ಬೆಂಗಳೂರು: ವಿಜಯ ಹಜಾರೆ ಏಕದಿನ ಟೂರ್ನಿಯ ಭಾಗವಾಗಿ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಳೆ ನಿಗದಿಯಾಗಿದ್ದ ದೆಹಲಿ ಹಾಗೂ ಆಂಧ್ರ ಪ್ರದೇಶ ನಡುವಿನ ಪಂದ್ಯಕ್ಕೆ ಅನುಮತಿ ನೀಡಲಾಗಿಲ್ಲ. ಇದರಿಂದ ಪಂದ್ಯವನ್ನು ಸ್ಥಳಾಂತರಿಸಲಾಗಿದೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದು, ಬೆಂಗಳೂರಿನಲ್ಲಿ ಬುಧವಾರ ನಡೆಯಲಿರುವ ವಿಜಯ್ ಹಜಾರೆ ಟ್ರೋಫಿ ಪಂದ್ಯವನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಲು ಅನುಮತಿ ನೀಡಲಾಗಿಲ್ಲ ಎಂದರು.
ಭಾರತ ತಂಡದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರಿಷಭ್ ಪಂತ್ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಲಿದ್ದು, ಬೆಂಗಳೂರಿನಲ್ಲಿ ನಡೆಯಲಿರುವ ಪಂದ್ಯ ತೀವ್ರ ಕುತೂಹಲ ಮೂಡಿಸಿತ್ತು.
|ಮೈದಾನಕ್ಕೆ ಪ್ರೇಕ್ಷಕರಿಗೆ ಪ್ರವೇಶ ನೀಡದೆ ಪಂದ್ಯ ಆಯೋಜಿಸಲು ಅನುಮತಿ ನೀಡುವಂತೆ ಸರ್ಕಾರ ಹಾಗೂ ಬೆಂಗಳೂರು ಪೊಲೀಸರಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮನವಿ ಸಲ್ಲಿಸಿತ್ತು. ಆದರೆ ನಾಳಿನ ಪಂದ್ಯಕ್ಕೆ ಅನುಮತಿ ನಿರಾಕರಿಸಲಾಗಿದೆ.
ಸೋಮವಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರ, ಪೊಲೀಸ್ ಇಲಾಖೆ ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳ ನಿಯೋಗ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಕ್ರೀಡಾಂಗಣದಲ್ಲಿ ಕೆಲವು ಮಾರ್ಪಾಡುಗಳ ಅಗತ್ಯವಿದೆ. ಹಾಗೂ ದೆಹಲಿ ತಂಡದ ಪರ ವಿರಾಟ್ ಕೊಹ್ಲಿ ಕಣಕ್ಕಿಳಿಯುತ್ತಿರುವುದರಿಂದ ಮೈದಾನಕ್ಕೆ ಪ್ರವೇಶ ನಿರಾಕರಿಸಿದರೂ ಸಹ ಅಭಿಮಾನಿಗಳು ಕ್ರೀಡಾಂಗಣದ ಬಳಿ ಜಮಾಯಿಸುವ ಸಾಧ್ಯತೆ ಇರುವುದರಿಂದ ಪಂದ್ಯ ಆಯೋಜಿಸುವುದು ಸೂಕ್ತವಲ್ಲ ಎಂದು ನಿಯೋಗ ಅಬಿಪ್ರಾಯಪಟ್ಟಿದೆ ಎಂದು ಪೊಲೀಸ್ ಇಲಾಖೆಯಿಂದ ಮಾಹಿತಿ ಲಭ್ಯವಾಗಿದೆ.
ಬದಲಿ ಕ್ರೀಡಾಂಗಣ ಬಗ್ಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಇದುವರೆಗೂ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜನೆ ಸಾಧ್ಯವಾಗದಿದ್ದರೆ ಬದಲಿ ಆಯ್ಕೆಗಳು ಸಹ ಇಲ್ಲ. ಆಲೂರಿನಲ್ಲಿರುವ ಕೆಎಸ್ಸಿಎ ಮೈದಾನಗಳಲ್ಲಿ ನಾಳೆ ಮೂರು ಪಂದ್ಯಗಳು ನಿಗದಿಯಾಗಿವೆ. ಒಂದು ಮೈದಾನದಲ್ಲಿ ಒರಿಸ್ಸಾ ಮತ್ತು ಸೌರಾಷ್ಟ್ರ ಮುಖಾಮುಖಿಯಾದರೆ, ಗ್ರೌಂಡ್ ಎರಡಲ್ಲಿ ಗುಜರಾತ್ ಮತ್ತು ಸರ್ವೀಸಸ್ ತಂಡಗಳು ಕಣಕ್ಕಿಳಿಯಲಿವೆ. ಇನ್ನು ಮೂರನೇ ಗ್ರೌಂಡ್ನಲ್ಲಿ ಹರ್ಯಾಣ ಮತ್ತು ರೈಲ್ವೇಸ್ ಮುಖಾಮುಖಿಯಾಗುತ್ತಿವೆ.
