Tuesday, February 25, 2025
Menu

ಹಗಲಿರುಳು ಶ್ರಮಿಸುವವರಿಗೆ ಮಾತ್ರ ಪಕ್ಷದ ಜವಾಬ್ದಾರಿ: ಡಿ.ಕೆ. ಶಿವಕುಮಾರ್‌

ದೆಹಲಿಗೆ ತೆರಳುವ ಮುನ್ನ ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್‌ ಪ್ರತಿಕ್ರಿಯೆ ನೀಡಿ, ಪದಾಧಿಕಾರಿಗಳ ಪಟ್ಟಿಯಲ್ಲಿ ಕೆಲವು ಮಂತ್ರಿಗಳ ಆಪ್ತರನ್ನು ಕೈಬಿಡಲಾಗಿದೆ ಎಂಬ ಚರ್ಚೆ ಇದೆ ಎಂದು ಕೇಳಿದಾಗ, ಯಾವ ಚರ್ಚೆ, ನಿಮ್ಮ ಬಳಿ ಮಾತಾಡಿರಬಹುದು. ನನ್ನ ಬಳಿ ಯಾರೂ ಮಾತನಾಡಿಲ್ಲ. ನಮಗೆ ಕೆಲಸ ಮಾಡುವವರು ಬೇಕು. ಅವರಿಗೆ ಜವಾಬ್ದಾರಿ ಕೊಟ್ಟರೆ ತಕ್ಕ ಫಲಿತಾಂಶ ಬರಬೇಕು. ನಮ್ಮ ಸುತ್ತ ಗಿರಿಗಿಟ್ಲೆಯಂತೆ ಸುತ್ತುತ್ತಿದ್ದರೆ ಆಗುವುದಿಲ್ಲ. ತಾಲೂಕಿನಲ್ಲಿ ಕೂತು ಅಲ್ಲಿರುವ ಸಮಸ್ಯೆ ಬಗೆಹರಿಸಬೇಕು. ಫಲಿತಾಂಶ ಬರುವ ನಾಯಕತ್ವಕ್ಕೆ ಮಾತ್ರ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ಪದಾಧಿಕಾರಿಗಳ ಪಟ್ಟಿಯನ್ನು ಹೈಕಮಾಂಡ್ ನಾಯಕರಿಗೆ ನೀಡುತ್ತೀರಾ ಎಂದು ಕೇಳಿದಾಗ, ಸದ್ಯ ಇಲ್ಲ. ಪಟ್ಟಿ ಸಿದ್ಧವಾಗಿದ್ದು, ಯಾರಿಗೆ ಆಸಕ್ತಿ ಇಲ್ಲ ಅವರ ಜಾಗಕ್ಕೆ ಬೇರೆಯವರನ್ನು ನೇಮಿಸಲಾಗುವುದು. ಪಕ್ಷ ಸಂಘಟನೆ ವಿಚಾರದಲ್ಲಿ ನಮಗೆ ದಿನವಿಡೀ ಸ್ಥಳೀಯ ಮಟ್ಟದಲ್ಲಿ ಕೆಲಸ ಮಾಡುವವರು ಬೇಕು. ಬೇರೆಯವರ ಒತ್ತಡದ ಮೇರೆಗೆ ನೇಮಕ ಮಾಡಿಕೊಂಡು ಸಮಯ ವ್ಯರ್ಥ ಮಾಡುವುದರಲ್ಲಿ ಪ್ರಯೋಜನವಿಲ್ಲ. ಕೆಲಸ ಮಾಡುವವರಿಗೆ ಅವಕಾಶ ನೀಡಿ ಎಂದು ಎಐಸಿಸಿ ಆದೇಶ ನೀಡಿದೆ. ಈ ವಿಚಾರವಾಗಿ ನಾವು ವರದಿ ತರಿಸಿಕೊಂಡಿದ್ದು, ಸರಿಯಾಗಿ ಕೆಲಸ ಮಾಡುವವರಿಗೆ ಜವಾಬ್ದಾರಿ ನೀಡಲಾಗುವುದು. ಮೀಸಲಾತಿ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಆದ್ಯತೆ ನೀಡಿ ಅವರನ್ನು ತಯಾರಿ ಮಾಡಲಾಗುತ್ತಿದೆ. ಈ ವಿಚಾರವಾಗಿ ಮಂತ್ರಿಗಳ ಅಭಿಪ್ರಾಯ ಪಡೆಯುತ್ತಿದ್ದು, ಈ ವಾರವೇ ಈ ಪಟ್ಟಿ ಅಂತಿಮಗೊಳಿಸಲಾಗುವುದು ಎಂದು ಹೇಳಿದರು.

