ಕೆಪಿಸಿಸಿ ಕಾರ್ಯಾಧ್ಯಕ್ಷರಿಗೆ ಕೊಂಬಿದೆಯೇ ಇಲ್ಲವೇ ಎಂಬುದನ್ನು ಪಕ್ಷ ತೀರ್ಮಾನ ಮಾಡುತ್ತದೆ ಎಂದು ಡಿ.ಕೆ ಸುರೇಶ್ ಹೇಳಿದ್ದಾರೆ. ಸದಾಶಿವನಗರ ನಿವಾಸದ ಬಳಿ ಕೆಪಿಸಿಸಿ ಕಾರ್ಯಾಧ್ಯಕ್ಷರಿಗೆ ಕೊಂಬಿದೆಯಾ ಎಂಬ ರಾಜಣ್ಣ ಹೇಳಿಕೆ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಹೀಗೆ ಪ್ರತಿಕ್ರಿಯೆ ನೀಡಿದರು.
ನಾಲ್ಕೈದು ಸಚಿವರು ಡಿ.ಕೆ. ಶಿವಕುಮಾರ್ ಅವರನ್ನು ಟಾರ್ಗೆಟ್ ಮಾಡಿ ಮಾತನಾಡುತ್ತಿದ್ದಾರೆ ಎಂದು ಕೇಳಿದಾಗ, “ಅದೆಲ್ಲಾ ಗೊತ್ತಿಲ್ಲಾ. ಎಲ್ಲರೂ ಸೇರಿ ಒಳ್ಳೆಯದನ್ನು ಬಯಸುತ್ತಿದ್ದು ಒಳ್ಳೆಯದೇ ಆಗುತ್ತದೆ. ಯಾರಿಗಾದರೂ ಒಳ್ಳೆಯದಾಗಬೇಕಾದರೆ ಹತ್ತಾರು ಜನರ ಪೆಟ್ಟು ಬೀಳಬೇಕು. ಅದನ್ನು ನಾವು ತಪ್ಪಾಗಿ ತಿಳಿಯಬಾರದು, ಅದನ್ನು ಪ್ರಸಾದವಾಗಿ ಸ್ವೀಕರಿಸಬೇಕು” ಎಂದರು. ಪ್ರಸಾದ ಹೆಚ್ಚಾಗಿ ಸ್ವೀಕರಿಸಿದರೆ ಹೊಟ್ಟೆ ನೋವು ಬರುವುದಿಲ್ಲವೇ ಎಂಬ ಪ್ರಶ್ನೆಗೆ, “ನಮಗೆ ಆ ರೀತಿ ಬರುವುದಿಲ್ಲ. ನಾವು ಹಳ್ಳಿಯಲ್ಲಿ ಬೆಳೆದಿದ್ದೇವೆ” ಎಂದು ಮಾರ್ಮಿಕವಾಗಿ ಉತ್ತರಿಸಿದರು.
ಡಿ.ಕೆ. ಶಿವಕುಮಾರ್ ಎಐಸಿಸಿ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಸಚಿವ ರಾಜಣ್ಣ ಅವರ ಹೇಳಿಕೆ ಬಗ್ಗೆ ಕೇಳಿದಾಗ, ರಾಜಣ್ಣ ಅವರಿಗೆ ಡಿ.ಕೆ. ಶಿವಕುಮಾರ್ ಅವರ ಮೇಲೆ ಗೌರವ, ಪ್ರೀತಿ ಜಾಸ್ತಿ. ಹೀಗಾಗಿ ಆ ರೀತಿ ಹೇಳಿದ್ದಾರೆ ಎಂದು ಸುರೇಶ್ ಉತ್ತರಿಸಿದರು. ಪ್ರೀತಿ ಜಾಸ್ತಿ ಆದರೆ ಕಷ್ಟ ಆಗುತ್ತಲ್ಲವೇ ಎಂದು ಕೇಳಿದಾಗ, ಶಿವಕುಮಾರ್ ಅವರಿಗೆ ಒಳ್ಳೆಯದಾಗಬೇಕು ಎಂದು ಬಯಸಿದಾಗ ಏನು ಮಾಡಲು ಆಗುತ್ತದೆ ಎಂದು ಮರು ಪ್ರಶ್ನಿಸಿದರು.
