, ವಿಚಾರಣಾ ನ್ಯಾಯಾಲಯ ಅನುಮತಿ ನೀಡಬಹು ದಾಗಿದೆ ಎಂದು ನ್ಯಾಯಪೀಠ ಹೇಳಿತು.
ಪ್ರಕರಣದ ಹಿನ್ನೆಲೆ: ಹಜರತ್ ಆಲಿ ಮಲ್ಹಿಕಟ್ಟಿ ಎಂಬವರ ಎಟಿಎಂ ಕಾರ್ಡ್ ಬಳಸಿ ಖಾತೆಯಿಂದ ಒಂದು ಲಕ್ಷ ರೂ. ಗಳನ್ನು ಪಡೆದುಕೊಂಡ ಆರೋಪದ ಮೇಲೆ ಗೋವಾ ಮೂಲದ ಅವಿನಾಶ್ ಎಂಬುವರ ವಿರುದ್ಧ 2025 ಜನವರಿ 6ರಂದು ಬೆಂಗಳೂರಿನ ಸಿಇಎನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದರು. ಪ್ರಕರಣ ದಲ್ಲಿ ಜಾಮೀನು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ರದ್ದು ಮಾಡಿತ್ತು. ಇದನ್ನು ಪ್ರಶ್ನಿಸಿ ಅವಿನಾಶ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ”ಪ್ರಕರಣದಲ್ಲಿ ಅರ್ಜಿದಾರ ಅವಿನಾಶ್ ಅವರನ್ನು ಹೊರತುಪಡಿಸಿ ಇತರರನ್ನು ಬಂಧಿಸಿಲ್ಲ. ಅಲ್ಲದೆ, ಅರ್ಜಿದಾರರ ವಿರುದ್ಧ ಸಂಘಟಿತ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಲು ಪೊಲೀಸ್ ಅಧಿಕಾರಿಗಳು ಸಲ್ಲಿಸಿರುವ ಅರ್ಜಿಗೆ ವಿಚಾರಣಾ ನ್ಯಾಯಾಲಯ ಅನುಮತಿ ನೀಡಿದೆ.
ಪ್ರಕರಣ ದಾಖಲಾಗಿ 60 ದಿನ ಪೂರ್ಣಗೊಂಡರೂ ತನಿಖಾಧಿಕಾರಿಗಳು ಆರೋಪ ಪಟ್ಟಿ ಸಲ್ಲಿಸಿಲ್ಲ. ಆದ್ದರಿಂದ ಡೀಫಾಲ್ಟ್ ಜಾಮೀನಿಗೆ ಅರ್ಜಿದಾರರು ಅರ್ಹರಾಗಿದ್ದಾರೆ. ಹೀಗಾಗಿ, ಜಾಮೀನು ಮಂಜೂರು ಮಾಡಬೇಕು ಎಂದು ಪೀಠಕ್ಕೆ ಮನವಿ ಮಾಡಿದರು.