ದೆಹಲಿ ಭೇಟಿ ಬಗ್ಗೆ ಕೇಳಿದಾಗ, ರಾಜಸ್ಥಾನದಲ್ಲಿ ನಡೆದ ಜಲಶಕ್ತಿ ಸಮ್ಮೇಳನದಲ್ಲಿ ನಾನು ರಾಜ್ಯದ ನೀರಾವರಿ ಯೋಜನೆಗಳ ಪ್ರಸ್ತಾಪ ಮಾಡಿದ್ದೆ. ನೀರಾವರಿ ವಿಚಾರದಲ್ಲಿ ನಮ್ಮ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ತಿಳಿಸಿದ್ದೆ. ಕೆಲವು ಯೋಜನೆಗೆ ಘೋಷಣೆ ಮಾಡಿದ ಹಣ ಬಿಡುಗಡೆ ಮಾಡಿಲ್ಲ, ಮತ್ತೆ ಕೆಲವು ಯೋಜನೆಗಳಿಗೆ ಅನುಮತಿ ನೀಡಿಲ್ಲ. ಈ ವಿಚಾರಗಳನ್ನು ಪ್ರಸ್ತಾಪಿಸಿದಾಗ ಸಚಿವರು ರಾಜ್ಯದ ನೀರಾವರಿ ವಿಚಾರವಾಗಿ ಪ್ರತ್ಯೇಕ ಸಭೆ ಮಾಡುವುದಾಗಿ ಭರವಸೆ ನೀಡಿ ಸಮಯ ನಿಗದಿ ಮಾಡಿದ್ದರು. 25ರಂದು (ಇಂದು) ಬೆಳಗ್ಗೆ 11 ಗಂಟೆಗೆ ಕೇಂದ್ರ ಸಚಿವರು ಸಭೆ ನಿಗದಿ ಮಾಡಿದ್ದರು. ಒಂದು ದಿನ ಮುಂಚಿತವಾಗಿ ನಮ್ಮ ಇಲಾಖೆ ಅಧಿಕಾರಿಗಳನ್ನು ದೆಹಲಿಗೆ ಕಳುಹಿಸಿ ಪೂರ್ವಭಾವಿ ಸಭೆ ಮಾಡಲಾಗಿದೆ. ಈ ಸಭೆಯಲ್ಲಿ ನಮ್ಮ ನೀರಾವರಿ ಯೋಜನೆಗಳಿಗೆ ಅಗತ್ಯವಿರುವ ಅನುಮತಿ ನೀಡುವಂತೆ ಮನವಿ ಮಾಡುತ್ತೇನೆ ಎಂದು ತಿಳಿಸಿದರು.

ಬೆಳಗಾವಿಯಲ್ಲಿ ಮರಾಠಿಗರ ದಾಳಿ ವಿಚಾರವಾಗಿ ಕೇಳಿದಾಗ, ಗೃಹ ಸಚಿವರು, ಸಾರಿಗೆ ಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಈ ವಿಚಾರವನ್ನು ನಿಭಾಯಿಸುತ್ತಿದ್ದಾರೆ. ಅವರು ಎಲ್ಲವನ್ನು ನೋಡಿಕೊಳ್ಳುತ್ತಾರೆ ಎಂದರು.

Related Posts

Leave a Reply

Your email address will not be published. Required fields are marked *