ರಾಜಣ್ಣ ಅವರ ಮಾತಿಗೆ ಮಿತಿ ಇಲ್ಲವೇ, ಇದರಿಂದ ಪಕ್ಷಕ್ಕೆ ಮುಜುಗರವಾಗುವುದಿಲ್ಲ ಎಂಬ ಪ್ರಶ್ನೆಗೆ, ಈ ಬಗ್ಗೆ ನನಗೆ ಗೊತ್ತಿಲ್ಲ, ಮುಖ್ಯಮಂತ್ರಿಗಳು ಹಾಗೂ ಎಐಸಿಸಿ ಅಧ್ಯಕ್ಷರು, ರಾಜ್ಯ ಉಸ್ತುವಾರಿ ಅವರನ್ನು ಕೇಳಿ ಎಂದು ಹೇಳಿದರು. ನೀವು ಬಹಳ ಸೈಲೆಂಟಾಗಿದ್ದೀರಾ ಎಂದು ಕೇಳಿದಾಗ, “ಇದು ಮಳೆ ಬರುವ ಕಾಲ ಅಲ್ಲ, ಮಳೆ ಬರಲು ಇನ್ನ ಕಾಲಾವಕಾಶವಿದೆ” ಎಂದು ಸುರೇಶ್ ಉತ್ತರಿಸಿದರು.
ಖಾಲಿ ಇಲ್ಲದ ಹುದ್ದೆಗೆ ಈಗ ಚರ್ಚೆ ಯಾಕೆ?
ಸಿಎಂ ಬದಲಾವಣೆಯಾದರೆ ಶಾಸಕರ ಅಭಿಪ್ರಾಯ ಪಡೆಯಲೇಬೇಕು ಎಂಬ ಪಟ್ಟಿನ ಬಗ್ಗೆ ಕೇಳಿದಾಗ, “ಆ ಬಗ್ಗೆ ನನಗೆ ಗೊತ್ತಿಲ್ಲ. ಹೈಕಮಾಂಡ್ ನಾಯಕರನ್ನು ಕೇಳಿ. ಈಗ ನಮ್ಮ ನಾಯಕರಾದ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾರೆ. ಖಾಲಿ ಇಲ್ಲದ ಸ್ಥಾನಕ್ಕೆ ಈಗ ಚರ್ಚೆ ಯಾಕೆ? ಚರ್ಚೆ ಹುಟ್ಟು ಹಾಕಿದ್ದು ಯಾರು? ನನಗೆ ಗೊತ್ತಿಲ್ಲ” ಎಂದರು.
ಪವರ್ ಶೇರಿಂಗ್ ಇಲ್ಲವೇ ಎಂದು ಕೇಳಿದಾಗ, “ನಾನು ಈ ವಿಚಾರದಿಂದ ಹೊರಗೆ ಇದ್ದೇನೆ. ನನಗೆ ಅದರ ಬಗ್ಗೆ ಗೊತ್ತಿಲ್ಲ. ನಾನ್ಯಾಕೆ ಅದರ ಬಗ್ಗೆ ಮಾತನಾಡಲಿ. ಈ ಸಿನಿಮಾದಲ್ಲಿ ಇರುವವರನ್ನು ಕೇಳಿ. ನಾನು ಈ ಸಿನಿಮಾದಲ್ಲಿ ಇಲ್ಲ” ಎಂದು ಸ್ಪಷ್ಟಪಡಿಸಿದರು.
ದೆಹಲಿಗೆ ಹೋದಾಗ ನಾಯಕರ ಭೇಟಿ ಮಾಡುವುದು ಸಹಜ: ಪರಮೇಶ್ವರ್ ಅವರು ದೆಹಲಿಯಲ್ಲಿ ಹೈಕಮಾಂಡ್ ಭೇಟಿ ಮಾಡುತ್ತಿರುವ ಬಗ್ಗೆ ಕೇಳಿದಾಗ, “ದೆಹಲಿಗೆ ಪರಮೇಶ್ವರ್, ಶಿವಕುಮಾರ್, ಸಿದ್ದರಾಮಯ್ಯ, ಬೇರೆ ಸಚಿವರು ಹೋಗುತ್ತಾರೆ. ದೆಹಲಿಯಲ್ಲಿ ಹತ್ತಾರು ಕೆಲಸ ಕಾರ್ಯಗಳು ಇರುತ್ತವೆ. ಕೇಂದ್ರ ಸರ್ಕಾರದ ಜತೆ ಮಾತುಕತೆ ಮಾಡುವುದಿರುತ್ತದೆ, ದೆಹಲಿಗೆ ಹೋದಾಗ, ಪಕ್ಷದ ನಾಯಕರನ್ನು ಭೇಟಿ ಮಾಡುವುದು ಸಹಜ” ಎಂದರು.