ಕೊಹ್ಲಿ ಕಣಕ್ಕೆ: ಈ ಆವೃತ್ತಿಯ ವಿಜಯ್ ಹಜಾರೆ ಏಕದಿನ ಟೂರ್ನಿ ನಾಳೆಯಿಂದ (ಡಿಸೆಂಬರ್ 24) ಆರಂಭವಾಗಲಿದೆ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಮುನ್ನ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೆ.ಎಲ್.ರಾಹುಲ್ ದೇಶೀಯ ಕ್ರಿಕೆಟ್‌ನಲ್ಲಿ ಕಣಕ್ಕಿಳಿಯಲಿದ್ದಾರೆ. 15 ವರ್ಷಗಳ ಬಳಿಕ ವಿಜಯ್ ಹಜಾರೆ ಟೂರ್ನಿಯಲ್ಲಿ ಕೊಹ್ಲಿ ಆಡಲು ಸಜ್ಜಾಗಿದ್ದಾರೆ. ಕೊನೆಯ ಬಾರಿಗೆ 2010ರಲ್ಲಿ ವಿಜಯ್ ಹಜಾರೆ ಟೂರ್ನಿಯಲ್ಲಿ ಕಣಕ್ಕಿಳಿದಿದ್ದ ವಿರಾಟ್, ದೆಹಲಿ ಪರ ಐದು ಪಂದ್ಯಗಳಲ್ಲಿ ಎರಡು ಅರ್ಧಶತಕಗಳ ಸಹಿತ 229ರನ್ ಗಳಿಸಿದ್ದರು. ಇದೀಗ 15 ವರ್ಷಗಳ ಬಳಿಕ ಮತ್ತೊಮ್ಮೆ ದೆಹಲಿ ಪರ ಬ್ಯಾಟ್ ಬೀಸಲು ಸಜ್ಜಾಗಿದ್ದಾರೆ.
ಟೂರ್ನಿಯ ಲೀಗ್ ಪಂದ್ಯಗಳು ಡಿಸೆಂಬರ್ 24 ರಿಂದ ಜನವರಿ 8 ರವರೆಗೆ, ಕ್ವಾರ್ಟರ್ ಫೈನಲ್ಸ್ ಜನವರಿ 12 ರಂದು ಮತ್ತು ಸೆಮಿಫೈನಲ್ ಜನವರಿ 15 ರಂದು ನಡೆಯಲಿದೆ. ಅದರ ನಂತರ, ಫೈನಲ್ ಪಂದ್ಯವು ಜನವರಿ 18 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಈ ಸರಣಿಯಲ್ಲಿ, ಮಧ್ಯಪ್ರದೇಶ, ಮುಂಬೈ, ದೆಹಲಿ, ಕೋಲ್ಕತ್ತಾ, ಕರ್ನಾಟಕ ಮತ್ತು ಕೇರಳ ಸೇರಿದಂತೆ 32 ತಂಡಗಳು ಭಾಗವಹಿಸುತ್ತಿದ್ದು ಇವುಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ.
ದೆಹಲಿ ತಂಡಕ್ಕೆ ರಿಷಭ್ ಪಂತ್ ಅವರನ್ನು ನಾಯಕನಾಗಿ ನೇಮಕ ಮಾಡಲಾಗಿದ್ದು, ಆಯುಷ್ ಬಡೋನಿ ಅವರನ್ನು ಉಪನಾಯಕರನ್ನಾಗಿ ಹೆಸರಿಸಲಾಗಿದೆ. ಉಳಿದಂತೆ ವಿರಾಟ್ ಕೊಹ್ಲಿ, ಇಶಾಂತ್ ಶರ್ಮಾ, ನವದೀಪ್ ಸೈನಿ, ಹರ್ಷಿತ್ ರಾಣಾ, ನಿತೀಶ್ ರಾಣಾ, ಅನುಜ್ ರಾವತ್, ಪ್ರಿನ್ಸ್ ಯಾದವ್ ಮತ್ತು ಪ್ರಿಯಾಂಶ್ ಆರ್ಯ ಅವರಂತಹ ಸ್ಟಾರ್ ಆಟಗಾರರು ಸಹ ದೆಹಲಿ ತಂಡದಲ್ಲಿದ್ದಾರೆ.
ಕೊಹ್ಲಿ ಲಿಸ್ಟ್ ಎ ದಾಖಲೆ: ಕೊಹ್ಲಿ ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಒಟ್ಟು 341 ಲಿಸ್ಟ್ A ಪಂದ್ಯಗಳನ್ನು ಆಡಿದ್ದಾರೆ. 57.11ರ ಸರಾಸರಿಯಲ್ಲಿ 15,934 ರನ್ಗಳನ್ನು ಸಿಡಿಸಿದ್ದಾರೆ. ಇದರಲ್ಲಿ 57 ಶತಕ, 83 ಅರ್ಧಶತಕ ಸೇರಿವೆ. ಲಿಸ್ಟ್ Aನಲ್ಲಿ ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್ ರನ್ಗಳನ್ನು ಸಹ ಪರಿಗಣಿಸಲಾಗುತ್ತದೆ.


