Menu

ಪವಿತ್ರಾಗೌಡ ಮನೆಯೂಟಕ್ಕೆ ಹೈಕೋರ್ಟ್‌ ಕೊಕ್‌

ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ನಟಿ ಪವಿತ್ರಾ ಗೌಡ ಅವರಿಗೆ ಕೆಳಹಂತದ ನ್ಯಾಯಾಲಯ ನೀಡಿದ್ದ ‘ಮನೆಯೂಟ’ ಸೌಲಭ್ಯ ರದ್ದುಪಡಿಸಿ, ಜೈಲಿನಲ್ಲೇ ಸಿದ್ಧವಾಗುವ ಆಹಾರವನ್ನೇ ಸೇವಿಸಬೇಕು ಎಂದು ಹೈಕೋರ್ಟ್ ಆದೇಶ ಹೊರಡಿಸಿದೆ.

2024ರ ಜೂನ್‌ ಎಂಟರಂದು ಬೆಂಗಳೂರಿನಲ್ಲಿ ದರ್ಶನ್‌ ಮತ್ತು ಗ್ಯಾಂಗ್‌ ರೇಣುಕಾಸ್ವಾಮಿಯ  ಕೊಲೆ ಮಾಡಿ ಜೈಲು ಸೇರಿದೆ.

ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯವು ಆರೋಪಿಗಳಾದ ಪವಿತ್ರಾ ಗೌಡ ಸೇರಿದಂತೆ ಲಕ್ಷ್ಮಣ್ ಹಾಗೂ ನಾಗರಾಜ್ ಅವರಿಗೆ ಜೈಲಿನಲ್ಲಿ ಮನೆಯೂಟ ಸೇವಿಸಲು ಅನುಮತಿ ನೀಡಿತ್ತು. ಈ ಆದೇಶದ ಅನ್ವಯ ಆರೋಪಿಗಳಿಗೆ ಮನೆಯಿಂದ ಆಹಾರ ಕಳುಹಿಸುವ ವ್ಯವಸ್ಥೆ ಮಾಡಲಾಗಿತ್ತು. ಈ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಹಾಗೂ ಕಾರಾಗೃಹ ಇಲಾಖೆ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದವು. ವಿಶೇಷ ಸೌಲಭ್ಯ ನೀಡಲು ಸೂಕ್ತ ಕಾರಣಗಳಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.

ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಜಸ್ಟಿಸ್ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿ, ಚಾರಣೆ ಬಳಿಕ ಕೆಳಹಂತದ ನ್ಯಾಯಾಲಯದ ಆದೇಶವನ್ನು ವಜಾಗೊಳಿಸಿದೆ. ಕೈದಿಗೆ ಮನೆಯೂಟ ನೀಡಬೇಕಾದರೆ ಬಲವಾದ ವೈದ್ಯಕೀಯ ಕಾರಣಗಳು ಇರಬೇಕು. ವೈದ್ಯಕೀಯ ತಜ್ಞರ ಸಲಹೆ ಇಲ್ಲದೆ ಸುಮ್ಮನೆ ಮನೆಯೂಟಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ವೈಯಕ್ತಿಕ ಇಚ್ಛೆ ಅಥವಾ ಸಾಮಾನ್ಯ ಕಾರಣಗಳನ್ನು ಆಧಾರವನ್ನಾಗಿ ಮಾಡಿಕೊಂಡು ಜೈಲಿನ ನಿಯಮಗಳನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಪೀಠ ತಿಳಿಸಿದೆ.

ಆರೋಪಿಗಳು ಜೈಲಿಗೆ ಸೇರಿದ ಬಳಿಕ, ಜೈಲಿನ ನಿಯಮಗಳಿಗೆ ಬದ್ಧರಾಗಿರಬೇಕು. ಎಲ್ಲ ಕೈದಿಗಳಿಗೂ ಒಂದೇ ನಿಯಮ ಅನ್ವಯಿಸಬೇಕು. ವಿಶೇಷ ಸೌಲಭ್ಯ ನೀಡುವಲ್ಲಿ ಕಾನೂನು ಮಿತಿಗಳಿವೆ ಎಂದು ಕೋರ್ಟ್‌ ಸ್ಪಷ್ಟಪಡಿಸಿದೆ. ರಾಜ್ಯ ಸರ್ಕಾರ ಹಾಗೂ ಕಾರಾಗೃಹ ಇಲಾಖೆಯ ಪರ ವಕೀಲರು, ಜೈಲಿನೊಳಗಿನ ಶಿಸ್ತು ಮತ್ತು ಸಮಾನತೆ ಕಾಪಾಡಲು ಎಲ್ಲ ಕೈದಿಗಳಿಗೆ ಒಂದೇ ರೀತಿಯ ಸೌಲಭ್ಯ ಇರಬೇಕು ಎಂದು ವಾದಿಸಿದ್ದರು. ವೈದ್ಯಕೀಯ ಅವಶ್ಯಕತೆ ಇಲ್ಲದೆ ಮನೆಯೂಟಕ್ಕೆ ಅವಕಾಶ ನೀಡುವುದು ಇತರ ಕೈದಿಗಳ ನಡುವೆ ಅಸಮಾನತೆ ಉಂಟುಮಾಡಬಹುದು ಎಂದು ಆತಂಕ ವ್ಯಕ್ತಪಡಿಸಿದ್ದರು.

ಪ್ರಕರಣದ ತನಿಖಾಧಿಕಾರಿ ವಿರುದ್ಧ ಪ್ರಕರಣದ ಆರೋಪಿ ಪರ ವಕೀಲರು ಕೋರ್ಟ್‌ಗೆ ಹೋಗಿದ್ದಾರೆ. ಮಹಜರು ಸಂದರ್ಭದಲ್ಲಿ ತೆಗೆದ ಚಿತ್ರಣ ಬದಲಾಗಿದೆ. ಚಾರ್ಜ್‌ ಶೀಟ್‌ನಲ್ಲಿ ಉಲ್ಲೇಖಿಸಿದ ರೀತಿ ಇಲ್ಲ. ಹಾಗಾಗಿ ತನಿಖಾಧಿಕಾರಿ ಮೇಲೆ ಪ್ರಕರಣ ದಾಖಲಾಗಬೇಕು ಎಂದು ಕೋರಿದ್ದಾರೆ. ತನಿಖಾಧಿಕಾರಿ ಮೇಲೆ ಪ್ರಕರಣ ದಾಖಲಾದರೆ ಇಡೀ ಪ್ರಕರಣ ತಿರುವು ಪಡೆದುಕೊಳ್ಳುತ್ತದೆ.

Related Posts

Leave a Reply

Your email address will not be published. Required fields are marked *