ದಲಿತ ಶಾಸಕರುಗಳ ಡಿನ್ನರ್ ಸಭೆಗೆ ಶಿವಕುಮಾರ್ ಅವರು ಬ್ರೇಕ್ ಹಾಕಿದರು, ಹೀಗಾಗಿ ಸಮಾವೇಶಕ್ಕೆ ಅನುಮತಿ ನೀಡಿ ಎಂದು ಕೇಳಿದಾಗ, “ನನಗೆ ಅದರ ಬಗ್ಗೆ ಮಾಹಿತಿ ಇಲ್ಲ. ನಾನು ಬಹಳ ಸಣ್ಣವನು. ಈ ಬಗ್ಗೆ ದೊಡ್ಡವರನ್ನೇ ಕೇಳಿ” ಎಂದು ತಿಳಿಸಿದರು.
ಕೆಎಂಎಫ್ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೀರಾ ಎಂದು ಕೇಳಿದಾಗ, “ನಾನು ಯಾವುದೇ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿಲ್ಲ. ಜನ ನನಗೆ ವಿಶ್ರಾಂತಿ ನೀಡಿದ್ದಾರೆ” ಎಂದರು.
ನೀವು ಕೂಡ ಡೈರಿಗೆ ಹಾಲು ಹಾಕುತ್ತಿದ್ದೀರಿ ಎಂದು ಕೇಳಿದಾಗ, “ನಾನು ಹೊಸತಾಗಿ ಹಾಲು ಹಾಕುತ್ತಿಲ್ಲ. ಇಲ್ಲಿಯವರೆಗೂ ನಮ್ಮ ತಾಯಿ ನನ್ನ ಹೆಸರಿನಲ್ಲಿ ಹಾಲು ಹಾಕುತ್ತಿದ್ದರು. ಈಗ ನಾನು ಅದನ್ನು ಮುಂದುವರಿಸುತ್ತಿದ್ದೇನೆ. ಹಾಲು ಉತ್ಪಾದನೆಯನ್ನು ನಾನು ಈಗ ಆರಂಭಿಸಿಲ್ಲ. ಶಿವಕುಮಾರ್ ಅವರು ಸಹಕಾರ ಸಚಿವರಾಗಿದ್ದಾಗಲೇ ಡೈರಿ ಮಾಡಲು ಮುಂದಾಗಿದ್ದೆ. ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂಬ ಉದ್ದೇಶದಿಂದ ಒಂದೇ ದಿನ 40-50 ಡೈರಿ ಆರಂಭಿಸಿದ್ದೆವು ಎಂದು ಮಾಹಿತಿ ನೀಡಿದರು.
ಹಿಂದೆ ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ಬಮುಲ್ ವತಿಯಿಂದ ಕನಕಪುರದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಮೆಘಾ ಡೈರಿ ಆರಂಭಿಸಿದ್ದೇವೆ. ಆಗಾಗಾ ಹಾಲು ಉತ್ಪಾದನಾ ವಲಯದ ಆಗುಹೋಗುಗಳನ್ನು ನಾನು ಪರಿಶೀಲಿಸುತ್ತೇನೆ. ರೇಷ್ಮೆ ಹಾಗೂ ಹಾಲಿನಲ್ಲಿ ರೈತರ ಬದುಕು ಅಡಗಿದೆ. ಈ ಎರಡು ಕ್ಷೇತ್ರದ ಮೇಲೆ ನಮ್ಮ ಜಿಲ್ಲೆ ಜನ ಅವಲಂಭಿತವಾಗಿದ್ದು, ಇದಕ್ಕೆ ಅಗತ್ಯವಿರುವ ಪ್ರೋತ್ಸಾಹ, ಮಾರ್ಗದರ್ಶನಗಳನ್ನು ಮೊದಲಿನಿಂದಲೂ ಮಾಡಿಕೊಂಡು ಬಂದಿದ್ದು, ಇದನ್ನು ಮಾಡುತ್ತಿದ್ದೇನೆ ಎಂದರೆ ಚುನಾವಣೆಗೆ ನಿಲ್ಲುತ್ತೇನೆ ಎಂಬ ಅರ್ಥವಲ್ಲ. ಚುನಾವಣೆಗೆ ನಿಲ್ಲುವ ಇರಾದೆಯೂ ನನ್ನದಲ್ಲ ಎಂದು ಸ್ಪಷ್ಟಪಡಿಸಿದರು.