Menu

ಪೆನ್ನಾರ್ ನದಿ ನೀರು ವಿವಾದ: ನ್ಯಾಯಮಂಡಳಿ ರಚನೆಗೆ ಸುಪ್ರೀಂ ಆದೇಶ

supreme court

ಕರ್ನಾಟಕ ಹಾಗೂ ತಮಿಳುನಾಡು ನಡುವೆ ಪೆನ್ನಾರ್ ನದಿ ನೀರು ಹಂಚಿಕೆ ವಿವಾದ ಬಗೆಹರಿಸಲು ನ್ಯಾಯಮಂಡಳಿ ರಚಿಸುವಂತೆ ಸುಪ್ರೀಂ ಕೋರ್ಟ್ ಆದೇಶ ಪ್ರಕಟಿಸಿದೆ.

ತಮಿಳುನಾಡು ಸರ್ಕಾರ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಕ್ರಮ್‌ನಾಥ್ ಹಾಗೂ ಎನ್.ವಿ.ಅಂಜಾರಿಯಾ ಅವರನ್ನೊಳಗೊಂಡ ಸುಪ್ರೀಂಕೋರ್ಟ್‌ನ ಪೀಠವು ವಿವಾದ ಇತ್ಯರ್ಥಪಡಿಸಲು ನ್ಯಾಯಮಂಡಳಿ ರಚಿಸುವುದು ಸೂಕ್ತ. ಆದೇಶ ಪ್ರಕಟವಾದ ಒಂದು ತಿಂಗಳೊಳಗೆ ಜಲ ವಿವಾದ ನ್ಯಾಯಮಂಡಳಿಯನ್ನು ರಚಿಸಬೇಕು ಎಂದು ಕೇಂದ್ರಕ್ಕೆ ನಿರ್ದೇಶನ ನೀಡಿದರು.

ಈ ಹಿಂದೆ ಅರ್ಜಿ ವಿಚಾರಣೆ ನಡೆದಾಗ ಪೀಠವು, ಉಭಯ ರಾಜ್ಯಗಳು ತಮ್ಮ ವಾದಗಳನ್ನು ನ್ಯಾಯಮಂಡಳಿಯಲ್ಲಿ ಮಂಡಿಸುವುದು ಉತ್ತಮ ಎಂದು ಅಭಿಪ್ರಾಯಪಟ್ಟಿತ್ತು.

ಪೆನ್ನಾರ್‌ ನದಿಯ ಕಣಿವೆಯಲ್ಲಿ ಕರ್ನಾಟಕ ಸರ್ಕಾರವು ಮಾರ್ಕಂಡೇಯ ನದಿಗೆ ಅಡ್ಡಲಾಗಿ ಅಣೆಕಟ್ಟೆ ನಿರ್ಮಿಸಿದೆ. ಬೆಂಗಳೂರಿನ ಎಲೆ ಮಲ್ಲಪ್ಪಚೆಟ್ಟಿ ಕೆರೆಯಿಂದ ಹೊಸಕೋಟೆಯವರೆಗೆ ನೀರು ಹರಿಸುವ ಕಾಮಗಾರಿ, ಬ್ಯಾಲಹಳ್ಳಿ ಗ್ರಾಮದ ಹತ್ತಿರ ಪೆನ್ನಾರ್ ನದಿಯಿಂದ ನೀರು ಹರಿಸುವ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ.

ಬಳಿಕ ತಮಿಳುನಾಡು ಸರ್ಕಾರ 2018ರಲ್ಲಿ ಕರ್ನಾಟಕ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಿತ್ತು. ನದಿಯ ಮೇಲ್ದಂಡೆ ಭಾಗದಲ್ಲಿ ಕರ್ನಾಟಕ ಸರ್ಕಾರ ಕೈಗೊಂಡ ನಿರ್ಧಾರಗಳಿಂದಾಗಿ ಕೆಳದಂಡೆ ಭಾಗದಲ್ಲಿರುವ ತಮಿಳುನಾಡಿಗೆ ಹರಿಯುವ ನೀರಿನ ಪ್ರಮಾಣದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದುವಾದಿಸಿತ್ತು.

ಸಚಿವರು ಸಭೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಕೇಂದ್ರ ಸರ್ಕಾರ ಈ ಹಿಂದೆ ಸೂಚಿಸಿತ್ತು, ಆದರೆ ಪ್ರಕರಣ ನಿರ್ಧರಿಸಲು ನ್ಯಾಯಮಂಡಳಿ ರಚನೆಯಾಗಬೇಕು ಎಂದು ತಮಿಳುನಾಡು ಒತ್ತಾಯಿಸಿತ್ತು.

ಮಾತುಕತೆಮೂಲಕ ವಿವಾದ ಪರಿಹರಿಸಲು ವಿಳಂಬ ಆಗಿರುವುದಕ್ಕೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರವನ್ನು 2022ರಲ್ಲಿ ತರಾಟೆಗೆ ತೆಗೆದುಕೊಂಡಿತ್ತು. ಅದಕ್ಕೂ ಮೊದಲು
ಜನವರಿ 2019ರಲ್ಲಿ ಸಮಸ್ಯೆಯನ್ನು ಪರಿಹರಿಸಲು ನ್ಯಾಯಮಂಡಳಿ ರಚಿಸುವಂತೆ ತಮಿಳುನಾಡು ಸರ್ಕಾರ ಮನವಿ ಸಲ್ಲಿಸಲು ನ್ಯಾಯಾಲಯ ಅನುಮತಿ ನೀಡಿತ್ತು. ಮೇ ತಿಂಗಳಲ್ಲಿ ಸುಪ್ರೀಂಕೋರ್ಟ್ ಮತ್ತೊಮ್ಮೆ ಗಡುವು ವಿಸ್ತರಿಸಿತ್ತು.

ಪೆನ್ನಾರ್‌ ಜಲವಿವಾದ ನ್ಯಾಯಮಂಡಳಿ ರಚನೆಗೆ ಸಂಬಂಧಿಸಿದ ಪ್ರಸ್ತಾವನೆಗೆ ಅನುಮೋದನೆಗಾಗಿ ಕಳುಹಿಸಲಾಗಿದ್ದರೂ ಕೇಂದ್ರ ಸಚಿವ ಸಂಪುಟ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು 2023ರಲ್ಲಿ ಕೇಂದ್ರ ಜಲಶಕ್ತಿ ಸಚಿವಾಲಯ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು.

Related Posts

Leave a Reply

Your email address will not be published. Required fields are marked *